ಆನೇಕಲ್: ವೈಭವದ ನಂಜುಂಡೇಶ್ವರ ರಥೋತ್ಸವ

ಆನೇಕಲ್: ತಾಲ್ಲೂಕಿನ ಬಿದರಗುಪ್ಪೆ ಗ್ರಾಮದಲ್ಲಿ ಶ್ರೀನಂಜುಂಡೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಶನಿವಾರ ವೈಭವದಿಂದ ನೆರವೇರಿತು. ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.
ರಥೋತ್ಸವ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಾಗಣಪತಿ, ಶ್ರೀಗಾಯತ್ರಿ ದೇವಿ ಹಾಗೂ ನಂಜುಂಡೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೂರು ತೇರುಗಳಲ್ಲಿ ಕೂರಿಸಿದರು. ಅರ್ಚಕರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥೋತ್ಸವಕ್ಕೆ ಚಾಲನೆ ದೊರೆಯು ತ್ತಿದ್ದಂತೆ ಜನರು ಭಕ್ತಿಯಿಂದ ಜಯ ಘೋಷ ಮಾಡಿದರು. ದವನ ಚುಚ್ಚಿದ ಬಾಳೆಹಣ್ಣನ್ನು ತೇರಿನತ್ತ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥಗಳು ಗ್ರಾಮದ ಬೀದಿಗಳಲ್ಲಿ ಬರುತ್ತಿದ್ದಂತೆ ಭಕ್ತರು ಆರತಿ ಎತ್ತಿ ಪೂಜೆ ಸಲ್ಲಿಸಿದರು. ಮನೆಗಳ ಬಳಿ ಪೂಜೆ ಸ್ವೀಕರಿಸುತ್ತಾ ತೇರುಗಳು ಭಜನೆ ಮನೆಯ ಬಳಿಗೆ ಸಂಜೆ 5ಗಂಟೆಗೆ ಬಂದವು. ನಂತರ ದೇವಾಲಯದ ಬಳಿಗೆ ಸಂಜೆ 5.30ರ ವೇಳೆಗೆ ರಥಗಳು ಆಗಮಿಸಿದವು.
ರಥೋತ್ಸವದ ಅಂಗವಾಗಿ ಗ್ರಾಯತ್ರಿ ಹೋಮ, ಕಾಶಿ ಯಾತ್ರೆ ಉತ್ಸವ, ಗಿರಿಜಾ ಕಲ್ಯಾಣೋತ್ಸವ, ಧೂಳೋತ್ಸವ, ಶ್ರೀನಂಜುಂಡೇಶ್ವರ ಸ್ವಾಮಿಯ ರಾವಣ ವಾಹನೋತ್ಸವ ನಡೆದಿವೆ. ಚಿತ್ರಗೋಪುರ ಉತ್ಸವ, ವಸಂದ ಮಾಧವ ಪೂಜೆ, ಗಾಯತ್ರಿ ಹೋಮ, ಬಿದರಗುಪ್ಪೆಯ ದೊಡ್ಡಕೆರೆ ಆವರಣದಲ್ಲಿ ನಂಜುಂಡೇಶ್ವರ ಸ್ವಾಮಿಯ ತೆಪ್ಪೋತ್ಸವವೂ ನಡೆಯಲಿದೆ. ಮೂರು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ರಥೋತ್ಸವ ನಡೆದಿರಲಿಲ್ಲ. ಈ ವರ್ಷ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ತಾಲ್ಲೂಕಿನಲ್ಲಿ ರಥ ಗಾಯತ್ರಿ ದೇವಾಲಯವೆಂದೇ ಇಲ್ಲಿ ಆದಿಶಕ್ತಿ ಶ್ರೀಪಂಚಮುಖಿ ಗಾಯತ್ರಿ ದೇಗುಲ ಪ್ರಸಿದ್ಧವಾಗಿದೆ. 47 ಅಡಿ ಎತ್ತರ ವಿರುವ ಈ ದೇವಾಲಯಕ್ಕೆ ಪುರಾತನ ಕಲ್ಲಿನ ಚಕ್ರಗಳೇ ಆಧಾರವಾಗಿವೆ. ದೇವಾಲಯವು ರಥದ ಮಾದರಿ ಯಲ್ಲಿದೆ. ಹಾಗಾಗಿ ರಥ ಗಾಯತ್ರಿ ದೇವಾಲಯವೆಂದು ಖ್ಯಾತಿ ಪಡೆದಿದೆ. ನಂಜುಂಡೇಶ್ವರ ಸ್ವಾಮಿಯ ಪ್ರಾಚೀನ ದೇವಾಲಯವೂ ಇಲ್ಲಿದೆ. ದೇವಾ ಲಯಗಳ ಗ್ರಾಮವೆಂದೇ ಪ್ರಸಿದ್ಧಿಯಾಗಿರುವ ಇಲ್ಲಿ ರಥಸಪ್ತಮಿಯಂದು ಉತ್ಸವ ನಡೆಯುವುದು ವಾಡಿಕೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.