ಮಂಗಳವಾರ, ಅಕ್ಟೋಬರ್ 27, 2020
23 °C

‘ಮಿಯವಾಕಿ’ ಮಾದರಿ ಅರಣ್ಯ ಸಸಿ ನಾಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನ ಸೂಲುಕುಂಟೆ ಗ್ರಾಮದ ಮಿತ್ರ ಫೌಂಡೇಷನ್‌ನ ಯುವರಾಜ್‌ ಎಂಬುವರರ ಕೃಷಿ ಭೂಮಿಯಲ್ಲಿ ವಿಯವಾಂಕಿ ಕಿರು ಅರಣ್ಯ ಬೆಳೆಸುವ ಕಾರ್ಯಕ್ರಮ ಇತ್ತೀಚೆಗೆ ಆರಂಭವಾಯಿತು.

ಈ ಪರಿಕಲ್ಪನೆ ಬಗ್ಗೆ ಮಾಹಿತಿ ನೀಡಿದ ಯುವ ಸಂಚಲನದ ಅಧ್ಯಕ್ಷ ಚಿದಾನಂದ್,‌ ‘ಜಪಾನ್‌ನ ಮಿಯವಾಕಿ ಎಂಬ ಪರಿಸರ ತಜ್ಞ ನಗರ ಪ್ರದೇಶಗಳಲ್ಲಿ ಕಡಿಮೆ ಜಾಗದಲ್ಲಿ ಕಿರು ಅರಣ್ಯ ಬೆಳೆಸುತ್ತಿದ್ದರು. ಅತ್ಯಲ್ಪ ಸ್ಥಳದಲ್ಲಿ ನಿರೀಕ್ಷೆಗೂ ಮೀರಿ ಗಿಡಗಳನ್ನು ಬೆಳೆಸಲಾಗಿತ್ತು. ಈ ಮಾದರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಇತರ ನಗರಗಳಿಗೂ ವ್ಯಾಪಿಸಿದೆ. ಕಿರು ಅರಣ್ಯ ನಿರ್ಮಾಣ ಹೆಚ್ಚಾದಂತೆ ‘ಮಿಯವಾಕಿ ವಿಧಾನ’ ಎಂದೇ ಕರೆಯಲಾಗುತ್ತಿದೆ’ ಎಂದು ಹೇಳಿದರು.

‘ಸುಮಾರು ಮೂರು ಗುಂಟೆ ಜಮೀನಿನಲ್ಲಿ 91 ವಿವಿಧ ಜಾತಿಯ 840 ಸಸಿಗಳನ್ನು ನಾಟಿ ಮಾಡಲಾಗಿದೆ. ಮಣ್ಣಿನ ಗುಣವನ್ನು ಪರಿಶೀಲನೆ ಮಾಡಿ ಭೂಮಿಗೆ ಕೊಟ್ಟಿಗೆ ಗೊಬ್ಬರ, ಹಸಿರು ಎಲೆಯನ್ನು ಹಾಕಿ ಸಾವಯವ ಪದಾರ್ಥಗಳನ್ನು ಮಣ್ಣಿಗೆ ಸೇರಿಸುವ ಮೂಲಕ ಪೋಷಕಾಂಶಗಳ ಕೊರತೆ ನೀಗಿಸಲಾಗಿದೆ. ಒಂದು ಚದರ ಮೀಟರ್ ವ್ಯಾಪ್ತಿಯಲ್ಲಿ 3ರಿಂದ 4 ಗುಂಡಿಗಳನ್ನು ತೆಗೆದು ಗಿಡ ನೆಡಲಾಗಿದೆ. ಕಡಿಮೆ ಜಾಗದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸುವುದು ‘ಮಿಯವಾಕಿ’ ವಿಶೇಷ’ ಎಂದರು.

‘ಸಾಮಾನ್ಯವಾಗಿ ಸಸಿಗಳನ್ನು ಅತಿ ಎತ್ತರ ಬೆಳೆಯುವ, ಸಾಧಾರಣ ಎತ್ತರ ಬೆಳೆಯುವ ಹಾಗೂ ಪೊದೆ ರೀತಿ ಬೆಳೆಯುವ ಸಸಿಗಳಾಗಿ ವಿಂಗಡಿಸಿ ನಾಟಿ ಮಾಡಲಾಗಿದೆ. ಎರಡು ವರ್ಷ ನೀರು ಹಾಕಿ ಗಿಡಗಳನ್ನು ಪೋಷಿಸಿದರೆ ಸಾಕು ನಮಗೇ ಗೊತ್ತಿಲ್ಲದಂತೆ ಪುಟ್ಟದೊಂದು ಅರಣ್ಯ ನಿರ್ಮಾಣವಾಗುತ್ತದೆ’ ಎಂದರು.

‘ಪ್ರಯೋಗವು ಮುಂಬೈನಲ್ಲಿ ಈಗಾಗಲೇ ಯಶಸ್ವಿಯಾಗಿದ್ದು ಬೆಂಗಳೂರಿನ ಕೆ.ಆರ್.ಪುರಂನಲ್ಲಿರುವ ನೈರುತ್ಯ ರೈಲ್ವೆ ಹಿರಿಯ ವಿಭಾಗೀಯ ಯಾಂತ್ರಿಕ ಎಂಜಿನಿಯರ್‌ ಕಚೇರಿ ಆವರಣದಲ್ಲಿ ಬೆಳೆಸಿ ಯಶಸ್ವಿಯಾಗಿದ್ದಾರೆ. ಇಂತಹ ಒಂದು ಪ್ರಯೋಗವನ್ನು ನಮ್ಮ ತಾಲ್ಲೂಕಿನ ಸೂಲುಕುಂಟೆ ಗ್ರಾಮದ ಮಿತ್ರ ಫೌಂಡೇಷನ್‌ನವರು ಅನುಷ್ಠಾನಗೊಳಿಸಿದ್ದಾರೆ. ಇಲ್ಲಿ ನಾಟಿ ಮಾಡಿರುವ 91 ವಿವಿಧ ಪ್ರಭೇದದ ಸಸಿಗಳನ್ನು ಬಿಳಿಗಿರಿ ರಂಗನ ಬೆಟ್ಟದ ಸಮೀಪದಲ್ಲಿನ ನರ್ಸರಿಯಿಂದ ಹಾಗೂ ಸ್ಥಳೀಯವಾಗಿ ಬೆಳೆಯುವ ಸಸಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.

ಮಿತ್ರ ಫೌಂಡೇಷನ್‌ನ ಯುವರಾಜ್‌ ಮಾಹಿತಿ ನೀಡಿ, ‘ಅರಣ್ಯ ಅಂದರೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವುದು ಮಾತ್ರ ಎನ್ನುವ ಕಲ್ಪನೆ ಇದೆ. ಆದರೆ, ನಮ್ಮ ಕೃಷಿ ಜಮೀನಿನಲ್ಲೂ ವಿಯವಾಕಿ ಮಾದರಿಯಲ್ಲಿ ಕಿರು ಅರಣ್ಯವನ್ನು ಬೆಳೆಸುವುದರಿಂದ ನಮ್ಮ ಜಮೀನಿನಲ್ಲಿ ಬೆಳೆಯುವ ಇತರೆ ಬೆಳೆಗಳಿಗೆ ಬರುವ ಕೀಟಗಳ ಹಾವಳಿ ನಿಯಂತ್ರಣವಾಗುತ್ತದೆ. ಕಿರು ಅರಣ್ಯದಲ್ಲಿ ವಿವಿಧ ಬಗೆಯ ಔಷಧೀಯ ಗುಣವನ್ನು ಹೊಂದಿರುವ ಸಸಿಗಳು ಇರುವುದರಿಂದ ಬಿಡುವಿನ ವೇಳೆಯಲ್ಲಿ ಕುಳಿತು ಕಾಲ ಕಳೆಯುವುದರಿಂದ ನಮ್ಮ ಆರೋಗ್ಯವು ಸುಧಾರಣೆಯಾಗಲಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.