ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಅಧ್ಯಾಪಕರ ಸಂಘ ನಿಷ್ಕ್ರಿಯ

ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದಲ್ಲಿ ಕನ್ನಡ ದನಿಗೆ ಸಂಘಟನೆ ಕೊರತೆ
ಡಿ.ಎನ್‌. ವೆಂಕಟೇಶ್‌
Published 12 ಜನವರಿ 2024, 5:43 IST
Last Updated 12 ಜನವರಿ 2024, 5:43 IST
ಅಕ್ಷರ ಗಾತ್ರ

ಹೊಸಕೋಟೆ: ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪ್ರತ್ಯೇಕಗೊಂಡು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಸ್ಥಿತ್ವಕ್ಕೆ ಬಂದು ಸುಮಾರು ಏಳು ವರ್ಷ ಕಳೆಯುತ್ತಿದ್ದರೂ ವಿಶ್ವವಿದ್ಯಾಲಯದಲ್ಲಿ ಈವರೆಗೂ ಕನ್ನಡದ ಪರವಾಗಿ ಧ್ವನಿ ಎತ್ತಲು ಸಕ್ರಿಯ ಕನ್ನಡ ಸಂಘವೊಂದು ಇಲ್ಲ.

ವಿಶ್ವವಿದ್ಯಾಲಯದ ವ್ಯಾಪ್ತಿಯ ಕನ್ನಡ ಪ್ರಾಧ್ಯಾಪಕರೆಲ್ಲ ಸೇರಿ ಕನ್ನಡ ಅಧ್ಯಾಪಕರ ಒಕ್ಕೂಟವೊಂದನ್ನು ಸಂಘಟಿಸಿದ್ದರು. ಆ ನಂತರ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಉಂಟಾದ ಬದಲಾವಣೆಗಳಿಂದ ಒಕ್ಕೂಟವು ನಿಷ್ಕ್ರೀಯವಾಗಿದೆ.

ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಒಟ್ಟು 289 ಪದವಿ ಕಾಲೇಜುಗಳಿವೆ. ಅವುಗಳಲ್ಲಿ ಸುಮಾರು 30 ಸರ್ಕಾರಿ ಕಾಲೇಜಿಗಳಿವೆ. ಈ ಎಲ್ಲಾ ಕಾಲೇಜುಗಳಿಂದ 350ಕ್ಕೂ ಹೆಚ್ಚು ಕನ್ನಡ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲಾ ಉಪನ್ಯಾಸಕರಿಗೆ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಉಂಟಾದಲ್ಲಿ ಅದಕ್ಕೆ ಸೂಕ್ತ ಧ್ವನಿ ಎತ್ತುವ ಮೂಲಕ ಪರಿಹಾರ ಕಂಡುಕೊಳ್ಳಲು ಒಂದು ವ್ಯವಸ್ಥಿತವಾಗಿ ದನಿ ಇಲ್ಲ.

ಪಠ್ಯ ಪುಸ್ತಕಗಳ ಸಮಸ್ಯೆ: ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಪಠ್ಯ ಪುಸ್ತಕಗಳ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಈ ಹಿಂದಿನ ಎಲ್ಲಾ ಸೆಮಿಸ್ಟರ್‌ಗಳು ಪ್ರಾರಂಭವಾದಾಗ ಕನ್ನಡ ಪಠ್ಯಪುಸ್ತಕಗಳ ಸಮಸ್ಯೆ ವಿದ್ಯಾರ್ಥಿಗಳನ್ನು ನಿರಂತರವಾಗಿ ಕಾಡಲು ತೊಡಗಿತ್ತು. ಅಂತಹ ಸಂದರ್ಭದಲ್ಲಿ ಕನ್ನಡ ಸಂಘವೊಂದು ಸಕ್ರಿಯವಾಗಿದ್ದಿದ್ದರೆ ಸಮಸ್ಯೆಯನ್ನು ಸರಿಪಡಿಸಿ, ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ಪಠ್ಯಪುಸ್ತಕ ದೊರಕಿಸಿಕೊಡಲು ಸಾಧ್ಯವಾಗುತ್ತಿತ್ತು.

ವಿಶ್ವದ್ಯಾಲಯದ ಮುದ್ರಿಸುವ ಪಠ್ಯ ಪುಸ್ತಕಗಳಿಗೆ ದುಪ್ಪಟ್ಟು ಬೆಲೆ ನಿಗದಿ ಮಾಡಿ ವಿದ್ಯಾರ್ಥಿಗಳಿಗೆ ಎಟುಕದಂತೆ ನೋಡಿಕೊಳ್ಳುತ್ತಿವೆ ಎಂಬ ಗಂಭೀರ ಆರೋಪ ಇದೆ. ಈ ಬಗ್ಗೆ ಯಾರು ಸೊಲ್ಲು ಎತ್ತುತ್ತಿಲ್ಲ.

ಗೊಂದಲ ತರಿಸುವ ಆದೇಶಗಳು: ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ನಿಯಮಿತವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಕನ್ನಡ ಪ್ರಾಧ್ಯಾಪಕರಿಗೆ ತೀವ್ರ ತೊಂದರೆಯಾಗುತ್ತಿದೆ. ಅವುಗಳ ವಿರುದ್ಧ ಒಂಟಿ ಧ್ವನಿಗಳಿಗೆ ವಿಶ್ವವಿದ್ಯಾಲಲಯ ಕಿವಿಯಾಗುತ್ತಿಲ್ಲ. ಆದ್ದರಿಂದ ನಮಗಾಗುವ ಅನ್ಯಾಯದ ವಿರುದ್ಧ ಒಂದು ಗಟ್ಟಿ ಧ್ವನಿ ಬರಬೇಕಾದರೆ ಸಂಘಟಿತರಾಗಬೇಕಾದ ಜರೂರು ಇದೆ ಎಂದು ಹೆಸರು ಹೇಳಲು ಇಚ್ಚಿಸದ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

‘ಮುಕ್ತ ಆಯ್ಕೆಯಲ್ಲಿ ರಾಜಕೀಯ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ಬಳಿಕ ಮುಕ್ತ ಆಯ್ಕೆ ವಿಷಯವಾಗಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಇದರಿಂದ ಒಂದಷ್ಟು ಅತಿಥಿ ಉಪನ್ಯಾಸಕರ ಆಯ್ಕೆಯೂ ಕನ್ನಡ ಓದಿದ ಕೆಲವರಿಗೆ ಅನ್ನಕ್ಕೆ ನಾಂದಿ ಆಗಿತ್ತು. ಇದನ್ನು ಏಕಾಏಕಿ ತೆಗೆಯುವ ಸೂಚನೆಯೂ ಬಂದಿತ್ತು. ಆದರೆ ನಾವು ನಾಲ್ಕು ಸೆಮಿಸ್ಟರ್‌ಗಳಿಗೆ ಬೇಕಾದ ಪಠ್ಯಕ್ರಮ ರೂಪಿಸಿದ್ದೇವೆ. ಆದ್ದರಿಂದ ನಾಲ್ಕು ಸೆಮಿಸ್ಟರ್‌ಗಳನ್ನು ತೆಗೆಯಲು ಕಷ್ಟವೆಂದು ಒತ್ತಾಯಿಸಿದ ಪರಿಣಾಮ ತಾತ್ಕಾಲಿಕವಾಗಿ ವಿಶ್ವವಿದ್ಯಾಲಯ ಆ ನಿರ್ಧಾರದಿಂದ ಹಿಂದೆ ಸರಿದಿದೆ. ಆದರೆ ಮುಂದಿನ ದಿನಗಳಲ್ಲಿ ತೆಗೆದು ಕೆಲವರು ಅನ್ನಕ್ಕೆ ಕುತ್ತು ತರುವ ಲಕ್ಷಣಗಳು ಕಾಣುತ್ತಿವೆ’ ಎಂದು ಅವರು ಆತಂಕದಿಂದ ನುಡಿದರು.

ಈ ಎಲ್ಲ ಕಾರಣದಿಂದ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರ ಸಂಘ ಸಕ್ರಿಯವಾಗಬೇಕು. ಕನ್ನಡ ಮತ್ತು ಅದರ ಅಧ್ಯಾಪಕರು, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಗಟ್ಟಿಯಾಗಿ ದನಿ ಎತ್ತಲು ಸಂಘ ಅನಿವಾರ್ಯ ಹಾಗೂ ಜರೂರು ಎಂಬುದು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಅಭಿಪ್ರಾಯ.

- ಸಂಘ ಕ್ರಿಯಾಶೀಲವಾಗಲಿ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪ್ರಾರಂಭವಾದಾಗಲೆ ಕನ್ನಡ ಸಂಘವೊಂದನ್ನು ಹುಟ್ಟುಹಾಕಿ ಕನ್ನಡಪರ ಹಲವು ಕಾರ್ಯಕ್ರಮ ಮಾಡಬೇಕೆಂದು ಯೋಜನೆ ಹಾಕಿಕೊಂಡಿದ್ದೇವು. ಆದರೆ ತದ ನಂತರದಲ್ಲಿ ಕೊರೊನಾ ಎನ್‌ಇಪಿಗಳಿಂದ ಉಂಟಾದ ಗೊಂದಲಗಳಿಂದ ನಾವು ಕನ್ನಡ ಸಂಘದ ನಿಗದಿತ ಗುರಿ ತಲುಪಲಾಗಿಲ್ಲ. ಆದ್ದರಿಂದ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಆಗಬಹುದಾದ ಅನ್ಯಾಯ ಪ್ರಶ್ನಿಸುವ ಮತ್ತು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕನ್ನಡ ಸಂಘ ಕ್ರಿಯಾಶೀಲವಾಗಲೇಬೇಕಿದೆ ಪ್ರೊ.ಎಂ.ತಿಮ್ಮರಾಯಪ್ಪ ಅಧ್ಯಕ್ಷರು ಕನ್ನಡ ಪರೀಕ್ಷಾ ಮಂಡಳಿ ಉತ್ತರ ವಿಶ್ವವಿದ್ಯಾಲಯ ಪುನರ್‌ರಚನೆ ಚಿಂತನೆ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಅಸ್ಥಿತ್ವಕ್ಕೆ ಬಂದಿದ್ದ ಕನ್ನಡ ಅಧ್ಯಾಪಕರ ಒಕ್ಕೂಟ ಕೆಲವು ಕಾರಣಗಳಿಂದ ನಿಷ್ಕ್ರೀಯವಾಗಿದೆ. ಆದರೆ ಅದು ಪನರ್‌ರಚಿಸುವ ಚಿಂತನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪದವಿ ಪರೀಕ್ಷೆಗಳು ಏಕಕಾಲದಲ್ಲಿ ನಡೆಸಲು ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ. ಆ ನಂತರ ಕನ್ನಡ ಸಂಘ ಕ್ರಿಯಾಶೀಲಗೊಂಡು ಕನ್ನಡ ಪ್ರಾಧ್ಯಾಪಕರ ಮತ್ತು ಕನ್ನಡ ಭಾಷೆಗೆ ಸಂಬಂಧಿಸಿದಂತೆ ಅನ್ಯಾಯದ ವಿರುದ್ಧ ಸಮರ್ಥ ಧ್ವನಿ ಎತ್ತಲಾಗುವುದು. ಜಿ.ಎಲ್.ವಿಜಯೇಂದ್ರ ಕುಮಾರ್ ಕನ್ನಡ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT