ಬುಧವಾರ, ಸೆಪ್ಟೆಂಬರ್ 18, 2019
25 °C
ರೇಷ್ಮೆ ಹುಳು ಸಾಕಣೆದಾರರ ಅಲೆದಾಟ

ಗಾಳಿಯಿಂದ ಹಿಪ್ಪುನೇರಳೆ ಸೊಪ್ಪಿಗೆ ಬರ

Published:
Updated:
Prajavani

ವಿಜಯಪುರ: ಮಳೆ ಕೊರತೆಯಿಂದ ರೇಷ್ಮೆ ಬೆಳೆ ಕೈಕೊಡಲಾರಂಭಿಸಿದೆ. ರೇಷ್ಮೆಗೂಡಿನ ಬೆಲೆ ಕುಸಿತ ಒಂದೆಡೆಯಾದರೆ, ಗಾಳಿಗೆ ಹಿಪ್ಪುನೇರಳೆ ಸೊಪ್ಪು ಮುದುಡುವ ರೋಗಕ್ಕೆ ಒಳಗಾಗುತ್ತಿದೆ. ರೇಷ್ಮೆಹುಳು ಸಾಕಣೆದಾರರು ಉತ್ಕೃಷ್ಟ ಹಿಪ್ಪುನೇರಳೆ ಸೊಪ್ಪಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಿಸಿದರೂ ಉತ್ಕೃಷ್ಟ ಹಿಪ್ಪುನೇರಳೆ ಸೊಪ್ಪು ಸಿಗದಂತಾಗಿದೆ. ಹಿಪ್ಪುನೇರಳೆ ಸೊಪ್ಪಿಗಾಗಿ ಹುಳು ಸಾಕಣೆದಾರರು 20 ಕಿ.ಮೀ ದೂರ ದ್ವಿಚಕ್ರ ವಾಹನಗಳಲ್ಲಿ ಹುಡಕಾಟ ಆರಂಭಿಸಿದ್ದಾರೆ. ಒಂದು ಎಕರೆ ರೋಗ ರಹಿತ ರೇಷ್ಮೆ ತೋಟದಲ್ಲಿ 125ರಿಂದ 150 ರೇಷ್ಮೆಮೊಟ್ಟೆ ಮೇಯಿಸಿ ಉತ್ತಮ ಇಳುವರಿಯ ರೇಷ್ಮೆಗೂಡು ಪಡೆಯಬಹುದಾಗಿದೆ. ಆದರೆ, ಸೊಪ್ಪಿನ ಚಿಗುರು ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಸತ್ವರಹಿತ ಸೊಪ್ಪು ತಿನ್ನುವ ರೇಷ್ಮೆ ಹುಳುಗಳಿಂದ ಉತ್ತಮ ಇಳುವರಿ ಪಡೆಯಲಾಗುತ್ತಿಲ್ಲ. ರೈತರಿಗೆ ಕನಿಷ್ಠ ಶೇ50ರಿಂದ 60ರಷ್ಟು ಇಳುವರಿ ಕಡಿಮೆಯಾಗಿ ನಷ್ಟ ಅನುಭವಿಸುವಂತಾಗಿದೆ ಎಂದು ರೈತ ಸಂಗಪ್ಪ ಅಳಲು ತೋಡಿಕೊಂಡರು.

ಗಾಳಿಗೆ ಎಲೆಗಳು ಮುದುಡುವ ರೋಗ ಬಾಧೆಗೆ ಒಳಗಾಗುತ್ತಿವೆ. ರೇಷ್ಮೆ ಹುಳ ಸಾಕಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ರೇಷ್ಮೆಹುಳಕ್ಕೆ ಅಗತ್ಯ ಪ್ರಮಾಣದ ಸೊಪ್ಪು ಸಿಗುತ್ತದೆಯೋ ಇಲ್ಲವೋ ಎನ್ನುವ ಭೀತಿ ರೈತರದ್ದು. ಸಮೀಪದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಹಲವು ತಾಲ್ಲೂಕುಗಳತ್ತ ಉತ್ಕೃಷ್ಟ ಹಿಪ್ಪುನೇರಳೆ ಸೊಪ್ಪಿಗಾಗಿ ಹುಡುಕಾಟಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ರೈತ ಮುನಿಕೃಷ್ಣಪ್ಪ.

ಬೆಲೆ ಏರಿಕೆ ಆತಂಕ: ಭೂಮಿಯಲ್ಲಿ ತೇವಾಂಶ ಇಲ್ಲದೆ ಎಲೆಯಲ್ಲಿನ ನೀರಿನ ಅಂಶವನ್ನೆಲ್ಲಾ ಗಾಳಿ ಹೀರಿಕೊಳ್ಳುತ್ತಿದೆ. ಸೊಪ್ಪಿನ ಎಲೆಗಳು ಮುದುಡಿಹೋಗಿ ಸತ್ವಹೀನವಾಗುತ್ತಿರುವುದರಿಂದ ಈ ಸೊಪ್ಪು ರೇಷ್ಮೆ ಹುಳಗಳಿಗೆ ಹಾಕಿದರೆ ಗೂಡಿನ ಇಳುವರಿ ಕಡಿಮೆಯಾಗಲಿದೆ. ಸತ್ವಹೀನ ಸೊಪ್ಪಿನ ಒಂದು ಮೂಟೆಗೆ ₹400 ರಿಂದ ₹450 ರೂಪಾಯಿ ಇದೆ. ಉತ್ಕೃಷ್ಟವಾದ ಸೊಪ್ಪು ಬೇಕಾದರೆ ಮುಂದಿನ ದಿನಗಳಲ್ಲಿ ₹600 ರಿಂದ ₹700ಕ್ಕೆ ಏರಿಕೆಯಾಗುವ ಆತಂಕ ಈಗಲೇ ಕಾಡುತ್ತಿದೆ ಎಂದರು.

ಗೂಡಿಗೆ ವೈಜ್ಞಾನಿಕ ಬೆಲೆ ಇಲ್ಲ: ರೇಷ್ಮೆ ಗೂಡಿನ ಬೆಲೆ ಈಗ ₹370ರ ಸಮೀಪದಲ್ಲಿ ಹರಾಜಾಗುತ್ತಿದೆ. ಆದರೆ, ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

Post Comments (+)