ಶುಕ್ರವಾರ, ಮೇ 14, 2021
30 °C

ತಟ್ಟೆ ಬಡಿದು ಕುಟುಂಬ ಸದಸ್ಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬದವರು ತಟ್ಟೆ ಗ್ಲಾಸುಗಳನ್ನು ಹಿಡಿದು ಆನೇಕಲ್‌ನ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

‘ಸಾರಿಗೆ ಸಂಸ್ಥೆಯ ನೌಕರರು ಸಂಸ್ಥೆಯನ್ನು ತಮ್ಮ ತಾಯಿಯೆಂದು ಭಾವಿಸಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಗಮನ ಹರಿಸದೇ ನೌಕರರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿರುವುದು ದುರದೃಷ್ಟಕರ. ಸರ್ಕಾರ ಕೂಡಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ರಾಜ್ಯದಲ್ಲಿ ಅತ್ಯಂತ ಕಡಿಮೆ ವೇತನ ಪಡೆಯುತ್ತಿರುವ ನಿಗಮ ಮಂಡಳಿಗಳಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಮೊದಲನೆಯದಾಗಿದೆ. ನೌಕರರ ಮತ್ತು ಸಂಸ್ಥೆಯ ಹಿತದೃಷ್ಟಿಯಿಂದ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಸಾರಿಗೆ ಸಂಸ್ಥೆಯ ನೌಕರರ ಕುಟುಂಬದವರು ಒತ್ತಾಯಿಸಿದರು.

ಆನೇಕಲ್‌ ಘಟಕದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬದ ಸುಮಾರು 400ಕ್ಕೂ ಹೆಚ್ಚು ಮಂದಿ ತಾಲ್ಲೂಕು ಕಚೇರಿಯ ಮುಂದೆ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ತಟ್ಟೆ ಲೋಟಗಳನ್ನು ಪ್ರದರ್ಶಿಸಿ ನೌಕರರ ಹೊಟ್ಟೆಯ ಮೇಲೆ ಹೊಡೆಯಬೇಡಿ ಮಾನವೀಯತೆ ಪ್ರದರ್ಶಿಸಿ ಎಂದು ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ನಂತರ ತಹಶೀಲ್ದಾರ್‌ ಪಿ.ದಿನೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಜಿಲ್ಲಾಡಳಿತಕ್ಕೆ ಮನವಿ

ದೇವನಹಳ್ಳಿ: ಸರ್ಕಾರ ಸಾರಿಗೆ ನೌಕರರ ಸಂಘಕ್ಕೆ ಈ ಹಿಂದೆ ನೀಡಿದ್ದ ಲಿಖಿತ ಭರವಸೆಯನ್ನು ಈಡೇರಿಸಲೇಬೇಕು ಎಂದು ಒತ್ತಾಯಿಸಿ ಸಾರಿಗೆ ನೌಕರರ ಕುಟುಂಬದವರು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದರು.

ನಿವೃತ್ತ ಉದ್ಯೋಗಿ ಬಿ.ಎಂ.ಜಗದಾಂಬ ಮಾತನಾಡಿ, ‘2020 ಡಿ.13 ರಂದು ಸಾರಿಗೆ ಸಚಿವರನ್ನೊಳಗೊಂಡ ಹಲವು ಶಾಸಕರೊಂದಿಗೆ ನಡೆದ ಸಂಧಾನ ಸಭೆಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವ ಬೇಡಿಕೆ ಹೊರತುಪಡಿಸಿ ನೌಕರರಿಗೆ 6ನೇ ವೇತನ ಯೋಗ ಶಿಫಾರಸಿನಂತೆ ವೇತನ ನಿಗದಿ ಮಾಡುವುದು ಮತ್ತು ಇತರೆ ಮುಖ್ಯ 8 ಬೇಡಿಕೆಗಳನ್ನು ಈಡೇರಿಸುವ ಭರವಸೆಗೆ ಮೂರು ತಿಂಗಳು ಕಾಲಾವಕಾಶ ಸಾರಿಗೆ ಸಚಿವರು ಪಡೆದುಕೊಂಡಿದ್ದರು. ಭರವಸೆ ಈಡೇರಿಸಿದ ಪರಿಣಾಮ ಮುಷ್ಕರ ಅನಿವಾರ್ಯವಾಗಿದೆ’ ಎಂದು ದೂರಿದರು.

‘8 ಭರವಸೆಗಳು ಅಪೂರ್ಣವಾಗಿ ನೌಕಕರಿಗೆ ಅನುಕೂಲವಾಗದ ರೀತಿಯಲ್ಲಿ ಹಳೆಯ ಸುತ್ತೋಲೆಗಳನ್ನು ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಈಡೇರಿಸಿದ್ದೇವೆ ಎಂದು ಸರ್ಕಾರ ಬಿಂಬಿಸಿಕೊಂಡು ಸರ್ಕಾರ ವೇತನ ಕಡಿತ ಮಾಡುವುದು, ದೂರದ ಸ್ಥಳಗಳಿಗೆ ವರ್ಗಾವಣೆಯಂತಹ ಮಾನಸಿಕ ಕಿರುಕುಳ ಚಾಲಕ ಮತ್ತು ನಿರ್ವಾಹಕರಿಗೆ ನೀಡುತ್ತಿದೆ’ ಎಂದು ಆರೋಪಿಸಿದರು.

ಸಾರಿಗೆ ನೌಕರರ ಒಕ್ಕೂಟದ ಸದಸ್ಯರಾದ ಕವಿತಾ ಮತ್ತು ರತ್ನಮ್ಮ ಮಾತನಾಡಿ, ‘ಸಾರಿಗೆ ನೌಕರರ ಸಂಕಷ್ಟ ಸರ್ಕಾರಕ್ಕೆ ಸಂಬಂಧಿಸಿದ ಸಚಿವರಿಗೆ ಅರ್ಥವಾಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಚಳಿ, ಗಾಳಿ, ಮಳೆಯಲ್ಲಿ ಚಾಲನೆ ಮಾಡುವ ಬಸ್‌ಗಳಲ್ಲಿ ಮಲಗಬೇಕು. ಬಸ್ ತಾಂತ್ರಿಕ ದೋಷಗಳ ಸಂದರ್ಭದಲ್ಲಿಯೂ ಅಷ್ಟೆ. ಹಿರಿಯ ಅಧಕಾರಿಗಳ ಕಿರುಕುಳ
ಇವುಗಳೆಲ್ಲನ್ನೆಲ್ಲಾ ಸಹಿಸಿಕೊಂಡು ಕರ್ತವ್ಯ ನಿರ್ವಹಿಸುವ ಸಾರಿಗೆ ನೌಕರರನ್ನು ಸರ್ಕಾರ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಸರ್ಕಾರ ಗೌರವ ಪೂರ್ವಕವಾಗಿ ನೌಕರರ ಭರವಸೆಗಳನ್ನು ಈಡೇರಿಸಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಬೇಕು’ ಎಂದು ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು