ಶನಿವಾರ, ಸೆಪ್ಟೆಂಬರ್ 25, 2021
29 °C
ಹಾಲ್ದೇನಹಳ್ಳಿ ರೈಲ್ವೆ ಗೇಟ್‌ ಬಳಿ ಸಂಚಾರ ದಟ್ಟಣೆ l ಸಾರ್ವಜನಿಕರ ಪರದಾಟ

ಆನೇಕಲ್: ಸೌಲಭ್ಯ ವಂಚಿತ ರೈಲು ನಿಲ್ದಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ರೈಲ್ವೆ ಸೌಲಭ್ಯ ಒಂದು ಪಟ್ಟಣ ಅಥವಾ ಗ್ರಾಮಕ್ಕೆ ವರದಾನ. ಆದರೆ, ಆನೇಕಲ್ ರೈಲ್ವೆ ನಿಲ್ದಾಣ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ನಿಲ್ದಾಣಕ್ಕೆ ಹೊಂದಿಕೊಂಡಿರುವ ಆನೇಕಲ್‌-ಅತ್ತಿಬೆಲೆ ರಸ್ತೆ ರೈಲ್ವೆ ಗೇಟ್‌ ಬಳಿ ಪರ್ಯಾಯ ಮಾರ್ಗವಿಲ್ಲದೆ ರೈಲು ಬಂದರೆ ಕಿ.ಮೀ ದೂರ ಸಂಚಾರ ದಟ್ಟಣೆ ಆಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರು ಪರದಾಡುವಂತಾಗಿದೆ.

ಆನೇಕಲ್‌-ಅತ್ತಿಬೆಲೆ ರಸ್ತೆ ಸಂಚಾರ ದಟ್ಟಣೆ ರಸ್ತೆ. ಹೊಸೂರು, ಅತ್ತಿಬೆಲೆ ಕೈಗಾರಿಕಾ ಪ್ರದೇಶಕ್ಕೆ ಆನೇಕಲ್‌ನಿಂದ ಮತ್ತು ಅತ್ತಿಬೆಲೆಯಿಂದ ಹೆಚ್ಚು ಜನರು ಪ್ರತಿನಿತ್ಯ ಸಂಚರಿಸುತ್ತಾರೆ. ಆದರೆ, ಹಾಲ್ದೇನಹಳ್ಳಿಯ ರೈಲ್ವೆ ಗೇಟ್‌ ಬಳಿ ಬರುತ್ತಿದ್ದಂತೆಯೇ ಸಂಚಾರ ದಟ್ಟಣೆ ತೆರವಾಗಿ ಸುಗಮ ಸಂಚಾರಕ್ಕೆ ಅನುವಾಗಬೇಕಾದರೆ ಅರ್ಧತಾಸಿಗೂ ಹೆಚ್ಚು ಸಮಯ ಕಾಯಬೇಕಾಗುತ್ತದೆ.

ಎರಡು ಬದಿಗಳಲ್ಲಿ ಒಂದು ಕಿ.ಮೀ.ಗೂ ಹೆಚ್ಚು ದೂರ ವಾಹನಗಳು ನಿಂತಿರುತ್ತವೆ. ಆನೇಕಲ್‌ ರೈಲು ನಿಲ್ದಾಣದಲ್ಲಿ ಹೋಗಿಬರುವ ಸೇರಿದಂತೆ ಆರು ಬಾರಿ ಮಾತ್ರ ರೈಲು ನಿಲ್ಲುತ್ತವೆ. ಉಳಿದಂತೆ ಎಕ್ಸ್‌ಪ್ರೆಸ್‌ ರೈಲುಗಳ ಓಡಾಟವಿದೆ. ರೈಲಿನಿಂದಾಗಿ ಜನರಿಗೆ ಸೌಲಭ್ಯವಿಲ್ಲ. ಮೇಲ್ಸೇತುವೆ ಅಥವಾ ಅಂಡರ್‌ಪಾಸ್‌ ಇಲ್ಲದೆ ಇರುವುದರಿಂದ ರೈಲು ಬರುತ್ತಿದ್ದಂತೆ ಗೇಟ್‌ ಹಾಕಲಾಗುತ್ತದೆ.

ಗೇಟ್‌ ತೆರವಾಗಲು ಅರ್ಧ ತಾಸಿಗೂ ಹೆಚ್ಚು ಸಮಯವಾಗುತ್ತದೆ. ಆಂಬುಲೆನ್ಸ್‌ ಸೇರಿದಂತೆ ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಪರದಾಡಬೇಕಾಗಿದೆ. ರೈಲು ಬರುತ್ತಿದ್ದಂತೆಯೇ ರಸ್ತೆ ಪ್ರಯಾಣಿಕರು ಶಾಪ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ತ್ವರಿತವಾಗಿ ಹಾಲ್ದೇನಹಳ್ಳಿ ರೈಲ್ವೆ ಗೇಟ್‌ ಬಳಿ ತ್ವರಿತವಾಗಿ ಮೇಲ್ಸೇತುವೆ
ಅಥವಾ ಅಂಡರ್‌ಪಾಸ್‌ ನಿರ್ಮಿಸಬೇಕೆಂಬುದು ಸ್ಥಳೀಯರ
ಒತ್ತಾಯವಾಗಿದೆ.

ರೈಲು ನಿಲ್ದಾಣಕ್ಕೆ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಅಂದಾಜು ಒಂದು ಕಿ.ಮೀ ದೂರದ
ಸಂಪರ್ಕ ರಸ್ತೆಯು ಅತ್ಯಂತ ಹಾಳಾಗಿದೆ.
ಈ ರಸ್ತೆಯಲ್ಲಿ ಜನರು ಸಂಚರಿಸಬೇಕಾದರೆ ಹರಸಾಹಸ ಮಾಡಬೇಕಾದ ಪರಿಸ್ಥಿತಿಯಿದೆ. ಎರಡು ಬದಿಗಳಲ್ಲಿ ಮುಳ್ಳಿನ ಗಿಡಗಂಟಿ, ದುರಸ್ತಿ
ಇಲ್ಲದೇ ಗುಂಡಿ ಬಿದ್ದ ರಸ್ತೆಯಿದ್ದು ಒಂದು ಕಿ.ಮೀ. ದೂರದ ರೈಲು ನಿಲ್ದಾಣ ತಲುಪಬೇಕಾದರೆ 10-15 ನಿಮಿಷ ಸಮಯ ತೆಗೆದುಕೊಳ್ಳುತ್ತದೆ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಎರಡು ಬದಿಗಳ ಗಿಡಗಂಟಿಗಳ ಮುಳ್ಳು ತಾಗುತ್ತವೆ.

ರೈಲ್ವೆ ಮತ್ತು ರಸ್ತೆ ಮಧ್ಯದ ಜಾಗ ಪಾಳುಬಿದ್ದಿದ್ದು ಹಾವುಗಳ ಆವಾಸಸ್ಥಾನವಾಗಿದೆ. ಸಂಜೆ ವೇಳೆಯಲ್ಲಿ ಈ ಭಾಗವೂ ಕುಡುಕರ ತಾಣವಾಗಿದೆ. ಮಹಿಳೆಯರು ಸೇರಿದಂತೆ ಪ್ರಯಾಣಿಕರು ರೈಲು ನಿಲ್ದಾಣದಿಂದ ಸಂಪರ್ಕ ರಸ್ತೆ ತಲುಪಬೇಕಾದರೆ ಭಯದ ವಾತಾವರಣ ನಿರ್ಮಾಣವಾಗಿದೆ. ಇವುಗಳನ್ನು ತೆರವುಗೊಳಿಸಿ ರಸ್ತೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಗಮನ ಹರಿಸಬೇಕಾಗಿದೆ.

ರೈಲು ನಿಲುಗಡೆಗೆ ಒತ್ತಾಯ: ಕೈಗಾರಿಕೆ
ಗಳು, ವಿದ್ಯಾ ಸಂಸ್ಥೆಗಳು ಮತ್ತು ಬಡಾವಣೆಗಳು ತಾಲ್ಲೂಕಿನಲ್ಲಿ ಹೆಚ್ಚಾಗಿವೆ. ಸಾವಿರಾರು ಮಂದಿ ಪ್ರತಿದಿನ ಪ್ರಯಾಣ ಮಾಡುತ್ತಾರೆ. ಟ್ರಾಫಿಕ್‌ ಸಮಸ್ಯೆಯಿಂದಾಗಿ ಆನೇಕಲ್‌ನಿಂದ ಬೆಂಗಳೂರಿಗೆ ಪ್ರಯಾಣಿಸಬೇಕಾದರೆ ಪರದಾಡಬೇಕಾಗುತ್ತದೆ. ವೆಚ್ಚ ಹಾಗೂ ಸಮಯ ಉಳಿಸುವ ಎಲ್ಲ ಅವಕಾಶಗಳಿದ್ದರೂ ಆನೇ
ಕಲ್‌ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್‌ ರೈಲುಗಳು ನಿಲ್ಲದಿರುವುದರಿಂದ ಜನರು ಸೌಲಭ್ಯದಿಂದ ದೂರ ಉಳಿಯುವಂತಾಗಿದೆ. ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಮನವಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸದಿರುವುದರಿಂದ ಇಲ್ಲಿನ ರೈಲು ನಿಲ್ದಾಣ ಸೌಲಭ್ಯಗಳಿಂದ ಮರೀಚಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.