ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ತಪ್ಪಿಗೆ ರೈತರ ಅಲೆದಾಟ

ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮಧ್ಯವರ್ತಿಗಳ ಉಪಟಳ ಹೆಚ್ಚಳ
Last Updated 18 ಫೆಬ್ರುವರಿ 2021, 5:54 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕು ಕಚೇರಿ ಹಾಗೂ ಉಪ ವಿಭಾಗಾಧಿಕಾರಿ ಕಚೇರಿ ಸೇರಿದಂತೆ ಕಂದಾಯ ವಿಭಾಗದ ವಿವಿಧ ಹಂತದ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಜನ ಸಾಮಾನ್ಯರ ಕೆಲಸಗಳೇ ಆಗುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಆರ್‌. ಚಂದ್ರತೇಜಸ್ವಿ ಆಗ್ರಹಿಸಿದರು.

ನಗರದ ಉಪ ವಿಭಾಗಾಧಿಕಾರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾತನಾಡಿದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಅಧಿಕಾರಿಗಳು ಬೆಳೆಸಿಕೊಳ್ಳಬೇಕು. ತಾಲ್ಲೂಕು ಹಾಗೂ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕಂದಾಯ ದಾಖಲೆಗಳ ತಿದ್ದುಪಡಿ ಪ್ರಕರಣಗಳು ಹಲವಾರು ವರ್ಷಗಳಿಂದ ಇತ್ಯರ್ಥವಾಗದೇ ಬಾಕಿ ಉಳಿದಿವೆ. ಈ ಬಗ್ಗೆ ಒಂದು ತಿಂಗಳಲ್ಲಿ ಸೂಕ್ತ ಪರಿಶೀಲನೆ ನಡೆಸಿ ಇತ್ಯರ್ಥಪಡಿಸಬೇಕು. ಹತ್ತಾರು ವರ್ಷಗಳಿಂದ ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಮಾತ್ರ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದರು.

ಸಭೆಯಲ್ಲಿ ಹಾಜರಿದ್ದ ಪ್ರಾಂತ್ಯ ರೈತ ಸಂಘದ ತಾಲ್ಲೂಕು ಮುಖಂಡ ಸಿ.ಎಚ್‌. ರಾಮಕೃಷ್ಣ ಮಾತನಾಡಿ, ಪೋಡಿ ಆದಾಲತ್‌ಗಳಲ್ಲಿ ಸಾಕಷ್ಟು ಗೊಂದಲ ಉಂಟಾಗಿವೆ. ಆದಾಲತ್‌ನಲ್ಲಿ ಬಗೆಹರಿಸಬೇಕಾದ ಪ್ರಕರಣಗಳನ್ನು ವಿನಾಕಾರಣ ದೂರು ದಾಖಲು ಮಾಡಿಕೊಂಡು ವಿಚಾರಣೆ ಮಾಡುವುದು ಸರಿಯಲ್ಲ. ಇದರಿಂದ ರೈತರು ಕಚೇರಿಗಳಿಗೆ ಅಲೆದಾಡುವ ಸ್ಥಿತಿ ಉಂಟಾಗಿದೆ ಎಂದು ಹೇಳಿದರು.

ನಾಡ ಕಚೇರಿಗಳಲ್ಲಿ ಆಧಾರ್‌ ನೋಂದಣಿ, ತಿದ್ದುಪಡಿ ಆರಂಭಿಸಬೇಕು. ಒಂದು ನೂರು ಸೇವೆಗಳು ನಾಡ ಕಚೇರಿಯಲ್ಲಿ ಲಭ್ಯ ಎನ್ನುವ ಫಲಕವನ್ನು ಮಾತ್ರ ಹಾಕಲಾಗಿದೆ. ಆದರೆ, ಯಾವುದೇ ಸೇವೆಗಳು ನಾಡ ಕಚೇರಿಯಲ್ಲಿ ಸರಿಯಾಗಿ ಜನರಿಗೆ ದೊರೆಯುತ್ತಿಲ್ಲ. ಈ ಕುರಿತಂತೆ ಸೂಕ್ತ ತನಿಖೆ ನಡೆಸಿ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ನಾರಾಯಣಸ್ವಾಮಿ ಮಾತನಾಡಿ, ಭೂಮಿ ಮಾರಾಟದ ಭರಾಟೆ ಹೆಚ್ಚಾಗಿರುವ ಹಾಗೂ ಹಲವಾರು ಜನ ತಮ್ಮ ಜಮೀನುಗಳಿಗೆ ತಂತಿಬೇಲಿ ಹಾಕುತ್ತಿದ್ದಾರೆ. ಕಾಲುದಾರಿ ಮುಚ್ಚುವ ಮೂಲಕ ತಂತಿಬೇಲಿಗಳನ್ನು ಹಾಕಿಕೊಂಡರೆ ಇತರೆ ರೈತರು ತಮ್ಮ ಜಮೀನುಗಳಿಗೆ ಹೋಗುವುದಾದರು ಹೇಗೆ ಎಂದು ಪ್ರಶ್ನಿಸಿದರು.

ಹಲವಾರು ಜನ ಕಂದಾಯ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತಲೂ ಹೊರಗಡೆಯೇ ಹೆಚ್ಚಿನ ಕೆಲಸಗಳು ಮಾಡುತ್ತಿದ್ದಾರೆ. ಈ ಬಗ್ಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.

ಸಭೆಯಲ್ಲಿ ಹಾಜರಿದ್ದ ರೈತರಾದ ಬಸವರಾಜು ಮತ್ತು ವೆಂಕಟೇಶ್‌ ಮಾತನಾಡಿ, ತಾಲ್ಲೂಕು ಕಚೇರಿಯಲ್ಲಿನ ಭೂಮಿ ವಿಭಾಗದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕಡ್ಡಾಯವಾಗಿ ಮೊಬೈಲ್‌ ಬಳಕೆ ಮಾಡದಂತೆ ಆದೇಶ ಮಾಡಬೇಕು. ಸದಾ ಮೊಬೈಲ್‌ಗಳಲ್ಲಿ ಮಾತನಾಡುತ್ತ ಕಂದಾಯ ದಾಖಲೆಗಳನ್ನು ಗಣಕೀಕೃತ ಮಾಡುವಾಗ ಹಲವಾರು ತಪ್ಪುಗಳನ್ನು ಮಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾಡುವ ತಪ್ಪಿಗೆ ರೈತರು ಹಲವಾರು ವರ್ಷಗಳ ಕಾಲ ತಾಲ್ಲೂಕು ಕಚೇರಿಗೆ ಅಲೆದಾಡಿ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ತಾಲ್ಲೂಕು ಕೇಂದ್ರದಲ್ಲೇ ವಾಸಮಾಡುವ ನಿಯಮ ಇದ್ದರೂ ಹಲವಾರು ಜನ ಬೆಂಗಳೂರಿನಿಂದಲೇ ಬರುತ್ತಿದ್ದಾರೆ ಎಂದು ದೂರಿದರು.

ಸಭೆಯಲ್ಲಿ ರೈತರ ಹಾಗೂ ವಿವಿಧ ಸಂಘಟನೆ ಮುಖಂಡರ ದೂರುಗಳಿಗೆ ಉತ್ತರಿಸಿದ ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್‌, ಕಂದಾಯ ಇಲಾಖೆಯ ಬಹುತೇಕ ಸೇವೆಗಳು ಆನ್‌ಲೈನ್ ‌ಮೂಲಕ ದೊರೆಯುತ್ತಿದೆ. ಆದರೆ, ಈ ಬಗ್ಗೆ ಸಾರ್ವಜನಿಕರು ಸೂಕ್ತ ಮಾಹಿತಿ ಪಡೆಯಬೇಕು. ಸಭೆಯಲ್ಲಿ ರೈತರು ಹಾಗೂ ಸಂಘಟನೆ ಮುಖಂಡರು ಹೇಳಿರುವ ಎಲ್ಲಾ ದೂರುಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಕಂದಾಯ ಇಲಾಖೆಯಲ್ಲಿ ಉತ್ತಮ ಸೇವೆ ದೊರೆಯುವಂತೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ದಲಿತ ಸಂಘಟನೆ ಮುಖಂಡ ಮಾ. ಮುನಿರಾಜು, ವೆಂಕಟೇಶ್‌ ,ರಾಜು ಸಣ್ಣಕ್ಕಿ, ಮಂಜುನಾಥ್‌, ಪ್ರಾಂತ್ಯ ರೈತ ಸಂಘದ ಜಿಲ್ಲಾ ಮುಖಂಡ ವೀರಣ್ಣ, ವಕೀಲರಾದ ಮನೋಹರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT