ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

31 ವರ್ಷಗಳ ನಂತರ ತುಂಬಿ ಕೋಡಿ ಹರಿದ ವಿಜಯಪುರ ಅಮಾನಿಕೆರೆ

ನೀರಿನ ರಭಸಕ್ಕೆ ಹೊರಗೆ ಬರಲಾಗದೇ ಮನೆಗಳಲ್ಲಿ ಸಿಲುಕಿಕೊಂಡಿದ್ದ ಜನರು
Last Updated 5 ಸೆಪ್ಟೆಂಬರ್ 2022, 7:56 IST
ಅಕ್ಷರ ಗಾತ್ರ

ವಿಜಯಪುರ(ಬೆಂ.ಗ್ರಾಮಾಂತರ): 31 ವರ್ಷಗಳ ನಂತರ ವಿಜಯಪುರ ಅಮಾನಿಕೆರೆ ತುಂಬಿ ಕೋಡಿ ಹರಿಯುತ್ತಿರುವುದರ ಪರಿಣಾಮವಾಗಿ ಕೆರೆಕೋಡಿಯಲ್ಲಿ ಮನೆಗಳು ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದ ಕುಟುಂಬಗಳು ಸಂತ್ರಸ್ತರಾಗಿದ್ದಾರೆ. ನೀರಿನ ರಭಸಕ್ಕೆ ಹೊರಗೆ ಬರಲಾಗದೇ ಮನೆಗಳಲ್ಲಿ ಸಿಲುಕಿಕೊಂಡಿದ್ದ ಜನರು ಹಾಗೂ ಜಾನುವಾರುಗಳನ್ನು ಅಗ್ನಿಶಾಮಕ ಸಿಬ್ಬಂದಿ, ಪುರಸಭೆ ಅಧಿಕಾರಿಗಳು, ಪೊಲೀಸರು, ಪೌರಕಾರ್ಮಿಕರು ರಕ್ಷಣೆ ಮಾಡಿದರು.

ಪಟ್ಟಣದ 4 ನೇ ವಾರ್ಡಿನ ಕೆರೆಕೋಡಿಯಲ್ಲಿ 20 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದರು. ಕೆರೆಕೋಡಿ ಹೋದರೆ ಇಲ್ಲಿರುವ ಎಲ್ಲಾ ಕುಟುಂಬಗಳಿಗೆ ಅಪಾಯವಿರುವ ಕುರಿತು ಜೂನ್.16 ರಂದು ‘ಕೆರೆಕೋಡಿಯಲ್ಲಿ ಪುನರ್ವಸತಿಗೆ ಕಾತರ’ ಎಂಬ ತಲೆ ಬರಹದಡಿಯಲ್ಲಿ ವರದಿಯನ್ನು ಪ್ರಕಟಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆರೆಯು ಭರ್ತಿಯಾಗುತ್ತಿದ್ದಂತೆ ಪುರಸಭೆ ಹಾಗೂ ಎಚ್.ಎನ್.ವ್ಯಾಲಿ ಯೋಜನೆಯ ಅಧಿಕಾರಿಗಳು ಎಲ್ಲಾ ಮನೆಗಳಿಗೂ ನೊಟೀಸ್ ಜಾರಿಗೊಳಿಸಿ, ಮನೆಗಳು ಖಾಲಿ ಮಾಡುವಂತೆ ಸೂಚನೆ ನೀಡಿದ್ದರು.

ಕೆಲವರು ಮನೆಗಳನ್ನು ಖಾಲಿ ಮಾಡಿಕೊಂಡಿದ್ದರೆ, ಕೆಲವರು ಖಾಲಿ ಮಾಡಿರಲಿಲ್ಲ. ಈ ನಡುವೆ, ಭಾನುವಾರ ರಾತ್ರಿ ಬಿದ್ದ ಭಾರಿ ಮಳೆಯಿಂದಾಗಿ ಬೆಳಗಿನ ಜಾವ ಕೆರೆಕೋಡಿ ಹರಿಯಲು ಆರಂಭಿಸಿದ್ದು, ನೀರಿನ ರಭಸ ಹೆಚ್ಚಾಗಿ, ಬೆಳಗಾಗುವಷ್ಟರಲ್ಲಿ ಮನೆಗಳೆಲ್ಲವೂ ನೀರಿನಲ್ಲಿ ಮುಳುಗಡೆಯಾಗಿವೆ. ಕೆಲವು ಮನೆಗಳಲ್ಲಿ ವಾಸವಾಗಿದ್ದ ಜನರು ಮನೆಗಳಿಂದ ಹೊರಗೆ ಬರಲಾಗದೇ, ಜಾನುವಾರುಗಳೊಂದಿಗೆ ಮನೆಗಳಲ್ಲಿ ಸಿಲುಕಿಕೊಂಡಿದ್ದರು.

ಕೆಲವರು ಟಿಲ್ಲರ್ ಗಳಿಗೆ ಮನೆಗಳಲ್ಲಿನ ಸಾಮಾನು ಸರಂಜಾಮುಗಳನ್ನು ತುಂಬಿಕೊಂಡು ಹೊರಗೆ ಹೋದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಪುರಸಭೆಯ ಅಧಿಕಾರಿಗಳು, ಪೌರಕಾರ್ಮಿಕರು, ಮನೆಗಳಲ್ಲಿ ಸಿಲುಕಿದ್ದ ಜಾನುವಾರುಗಳು, ಹಾಗೂ ಜನರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದರು.

ಪಟ್ಟಣದ ನಾಗರಬಾವಿಯ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಹೊಲಗಳು, ಕೆರೆಯಾಗಿ ಮಾರ್ಪಟ್ಟಿವೆ. ಎಚ್.ಎನ್.ವ್ಯಾಲಿಯವರು ಕಾಲುವೆಯನ್ನು ನಿರ್ಮಾಣ ಮಾಡಿದ್ದರಾದರೂ ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ನೀರು ಹೊಲಗಳಿಗೆ ನುಗ್ಗಿವೆ. ಬಿತ್ತನೆ ಮಾಡಿದ್ದ ಹೊಲಗಳು, ಹಿಪ್ಪುನೇರಳೆ ತೋಟಗಳು, ಮೇವಿನ ಬೆಳೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಶಿಡ್ಲಘಟ್ಟದ ಕಡೆಯಿಂದ ವಿಜಯಪುರಕ್ಕೆ ಬರುವ ಮುಖ್ಯರಸ್ತೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವ ಕಾರಣ, ಮುಂಜಾಗ್ರತಾ ಕ್ರಮವಾಗಿ ರಸ್ತೆಯನ್ನು ಬಂದ್ ಮಾಡಲಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.ದಂಡಿಗಾನಹಳ್ಳಿ ಕಡೆಯಿಂದ ದೊಡ್ಡಮುದ್ದೇನಹಳ್ಳಿಯ ಕಡೆಗೆ ಸಂಚರಿಸುವ ರಸ್ತೆಯಲ್ಲಿ ನೀರು ಹೆಚ್ಚಾಗಿ ಹರಿಯುತ್ತಿರುವ ಕಾರಣ, ಜನರು ಪರದಾಡುತ್ತಿದ್ದಾರೆ. ಶೃಂಗೇರಿ ಶಾರದಾ ಶಾಲೆಯು ನೀರಿನಲ್ಲಿ ಮುಳುಗಿದೆ.

ಕೋಡಿ ನೋಡಲಿಕ್ಕೆ ಮುಗಿಬಿದ್ದ ಜನತೆ: ಕೆರೆ ತುಂಬಿ ಕೋಡಿ ಹರಿಯುತ್ತಿರುವುದನ್ನು ನೋಡಲಿಕ್ಕೆ ಬೆಳಗ್ಗೆಯಿಂದ ನೂರಾರು ಜನರು ಜಮಾಯಿಸಿದ್ದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಶಾಲಾ ವಾಹನಗಳು ಕೂಡಾ ಪರದಾಡುವಂತಾಯಿತು. ಪೊಲೀಸರು ಜನರನ್ನು ಚದುರಿಸಲು ಹರಸಾಹಸ ಪಡಬೇಕಾಯಿತು.

ಪರಿಹಾರಕ್ಕೆ ಒತ್ತಾಯ: ಮಳೆಯಿಂದಾಗಿ ಬೆಳೆಗಳು ಹಾನಿಗೊಳಗಾಗಿದ್ದು, ಬೆಳೆಗಳ ನಷ್ಟದ ಕುರಿತು, ಶೀಘ್ರವಾಗಿ ಪರಿಹಾರ ವಿತರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ದೂರವಾಣಿಯ ಮೂಲಕ ತಿಳಿಸಿದ್ದಾರೆ. ಅನಾರೋಗ್ಯದ ಕಾರಣದಿಂದ ಸಂತ್ರಸ್ತರನ್ನು ಬೇಟಿಯಾಗಲು ಸಾಧ್ಯವಾಗುತ್ತಿಲ್ಲ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಕೆರೆಕೋಡಿಯಲ್ಲಿನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT