ಗುರುವಾರ , ಏಪ್ರಿಲ್ 2, 2020
19 °C
ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀನಾರಾಯಣಪ್ಪ ಸೂಚನೆ

ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಶ್ರಮಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಕಡೆಗೆ ಎಲ್ಲ‌ ಶಿಕ್ಷಕರು ಗಮನ ಹರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀನಾರಾಯಣಪ್ಪ ಹೇಳಿದರು.

ಇಲ್ಲಿನ ರೂಬಿ ಆಂಗ್ಲಶಾಲೆ ಆವರಣದಲ್ಲಿ ತಾಲ್ಲೂಕಿನ ಮುಖ್ಯಶಿಕ್ಷಕರೊಟ್ಟಿಗೆ ಬುಧವಾರ ಸಭೆ ನಡೆಸಿದ ಅವರು, ‘ಈ ಬಾರಿ ಉತ್ತಮ ಫಲಿತಾಂಶ ತರಲೇಬೇಕು’ ಎಂದು ತಾಕೀತು ಮಾಡಿದರು.

‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆ, ಖಾಸಗಿ ಶಾಲೆಗಳು ಸೇರಿದಂತೆ ಎಲ್ಲ ಶಿಕ್ಷಕರು ಉತ್ತಮ ಫಲಿತಾಂಶಕ್ಕಾಗಿ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಲೇಬೇಕು. ಸರ್ಕಾರಿ, ಅನುದಾನಿತ ಶಾಲೆಗಳಿಗೆ ಅಗತ್ಯವಾಗಿರುವ ಸಂಪನ್ಮೂಲಗಳನ್ನು ಸರ್ಕಾರ ಒದಗಿಸಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡಲು ಸಿದ್ಧರಿದ್ದೇವೆ. ಶಿಕ್ಷಕರು ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡಬೇಕು’ ಎಂದರು.

‘ಮಕ್ಕಳ ಮುಂದಿನ ಭವಿಷ್ಯ ಅಡಗಿರುವುದು ಶಿಕ್ಷಕರ ಕೈಯ್ಯಲ್ಲಿ. ಪೋಷಕರೊಂದಿಗೆ ಸಮಾಲೋಚನೆ ನಡೆಸಿ, ಯಾವ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಅವರಿಗೆ ಪ್ರತ್ಯೇಕ ತರಗತಿ ನಡೆಸುವ ಮೂಲಕ ಅವರನ್ನೂ ಸಜ್ಜುಗೊಳಿಸಿ, ಕನಿಷ್ಠ ಉತ್ತೀರ್ಣರಾಗುವ ಮಟ್ಟಕ್ಕಾದರೂ ಸಿದ್ಧಗೊಳಿಸಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ ವೀರೇಗೌಡ ಮಾತನಾಡಿ, ‘ಹಲವು ವರ್ಷಗಳಿಂದಲೂ ದೇವನಹಳ್ಳಿ ತಾಲ್ಲೂಕು ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಉತ್ತಮ ಸ್ಥಾನ ಪಡೆಯುತ್ತಾ ಬಂದಿದ್ದು, ಈ ಬಾರಿಯೂ ಅದನ್ನು ಮುಂದುವರೆಸಲು ಎಲ್ಲ ಶಿಕ್ಷಕರ ಸಹಾಯ ಅಗತ್ಯ. ಶಿಕ್ಷಕರ ಮೇಲೆ ಹೊಣೆಗಾರಿಕೆ ಹಾಕಿ ಮಕ್ಕಳನ್ನು ಪೋಷಕರು ಸರಿಯಾಗಿ ಶಾಲೆಗೆ ಕಳುಹಿಸದೆ ಹೋದರೆ ಫಲಿತಾಂಶದ ಪ್ರಮಾಣ ಕಡಿಮೆಯಾಗುವುದು. ಮಾತ್ರವಲ್ಲದೆ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಇದನ್ನು ಪ್ರತಿಯೊಬ್ಬ ಪೋಷಕರು ಗಮನದಲ್ಲಿಟ್ಟುಕೊಂಡರೆ ಉತ್ತಮ’ ಎಂದು ಹೇಳಿದರು.

‘ಜೀವನ ರೂಪಿಸಿಕೊಳ್ಳಲು ಶಿಕ್ಷಣ ಸಹಕಾರಿಯಾಗಬೇಕು. ಆ ನಿಟ್ಟಿನಲ್ಲಿ ಮಕ್ಕಳನ್ನು ಸಿದ್ಧಗೊಳಿಸಬೇಕು. ಇದಕ್ಕೆ ಎಲ್ಲರೂ ಶ್ರಮಿಸಬೇಕು’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಹನುಮಂತಪ್ಪ ಮಾತನಾಡಿ, ‘ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ಫಲಿತಾಂಶ ವಿಶ್ಲೇಷಿಸಿ, ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿ ನಡೆಸಿ, ಫಲಿತಾಂಶ ಉತ್ತಮ ಪಡಿಸಲು ಗಮನಹರಿಸಿಬೇಕು’ ಎಂದರು.

ರೂಬಿ ಶಾಲಾ ಸಂಸ್ಥಾಪಕ ಅಧ್ಯಕ್ಷ ಎ.ಸಯ್ಯದ್ ರಫಿಕ್ ಮಾತನಾಡಿ, ‘ಶಿಕ್ಷಣ ಇಲಾಖೆ ನಿಯಮಗಳನ್ನು ಹಾಗೂ ಸಮಯ ಪಾಲನೆಯನ್ನು ಪ್ರತಿ ಶಾಲೆಗಳಲ್ಲಿಯೂ ತಪ್ಪದೇ ಪಾಲಿಸುವುದರೊಂದಿಗೆ ಉತ್ತಮ ಫಲಿತಾಂಶ ತರಬೇಕು. ಈಗಾಗಲೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ತಿಳಿಯುವುದರಿಂದ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಸಜ್ಜುಗೊಳಿಸಲು ಸಹಕಾರಿಯಾಗಲಿದೆ’ ಎಂದರು.

ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎನ್.ಕೃಷ್ಣಮೂರ್ತಿ, ಕಾರ್ಯದರ್ಶಿ ಎಂ.ಚಂದ್ರಶೇಖರ್, ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲರ ತಾಲ್ಲೂಕು ಸಂಘದ ಅಧ್ಯಕ್ಷ ಜೆ.ಮುನೇಗೌಡ, ರೂಬಿ ಶಾಲಾ ಮುಖ್ಯ ಶಿಕ್ಷಕಿ ಎ.ನಿಖತ್‌ ಸಲ್ಮಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು