ಸೋಮವಾರ, ಆಗಸ್ಟ್ 2, 2021
26 °C
ರಸ್ತೆ ವಿಭಜಕ ನಡುವೆ ಅರಳಿ ನಿಂತಿರುವ ವಿವಿಧ ಜಾತಿಯ ಪುಷ್ಪಗಳು

ಹೆದ್ದಾರಿಯಲ್ಲಿ ಹೂವಿನ ತೋರಣ...

ವಡ್ಡನಹಳ್ಳಿ ಭೋಜ್ಯಾನಾಯ್ಕ್‌ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಸಾಲು –ಸಾಲು ಗಿಡಗಳ ನಡುವೆ ಅರಳಿ ನಿಂತಿರುವ ಹೂವಿನ ಗೊಂಚಲು. ದಾರಿಹೋಕರ ಮನಸೆಳೆಯುವ ಕಾಡು ಜಾತಿಯ ಪುಷ್ಪ ಮುತ್ತು ಪೋಣಿಸಿದಂತೆ ತೂಗಾಡುತ್ತಾ ಎಲ್ಲರ ಕಣ್ಮನ ಸೆಳೆಯುತ್ತಿದೆ. 

ಇದು ರಾಷ್ಟ್ರೀಯ ಹೆದ್ದಾರಿ 7 ಅವತಿ ಮೇಲ್ಸುತುವೆ ರಸ್ತೆಯುದ್ಧಕ್ಕೂ ಕಾಣುವ ದೃಶ್ಯ. ಈ ಜಾಗ ಸೆ‌ಲ್ಪಿ ಪ್ರಿಯರ ಮೆಚ್ಚಿನ ತಾಣವಾಗಿದೆ. ಕಣಗಲ ಹೂವಿನ ಕಡುಗೆಂಪು, ತೆಳುಗೆಂಪು ಮತ್ತು ಬಿಳಿ ಬಣ್ಣದ ವೈವಿಧ್ಯತೆ ಹೆದ್ದಾರಿಗೆ ಹೂವಿನ ತೋರಣ ಕಟ್ಟಿದಂತೆ ಭಾಸವಾಗುತ್ತಿದೆ.

ಇನ್ನೂ ಪೇಪರ್ ಜಾತಿಯ ಬಿಳಿ, ತಿಳಿ ಬಿಳಿ, ಕಡುಗೆಂಪು ಹಳದಿ ಮಿಶ್ರಣದಿಂದ ಆಕರ್ಷಣೀಯವಾಗಿ ಕಾಣುತ್ತಿದೆ. ತೇವಾಂಶ ಇದ್ದಾಗ ಸಮೃದ್ಧವಾಗಿ ಬೆಳೆಯುವ ಈ ಹೂವಿನ ಬಳ್ಳಿಗಳು ಗ್ರಾಮಾಂತರ ಪ್ರದೇಶದ‌ಲ್ಲಿ ಚಿರಪರಿಚಿತ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಹಾಂತೇಶ್ ಮುರುಗೋಡ್.

ಕಣಗಲೆ ಪುಷ್ಪವನ್ನು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೆಣ್ಣು ದೇವತೆಗಳ ಧಾರ್ಮಿಕ ಆಚರಣೆಯಲ್ಲಿ ದೀಪಾರತಿ ಅಲಂಕಾರಕ್ಕಾಗಿ ಬಳಸುತ್ತಾರೆ. ಎಲೆ –ಹೂವು ಕಾಂಡಾ ವಿಷಕಾರಿಯಾಗಿರುವುದರಿಂದ ಸಾಕು ಪ್ರಾಣಿಗಳು ಹತ್ತಿರ ಸುಳಿಯುವುದಿಲ್ಲ. ಕೆಲವಡೆ ವಿಷಕಾರಿ ಹಾವು, ಕ್ರಿಮಿಕೀಟ ಬಾರದಿರಲಿ ಎಂದು ಈ ಹೂವಿನ ಗಿಡಗಳನ್ನು ಬೆಳೆಸುತ್ತಾರೆ. ಈ ಎರಡು ಜಾತಿ ಸಸ್ಯದ ಕಾಂಡಾ ಕತ್ತರಿಸಿ ನಾಟಿ ಮಾಡಿ ಬೆಳೆಸಿಕೊಳ್ಳಬಹುದಾಗಿದೆ. ಕಣಗಲೆ ಎಲೆ ರಸ ಮತ್ತು ಎಲೆ ಕಿತ್ತ ನಂತರ ಹೊರಬರುವ ಅಂಟುದ್ರವ ಗಾಯಗಳಿಗೆ ರಾಮಬಾಣ ಎನ್ನುತ್ತಾರೆ ನಾಟಿ ವೈದ್ಯ ವೆಂಕಟರಾಜು.

ಹೆದ್ದಾರಿ ಸೌಂದರ್ಯ ಹೆಚ್ಚಿಸುವ ಇಂತಹ ಪುಷ್ಪಗಳು ಮಾನವನ ದುರಾಸೆಗೂ ಬಲಿಯಾಗುತ್ತಿವೆ. ವರಲಕ್ಷ್ಮಿ, ದಸರಾ ಮತ್ತು ಜಾತ್ರೆ ಸಂದರ್ಭಗಳಲ್ಲಿ ಹೂವಿನ ಗೊಂಚಲುಗಳನ್ನು ಕಟಾವು ಮಾಡಿಕೊಂಡು ಹೋಗಿ ಮಾರಾಟ ಮಾಡುತ್ತಾರೆ ಎಂದು ಅರ್ಚಕ ಶ್ರೀಧರ್ ದೀಕ್ಷಿತ್ ಬೇಸರಿಸುತ್ತಾರೆ.

ಲಾಕ್ ಡೌನ್ ಕಾರಣದಿಂದ ಹಬ್ಬ, ಜಾತ್ರೆಗಳಿಗೆ ಕಡಿವಾಣ ಬಿದ್ದಿದೆ. ಅನೇಕ ಜಾತಿಯ ಹೂವುಗಳಿಗೆ ಯಾರೂ ಕೂಡ ಕೈಹಾಕಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ವೆಂಕಟೇಶ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.