ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ಸರ್ವಾಧಿಕಾರದಿಂದ ಪಕ್ಷ ತೊರೆದೆ: ಎಂಟಿಬಿ

ಕಾಂಗ್ರೆಸ್‌ಗಾಗಿ ತನು, ಮನ, ಧನ ತ್ಯಾಗ ಮಾಡಿದ್ದೇನೆ: ಪಕ್ಷ ನಿಷ್ಠೆ ಬಗ್ಗೆ ನಾಗರಾಜ್ ಅಭಿಮತ
Last Updated 20 ನವೆಂಬರ್ 2019, 16:49 IST
ಅಕ್ಷರ ಗಾತ್ರ

ಸೂಲಿಬೆಲೆ: ‘ಕಾಂಗ್ರೆಸ್ ಪಕ್ಷ, ಶಾಸಕ ಹಾಗೂ ಸಚಿವ ಸ್ಥಾನ ತ್ಯಜಿಸಿ ಬಿಜೆಪಿ ಏಕೆ ಸೇರಿದೆ ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಇದೆ. 1978ರಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾನು. ಪಕ್ಷಕ್ಕಾಗಿ ತನು, ಮನ, ಧನವನ್ನು ತ್ಯಾಗ ಮಾಡಿದ್ದೇನೆ’ ಎಂದು ಎಂಟಿಬಿ ನಾಗರಾಜ್ ತಮ್ಮ ಪಕ್ಷ ನಿಷ್ಠೆ ಬಗ್ಗೆ ಹೇಳಿದರು.

ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು.

‘ಮೈತ್ರಿ ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು ಕಾವೇರಿ ನೀರು ಮತ್ತು ಎರಡು ಸಾವಿರ ನಿವೇಶನಗಳಿಗೆ ಮಂಜೂರಾತಿ ನೀಡಲಿಲ್ಲ. ಅಲ್ಲದೆ ಜಿಲ್ಲೆಯ ಎಸ್‌ಪಿ ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್‌ ವರ್ಗಾ ಮಾಡಿಸಿಕೊಳ್ಳಲಾಗಲಿಲ್ಲ. ಈ ವಿಷಯವನ್ನು ಸಮನ್ವಯ ಸಮಿತಿ ಅಧ್ಯಕ್ಷರು, ಶಾಸನ ಸಭೆಯ ನಾಯಕರು ಆದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರ ಜತೆ ಮಾತನಾಡಿ; ನಮಗೆ ಅಧಿಕಾರ ಬೇಕಿಲ್ಲ. ಜೆಡಿಎಸ್ ಪಕ್ಷಕ್ಕೆ ಕೊಟ್ಟಿರುವ ಬೆಂಬಲ ವಾಪಸ್ ತೆಗೆದುಕೊಳ್ಳಿ. ನಾವು ವಿರೋಧ ಪಕ್ಷದಲ್ಲಿ ಇರೋಣ ಎಂದೆ. ಅವರು ಹೈಕಮಾಂಡ್ ನಿರ್ಧಾರ ಎಂದು ಹೇಳಿದರು. ತಾಲ್ಲೂಕಿನ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡದಿದ್ದ ಕಾರಣ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಸರ್ವಾಧಿಕಾರದಿಂದ ಬೇಸತ್ತು ಸಚಿವ ಸ್ಥಾನ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು’ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಕುರಿತು ಮಾತನಾಡಿ, ‘ಅವರು ಕುಕ್ಕರ್‌ಗಳನ್ನು ಮನೆ ಮನೆಗೆ ಹಂಚಿ ಓಟು ಹಾಕಿಸಿಕೊಳ್ಳುವುದಕ್ಕೆ ಬಂದಿದ್ದಾರೆ. ಇದು ಯಾವುದೂ ನಡೆಯುವುದಿಲ್ಲ. ಯಾವುದೇ ಆಮಿಷಗಳಿಗೆ ಒಳಗಾಗದೆ ನನ್ನನ್ನು ಮತಹಾಕಿ ಜಯಶೀಲರನ್ನಾಗಿ ಮಾಡಿ’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಾಂತಕುಮಾರ್ ಮಾತನಾಡಿ, ‘ಸಚಿವರಾಗಿ ಯಾರೂ ರಾಜೀನಾಮೆ ಕೊಟ್ಟಿರುವ ಉದಾಹರಣೆಗಳಿಲ್ಲ. ಆದರೆ ಎಂಟಿಬಿ ನಾಗರಾಜ್ ಅವರು ರಾಜೀನಾಮೆ ನೀಡಿದ್ದಾರೆ ಅಂದರೆ ಅದು ಕ್ಷೇತ್ರಕ್ಕೆ, ಜನತೆಗೆ ನ್ಯಾಯ ಒದಗಿಸಲು. ಇಲ್ಲಿಯವೆರೆಗೆ ಮತ ಹಾಕಿ ಗೆಲ್ಲಿಸಿದ್ದೀರಿ. ಈ ಬಾರಿಯೂ ಉಪ ಚುನಾವಣೆಯಲ್ಲಿ ಗೆಲ್ಲಿಸಿ ಅಭಿವೃದ್ಧಿಯ ಹರಿಕಾರರಾದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈ ಬಲಪಡಿಸಬೇಕು’ ಎಂದರು.

ಬೈಲನರಸಾಪುರ ಗ್ರಾಮದಲ್ಲಿ ಉರ್ದು ಪ್ರೌಢಶಾಲೆ ಕೊರತೆ ಇರುವುದರಿಂದ, ಹೆಣ್ಣು ಮಕ್ಕಳ ವಿದ್ಯಾಭ್ಯಾಸ 7ನೇ ತರಗತಿಗೆ ಕೊನೆಗೊಳ್ಳುತ್ತಿದ್ದು, ಸರ್ಕಾರದಿಂದ ಪ್ರೌಢಶಾಲೆ ಮಂಜೂರು ಮಾಡಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಹಿಳಾ ವೈದ್ಯರು, ಹೈಮಾಸ್ಕ್ ದೀಪ ಹಾಗೂ ಕೈಗಾರಿಕೆ ಒದಗಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಗ್ರಾಮದ ಮುಖಂಡ ಖಿಜರ್ ಅಹಮದ್, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ನಾಗರಾಜ್, ಫಜಲ್, ಹೊಸಕೋಟೆ ನಗರ ಸಭೆ ಸದಸ್ಯ ಸಿ.ಜಯರಾಜ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT