ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಸಮಸ್ಯೆ ಹತ್ತಾರು- ಹುಸಿ ಭರವಸೆ ನೂರಾರು

ಚುನಾವಣೆ ಸಮಯದಲ್ಲಷ್ಟೇ ನೆನಪಾಗುವ ಯೋಜನೆಗಳು
Published 5 ಏಪ್ರಿಲ್ 2024, 5:05 IST
Last Updated 5 ಏಪ್ರಿಲ್ 2024, 5:05 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ವಿಧಾನಸಭೆ, ಲೋಕಸಭೆ ಚುನಾವಣೆಗಳು ಬಂದಾಗ ಮಾತ್ರ ತಾಲ್ಲೂಕಿನ ಜ್ವಲಂತ ಸಮಸ್ಯೆಗಳಾದ ಬಿಬಿಎಂಪಿ ಕಸ ವಿಲೇವಾರಿ, ಎತ್ತಿನಹೊಳೆ ಕುಡಿಯವ ನೀರಿನ ಯೋಜನೆ ಭೂ ಪರಿಹಾರ, ಕೈಗಾರಿಕೆಗಳ ಸ್ಥಾಪನೆಗಾಗಿ ಕೃಷಿ ಭೂಸ್ವಾಧೀನ ಕೈಬಿಡುವುದು ಸೇರಿದಂತೆ ಹತ್ತಾರು ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ನಿರಂತರ ಹುಸಿ ಭರವಸೆಗಳನ್ನು ನೀಡುತ್ತಾರೆ.

ಈ ಭರವಸೆಗಳನ್ನೇ ನಂಬಿ ಮತದಾರರೂ ಮತ ಚಲಾಯಿಸುತ್ತಾ ಬಂದಿದ್ದಾರೆ. ಚುನಾವಣೆ ಬರುತ್ತವೆ, ಹೋಗುತ್ತವೆ. ಆದರೆ, ತಾಲ್ಲೂಕಿನ ಸಮಸ್ಯೆಗಳಿಗೆ ಇದುವರೆಗೆ ತಾರ್ತಿಕ ಅಂತ್ಯ ಕಂಡುಕೊಳ್ಳಲಾಗಿಲ್ಲ.

2006ರಲ್ಲಿ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿ ಸಮೀಪ ಬಿಬಿಎಂಪಿ ಕಸವಿಲೇವಾರಿ ಘಟಕ ಟೆರ್ರಾ ಫಾರಂ ಪ್ರಾರಂಭವಾಯಿತು. ಆರಂಭದ ದಿನಗಳಲ್ಲಿ ಬೃಹತ್‌ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸದಿಂದ ಗೊಬ್ಬರ ತಯಾರಿಸಿ ರೈತರಿಗೆ ನೀಡಲಾಗುವುದು. ಈ ಕಸದಿಂದ ರೈತರ ಭೂಮಿ ಫಲವತ್ತಾಗುವ ಮೂಲಕ ಉತ್ತಮ ಫಸಲು ಬರುತ್ತದೆ ಎಂದು ಹೇಳಲಾಯಿತು.

ಆದರೆ, ವಾಸ್ತವ ಸ್ಥಿತಿಯೇ ಬೇರೆಯಾಗಿದ್ದು ಸೂಕ್ತ ನಿರ್ವಹಣೆ ಇಲ್ಲದೆ ಜಪಾನ್‌ ದೇಶದ ಹಿರೋಶಿಮಾ-ನಾಗಾಸಾಕಿ ಸ್ಥಿತಿಯೇ ಕಸದ ರಾಶಿಯ ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಬಂದಿತ್ತು. ಇದರ ವಿರುದ್ಧ ರೈತರು ನಡೆಸಿದ ಸತತ ಹೋರಾಟದ ಫಲವಾಗಿ ಟೆರ್ರಾ ಫಾರಂ ಕಸ ವಿಲೇವಾರಿ ಘಟಕ ಸ್ಥಗಿತವಾಯಿತು. ಆದರೆ ಇದೇ ಪ್ರದೇಶದಲ್ಲಿ ಹೊಸ ಭರವಸೆಯೊಂದಿಗೆ 2014ರಲ್ಲಿ ಮತ್ತೊಂದು ಕಸ ವಿಲೇವಾರಿ ಘಟಕ ಎಎಸ್‌ಜಿಪಿ ಪ್ರಾರಂಭವಾಯಿತು. 

‘ಈ ಕಸದ ವಿಲೇವಾರಿ ಘಟಕ ಸೃಷ್ಟಿಸಿದ ಅನಾಹುತಗಳ ವಿರುದ್ಧ ಸ್ಥಳೀಯ ಗ್ರಾಮಗಳ ಜನರು ನಡೆಸಿದ ಹೋರಾಟಗಳ ಸಂದರ್ಭದಲ್ಲೂ ಪಕ್ಷಬೇಧವಿಲ್ಲದೆ ಎಲ್ಲಾ ಸಚಿವರು ಕಸದ ರಾಶಿಯನ್ನು ವೀಕ್ಷಿಸಿದ್ದಾರೆ. ಆದರೆ, ಇದುವರೆಗೆ ಇಲ್ಲಿ ಕಸ ಬರುವುದನ್ನು ತಡೆದಿಲ್ಲ. ಸಮಸ್ಯೆಗೆ ಶಾಶ್ವತ ಪರಿಹಾರವು ದೊರೆತಿಲ್ಲ. ಈ ಭಾಗದಲ್ಲಿ ಅಂತರ್ಜಲ ಸಂಪೂರ್ಣವಾಗಿ ಕಲುಷಿತವಾಗಿದ್ದು ಕುಡಿಯುವ ನೀರನ್ನು ಬೇರೆಡೆಗಳಿಂದ ಸರಬರಾಜು ಮಾಡುವ ಸ್ಥಿತಿ ಉಂಟಾಗಿದೆ’ ಎನ್ನುತ್ತಾರೆ ಚಿಕ್ಕಬೆಳವಂಗಲ ಗ್ರಾಮದ ಮುಖಂಡ ಧರ್ಮೇಂದ್ರ.

ಎತ್ತಿನಹೊಳೆ ಕನಸು ನನಸಾಗುವುದೇ?

ತಾಲ್ಲೂಕಿನ ಸಾಸಲು ಹೋಬಳಿಯ ಮಚ್ಚೇನಹಳ್ಳಿ, ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲು ಗ್ರಾಮದ ಸಮೀಪ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಎತ್ತಿನಹೊಳೆಯಿಂದ ಬರುವ ನೀರನ್ನು ಸಂಗ್ರಹಿಸಿ ಕೆರೆಗಳಿಗೆ ತುಂಬಿಸುವ ಜಲಾಶಯ ಯೋಜನೆಗೆ ಭೂಸ್ವಾಧಿನಕ್ಕೆ ಅಧಿಸೂಚನೆ ಹೊರಡಿಸಲಾಯಿತು. ಆದರೆ, ದಿನ ಕಳೆದಂತೆ ಜಲಾಶಯದ ನೀರು ಸಂಗ್ರಹದ ಸಾಮರ್ಥ್ಯ ತಗ್ಗಿಸಿ ಈಗ 2 ಸಾವಿರ ಎಕರೆಗೆ ಇಳಿಸಲಾಗಿದೆ.

ಬೈರಗೊಂಡ್ಲು ಬದಲಿಗೆ ಸಾಸಲು ಹೋಬಳಿಯ ಲಕ್ಕೇನಹಳ್ಳಿ ಗ್ರಾಮದ ಸಮೀಪ ನೀರುಸಂಗ್ರಹದ ಜಲಾಶಯ ನಿರ್ಮಿಸುವ ಸಿದ್ಧತೆಗಳು ನಡೆದಿವೆ. ಆದರೆ ಅಧಿಕಾರಿಗಳು ರೈತರಿಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ. ಹಾಗಾಗಿ, ಗೊಂದಲವುಂಟಾಗಿದೆ ಎನ್ನುತ್ತಾರೆ  ಲಕ್ಕೇನಹಳ್ಳಿ ಗ್ರಾಮದ ರೈತ ವೀರೇಂದ್ರ.

ಈ ಭಾಗದ ಗ್ರಾಮಗಳಲ್ಲಿ ಜಲಾಶಯ ನಿರ್ಮಾಣದ ಸಲುವಾಗಿ ಸರ್ಕಾರದ ಅಭಿವೃದ್ದಿ ಕೆಲಸಗಳು ನಿಂತಿವೆ. ರೈತರು ಸಹ ತೋಟಗಳಲ್ಲಿ ಶಾಶ್ವತವಾದ ಬೆಳೆ ಬೆಳೆಯುವಂತಿಲ್ಲ. ಗ್ರಾಮಗಳಲ್ಲಿ, ತೋಟಗಳಲ್ಲಿ ಮನೆಗಳನ್ನು ಕಟ್ಟುವಂತಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು. 

ಎತ್ತಿನಹೊಳೆಗಾಗಿ ತುಮಕೂರು ಕಡೆಯಿಂದ ಸಾಸಲು ಹೋಬಳಿ ಮಾರ್ಗವಾಗಿ ತಾಲ್ಲೂಕನ್ನು ಹಾದುಹೋಗುತ್ತಿರುವ ಪೈಪ್‌ಲೈನ್‌ ಕಾಮಗಾರಿಯು ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಪೈಪ್‌ಲೈನ್‌ ಅಳವಡಿಸಲು ರೈತರಿಗೆ ಕೇವಲ ಬೆಳೆನಷ್ಟದ ಪರಿಹಾರ ನೀಡಲಾಗುತ್ತಿದೆಯೇ ವಿನಹ ಭೂ ಪರಿಹಾರ ನೀಡುತ್ತಿಲ್ಲ. ಭೂಪರಿಹಾರಕ್ಕೆ ಒತ್ತಾಯಿಸುವ ರೈತರ ಜಮೀನಿನಲ್ಲಿ ಪೈಪ್‌ಲೈನ್‌ ಅಳವಡಿಸದೆ, ಪ್ರಶ್ನೆ ಮಾಡದೇ ಇರುವ ರೈತರ ಜಮೀನು ಹಾಗೂ ಸರ್ಕಾರಿ ಜಮೀನಿನಲ್ಲಿ ಮಾತ್ರ ಪೈಪ್‌ಲೈನ್‌ ಹಾಕಲಾಗುತ್ತಿದೆ. ಎತ್ತಿನಹೊಳೆ ಯೋಜನೆ ಪ್ರಮಾಣಿಕವಾಗಿ ಜಾರಿ ಮಾಡುವ ಉದ್ದೇಶ ಜನಪ್ರತಿನಿಧಿಗಳಿಗೆ ಇದ್ದರೆ ಕಾನೂನು ರೀತಿಯಲ್ಲಿ ಜಮೀನು ಸ್ವಾಧೀನ ಮಾಡಿಕೊಂಡು ಪೈಪ್‌ಲೈನ್‌ ಅಳವಡಿಸಬೇಕು. ರೈತರಿಗೆ ಭರವಸೆ ನೀಡಿ ವಂಚಿಸುವ ಕೆಲಸ ಏಕೆ ಮಾಡಬೇಕು ಎಂದು ಪ್ರಶ್ನಿಸುತ್ತಾರೆ ವೀರೇಂದ್ರ.

ಇಎಸ್‌ಐ ಆಸ್ಪತ್ರೆ ಉದ್ಘಾಟನೆ ಎಂದು

ಸಿದ್ದರಾಮಯ್ಯ ಅವರು 2013ರಲ್ಲಿ ಪ್ರಥಮ ಬಾರಿಗೆ ಮುಖ್ಯಮಂತ್ರಿಗಳಾದ ಎರಡು ತಿಂಗಳಿಗೆ ಅರೆಹಳ್ಳಿಗುಡ್ಡದಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಶಂಕುಸ್ಥಾಪನೆಯಾದ 100 ಹಾಸಿಗೆ ಸಾಮರ್ಥ್ಯದ ‘ಇಎಸ್‌ಐ ಆಸ್ಪತ್ರೆ’ ಈಗ ಕಾಮಗಾರಿ ಪೂರ್ಣವಾಗಿ ಉದ್ಘಾಟನೆಗೆ ಸಿದ್ಧವಾಗಿ 10 ತಿಂಗಳು ಕಳೆದಿದ್ದರೂ ರಾಜಕೀಯ ಕಾರಣಗಳಿಂದಾಗಿ ಉದ್ಘಾಟನೆ ಭಾಗ್ಯ ಕಂಡಿಲ್ಲ. ಕಾರ್ಮಿಕರ ಬಳಕೆಗೆ ದೊರೆಯಬೇಕಿದ್ದ ಆಸ್ಪತ್ರೆ ಪಾಳು ಬಿದ್ದಿದೆ. ಆದರೆ, ಎಲ್ಲಾ ರಾಜಕೀಯ ಸಭೆಗಳಲ್ಲೂ ಆಸ್ಪತ್ರೆ ಕಟ್ಟಿಸಿದ್ದರ ಬಗ್ಗೆ, ಉದ್ಘಾಟನೆ ಬಗ್ಗೆ ಭರವಸೆಗಳ ದೊರೆಯುತ್ತಲೇ ಬರುತ್ತಿವೆ.

ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಗಳಿಂದ ಕಲುಷಿತ ನೀರು ಹರಿದು ಹೋಗಿ ಮಜರಾ ಹೊಸಹಳ್ಳಿ, ದೊಡ್ಡತುಮಕೂರು ಕೆರೆಗಳು ಸಂಪೂರ್ಣವಾಗಿ ಕಲುಷಿತವಾಗಿದ್ದು ಅಂತರ್ಜಲದಿಂದ ಕುಡಿಯುವ ನೀರು ಸಹ ದೊರೆಯದೆ ದೂರದ ಜಕ್ಕಲಮೊಡಗು ಜಲಾಶಯದ ನೀರನ್ನು ಟ್ಯಾಂಕರ್‌ಗಳ ಮೂಲಕ ತರಿಸಿಕೊಂಡು ಶುದ್ದೀಕರಿಸಿಕೊಂಡು ನೀರು ಕುಡಿಯುತ್ತಿದ್ದಾರೆ.

ಈ ಭಾಗದ ಗ್ರಾಮಗಳ ಜನರು ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದಾಗ ಮಾತ್ರ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡುತ್ತಾರೆ. ಆದರೆ ಸಮಸ್ಯೆಗೆ ಪರಿಹಾರ ಮಾತ್ರ ಇದುರೆಗೂ ದೊರೆತೇ ಇಲ್ಲ ಎನ್ನುವ ಆರೋಪ ದೊಡ್ಡತುಮಕೂರು ಗ್ರಾಮದ ರೈತ ವಸಂತಕುಮಾರ್‌ ಅವರದ್ದು.

ಇನ್ನು ತಾಲ್ಲೂಕಿಗೆ ಜಿಲ್ಲಾ ಆಸ್ಪತ್ರೆ, ಇಲ್ಲಿನ ನೇಕಾರರು ನೇಯುವ ಸೀರೆಗಳಿಗೆ ಬ್ರ್ಯಾಂಡ್‌ ಕಲ್ಪಿಸುವ ಹಾಗೂ ಸೀರೆಗಳ ಮಾರಾಟಕ್ಕೆ ಜವಳಿ ಇಲಾಖೆ ವತಿಯಿಂದ ವಾಣಿಜ್ಯ ಮಳಿಗೆ ನಿರ್ಮಾಣ, ದೊಡ್ಡಬಳ್ಳಾಪುರಕ್ಕೆ ಕಾವೇರಿ ನೀರು ತರುವುದು, ಬೆಂಗಳೂರಿಗೆ ಕೂಗಳತೆ ದೂರದಲ್ಲಿನ ನಗರಕ್ಕೆ ಮೆಟ್ರೊ ರೈಲು ಅಥವಾ ಹೊರವರ್ತುಲ ರೈಲು ಯೋಜನೆ, ಕೈಗಾರಿಕೆಗಳ ಸ್ಥಾಪನೆಗಾಗಿ ಬಾಶೆಟ್ಟಿಹಳ್ಳಿ ಪ್ರದೇಶದಲ್ಲಿ ಈಗಾಗಲೇ ಸ್ವಾಧೀನ ಮಾಡಿಕೊಂಡಿರುವ ಸಾವಿರಾರು ಎಕರೆ ಭೂಮಿ ಖಾಲಿಯಾಗಿಯೇ ಉಳಿದಿದೆ. ಆದರೆ ಕೈಗಾರಿಕೆ ಹೆಸರಿನಲ್ಲಿ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ರೈತರ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆ ಮಾತ್ರ ನಿಂತಿಲ್ಲ.

ಭೂಸ್ವಾಧೀನ ಮಾಡಿಕೊಳ್ಳುವಾಗ ಸರ್ಕಾರವೇ ರೂಪಿಸಿರುವ 2013ರ ಭೂಸ್ವಾಧೀನ ಕಾಯ್ದೆಯಂತೆ ನಡೆಯಬೇಕು ನಾಗದೇನಹಳ್ಳಿ, ಕೊನಘಟ್ಟ ಗ್ರಾಮಗಳ ರೈತರು ಧರಣಿ ಪ್ರಾರಂಭಿಸಿ 70 ದಿನಗಳು ಕಳೆದಿವೆ. ಆದರೆ, ಸಮಸ್ಯೆಗೆ ಪರಿಹಾರ ಮಾತ್ರ ಇನ್ನೂ ಪರಿಹಾರ ದೊರೆತಿಲ್ಲ.

ಒಟ್ಟಾರೆ ಚುನಾವಣೆಗಳಲ್ಲಿ ಮಾತ್ರ ಈ ಸಮಸ್ಯೆಗಳಿಗೆ ಹುಸಿ ಭರವಸೆಗಳನ್ನು ನೀಡುವ ಜನಪ್ರತಿನಿಧಿಗಳು, ಬಳಿಕ ಇತ್ತ ತಲೆ ಹಾಕುವುದೂ ಇಲ್ಲ. 

ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಬಿಬಿಎಂಪಿ ಕಸ ವಿಲೇವಾರಿ ಘಟಕದಲ್ಲಿ ರಾಶಿ ಬಿದ್ದಿರುವ ಕಸ (ಸಂಗ್ರಹ ಚಿತ್ರ)
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಬಿಬಿಎಂಪಿ ಕಸ ವಿಲೇವಾರಿ ಘಟಕದಲ್ಲಿ ರಾಶಿ ಬಿದ್ದಿರುವ ಕಸ (ಸಂಗ್ರಹ ಚಿತ್ರ)
ಧರ್ಮೇಂದ್ರ
ಧರ್ಮೇಂದ್ರ
ವೀರೇಂದ್ರ
ವೀರೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT