ಮಂಗಳವಾರ, ಡಿಸೆಂಬರ್ 1, 2020
24 °C
ಸರ್ಕಾರದ ವಿರುದ್ಧ ಶಾಸಕ ಕೃಷ್ಣ ಬೈರೇಗೌಡ ವಾಗ್ದಾಳಿ

ಎತ್ತಿನಹೊಳೆ: ಸರ್ಕಾರದ ನಿರ್ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಬಯಲುಸೀಮೆ ಶಾಶ್ವತ ನೀರಾವರಿಗಾಗಿ ಆರಂಭವಾದ ಬಹುಕೋಟಿ ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ ಎಂದು ಶಾಸಕ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನೂತನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ವಿ.ಪ್ರಸಾದ್ ಅವರನ್ನು ಅಭಿನಂದಿಸಿದ ನಂತರ ಮಾತನಾಡಿದ ಅವರು, ಎತ್ತಿನಹೊಳೆ ಕಾಮಗಾರಿ ವ್ಯಾಪ್ತಿಯಲ್ಲಿ ಬರುವ ರೈತರ ಭೂಮಿ ಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ. ಉಪಚುನಾವಣೆ ಕಾಲಹರಣದ ನಂತರ ಸಂಪುಟ ವಿಸ್ತರಣೆಯ ಕಸರತ್ತಿನಲ್ಲಿ ಸರ್ಕಾರ ತಲ್ಲೀನವಾಗಿದೆಯೇ ಹೊರತು, ರಾಜ್ಯದಲ್ಲಿ ಶಾಶ್ವತ ಯೋಜನೆಗಳ ಬಗ್ಗೆ ಸಂಬಂಧಿಸಿದ ಸಚಿವರು ತಲೆ ಕೆಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಸ್ಥಳೀಯ ಸಂಸ್ಥೆಗಳ ಮೀಸಲಾತಿಯನ್ನು ಹೈಕೋರ್ಟ್‌ ರದ್ದು ಮಾಡಿದೆ. ಸರ್ಕಾರ ಮೇಲ್ಮನವಿ ಸಲ್ಲಿಸುವ ಬಗ್ಗೆ ಮಾಹಿತಿ ಇಲ್ಲ. ಮೀಸಲಾತಿ ಕ್ರಮಬದ್ಧವಾಗಿ ಮಾಡಿಲ್ಲ. ರಾಜಕೀಯ ಪ್ರೇರಿತವಾಗಿ ಮಾಡಿದೆ. ನಿಯಮಗಳನ್ನು ಗಾಳಿಗೆ ತೂರಿದೆ. ಸೂಕ್ತ ರೀತಿಯಲ್ಲಿ ಮೀಸಲಾತಿ ಮಾಡದಿರುವುದರಿಂದ ಮೀಸಲಾತಿ ವಿಂಗಡಣೆ ಚುನಾವಣಾ ಆಯೋಗಕ್ಕೆ ವಹಿಸಿ ಎಂದು ಛೀಮಾರಿ ಹಾಕಿ ಸಲಹೆ ನೀಡಿದೆ. ಈಗಾಗಲೇ ವಿವಿಧ ರೀತಿಯ ಕಸರತ್ತು ನಡೆಸಿ ಅಧ್ಯಕ್ಷ ಉಪಾಧ್ಯಕ್ಷರಾಗಿರುವವರು ಪಾಡೇನು. ಇದೊಂದು ಬೇಸರ ಸಂಗತಿ ಎಂದು ದೂರಿದರು.

ಗ್ರಾಮ ಪಂಚಾಯಿತಿ ಚುನಾವಣೆಗೆ ವಾರ್ಡ್‍ವಹಿ ಪ್ರಕಟಿಸಿರುವ ವಿಸಲಾತಿಯಲ್ಲಿಯೂ ನಿಯಮ ಉಲ್ಲಂಘನೆ ಆಗಿದೆ. ಮೀಸಲಾತಿ ಸರಿಪಡಿಸುವಂತೆ ರಾಜ್ಯದಲ್ಲಿ 800 ದೂರುಗಳು ಬಂದಿದ್ದರೂ ಸಂಬಂಧಿಸಿದ ಅಧಿಕಾರಿಗಳು ಸರ್ಕಾರದ ಇಚ್ಛೆಯಂತೆ ನಡೆದುಕೊಳ್ಳತ್ತಿರುವುದು ದುರಷ್ಟಕರ ಬೆಳವಣಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಎರಡನೇ ಬಾರಿಗೆ ಅನುಭವಿ ವಿ.ಪ್ರಸಾದ್ ಆಯ್ಕೆಗೊಂಡಿದ್ದಾರೆ. ಎಲ್ಲ ಸದಸ್ಯರು ಪಕ್ಷಾತೀತವಾಗಿ ಸಹಕಾರ ನೀಡಿದ್ದಾರೆ. ಈ ಹಿಂದಿನ ಅಧ್ಯಕ್ಷೆ ಜಯಮ್ಮ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಅಭಿವೃದ್ಧಿ ಕಡೆಗೂ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯಕ್ಕೆ ಪಕ್ಷಾತೀತವಾಗಿ ಸದಸ್ಯರು ಸಹಕರಿಸಿದ್ದರು. ಪ್ರಸ್ತುತ ಅಧ್ಯಕ್ಷರ ಅಡಳಿತಾವಧಿ ಕಡಿಮೆ ಇದ್ದರೂ ಉತ್ತಮವಾಗಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.

ಹೆಬ್ಬಾಳ ಶಾಸಕ ಭೈರತಿ ಸುರೇಶ್, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಪ್ಪ ಮಾತನಾಡಿದರು , ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು