ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಕಲಾವಿದರಿಗೆ ಸಿಗದ ಒತ್ತು

ಎಲ್ಲಡೆ ಸಾಲು ಸಾಲು ಜಾತ್ರೆ, ರಥೋತ್ಸವ: ತಮಟೆ ಕಲಾವಿದರಿಗೆ ಹೆಚ್ಚಿದ ಬೇಡಿಕೆ । ನೆರೆ ರಾಜ್ಯದ ಕಲಾವಿದರಿಗೆ ಮ್ಯಾನತೆ
ಡಿ.ಎನ್. ವೆಂಕಟೇಶ್
Published 30 ಮಾರ್ಚ್ 2024, 5:45 IST
Last Updated 30 ಮಾರ್ಚ್ 2024, 5:45 IST
ಅಕ್ಷರ ಗಾತ್ರ

ಹೊಸಕೋಟೆ: ಅಳವಿನ ಅಂಚಿನಲ್ಲಿರುವ ಜನಪದ ಕಲೆಗಳಲ್ಲಿ ಸದ್ದು ಮಾಡುತ್ತಿರುವ‌ ತಮಟೆಗೆ ಈಗ ‌ಎಲ್ಲಿಲ್ಲದ ಬೇಡಿಕೆ ಬಂದಿದೆ. ಆದರೆ ಕಡಿಮೆ ಮೊತ್ತಕ್ಕೆ ಸ್ಥಳೀಯ ಕಲಾವಿದರು ಲಭ್ಯವಿದ್ದರೂ, ‘ಸನಾದಿ ಅಪ್ಪಣ್ಣ’ ಸಿನಿಮಾದಂತೆ ನೆರೆ ತಾಜ್ಯದ ಆಧುನಿಕ ಬ್ಯಾಂಡ್‌ ಕಲಾವಿದರ ಮೋಹದಿಂದ ಸ್ಥಳೀಯ ಕಲಾವಿದರನ್ನು ಕೇಳುವವರು ಇಲ್ಲದಂತಾಗಿದೆ.

ಸ್ಥಳೀಯ ತಮಟೆ ಕಲಾವಿದರು ಬಹುತೇಕ ಅನಕ್ಷರಸ್ಥರು. ದಿನಗೂಲಿಗೆ ವಿವಿಧ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇವರಿಗೆ ಜಾತ್ರೆ, ರಥೋತ್ಸವ ಮತ್ತು ಚುನಾವಣೆ ಹಬ್ಬದಂತೆ. ಇದರಿಂದ ತಮ್ಮ ಬದುಕಿನ ಬಂಡಿ ಉತ್ತಮವಾಗಿ ಸಾಗಲು ಒಂದಿಷ್ಟು ಕಾಸು ಮಾಡಿಕೊಳ್ಳುತ್ತಾರೆ.

ತಾಲ್ಲೂಕಿನಾದ್ಯಂತ ಜಾತ್ರೆ, ರಥೋತ್ಸವ, ಮುನಿದ್ಯಾವರ ಆಚರಣೆ ಹಾಗೂ ಲೋಕಸಭಾ ಚುನಾವಣೆ ಪ್ರಚಾರ ಆರಂಭವಾಗಿ ಬಹುದಿನವೇ ಕಳೆದಿದೆ. ಆದರೆ ಇಲ್ಲಿ ಸ್ಥಳೀಯ ಕಲಾವಿದರಿಗಿಂತ ನೆರೆ ರಾಜ್ಯ ಕಲಾವಿದ ತಂಡಗಳಿಗೆ ಒತ್ತು ನೀಡುತ್ತಿರುವುದು ಸ್ಥಳೀಯರಲ್ಲಿ ನಿರಾಶೆ ಮೂಡಿಸಿದೆ.

ಬರಗಾಲದ ನಡುವೆಯೂ ವಿಜೃಂಬಣೆಯ ಜಾತ್ರೆ ಮತ್ತು ರಥೋತ್ಸವಗಳು ಜರುಗುತ್ತಿವೆ. ಗ್ರಾಮಗಳಲ್ಲಿ ತಮಟೆ ಕಲಾವಿದರ ದೊಡ್ಡ ತಂಡಗಳನ್ನು ಕರೆಸಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ನೆರೆ ಜಿಲ್ಲೆಗಳಿಂದ ಕಲಾವಿದರನ್ನು ಕರೆಸಲಾಗುತಿದೆ. ದೊಡ್ಡ ತಂಡ, ವಿಭಿನ್ನ ವಾದ್ಯಗಳಿಗೆ ಅವಲಂಭಿಸುತ್ತಿದ್ದು, ಸ್ಥಳೀಯ ಕಲಾವಿದರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ.

‘ತಮಟೆ ವಾದನ ನಮ್ಮ ಕುಲಕಸು ಆದ ಕಾರಣ ಪೂರ್ವಜರಿಂದ ಕಲಿತು ಊರ ಚಾಕರಿ, ಊರಹಬ್ಬಗಳಿಗೆ ನಾವೇ ತಮಟೆ ನುಡಿಸುತ್ತಾ ಬದುಕುತ್ತಿದ್ದೇವೆ. ಈಗ ನಮ್ಮನ್ನು ಯಾವುದಕ್ಕೂ ಕರೆಯುತ್ತಿಲ್ಲ. ಮನೆಯಲ್ಲಿರುವ ವಾದ್ಯಗಳು ಸಹ ಇದ್ದಲ್ಲಿಯೇ ಮುರುಟಿ ಹೋಗುತ್ತಿವೆ’ ಎಂದು ಬೇಸರದಿಂದ ಹೇಳುತ್ತಾರೆ ತಮಟೆ ಕಲಾವಿದ ರಾಜೇಶ್.

‘ಯಾರಾದರೂ ದೊಡ್ಡ ತಂಡ ಕಟ್ಟಿಕೊಂಡು ಕಲಾವಿದರ ಕೊರತೆಯಾದಾಗ ನಮ್ಮನ್ನು ಕರೆಯುತ್ತಾರೆ. ಆಗ ದಿನಕ್ಕೆ ₹1,000 ರಿಂದ ₹1500 ಸಿಗುತ್ತದೆ. ಸಣ್ಣಪುಟ್ಟ ಕಾರ್ಯಕ್ರಮಗಳಿದ್ದಾಗ ಮಾತ್ರ ನಮ್ಮನ್ನು ಕರೆಯುತ್ತಾರೆ. ದೊಡ್ಡ ಕಾರ್ಯಕ್ರಮಗಳಿಗೆ ಮಾತ್ರ ನಮ್ಮನ್ನು ಲೆಕ್ಕಿಸುವುದಿಲ್ಲ’ ಎಂದು ತಮ ಬಗ್ಗೆ ಜನ ಹೊಂದಿರುವ ನಿರ್ಲಕ್ಷ್ಯವನ್ನು ವಿವರಿಸಿದರು.

ಕಲಾವಿದರು ಬಾರಿಸಿದ ದೊಡ್ಡ ಗಾತ್ರದ ಡ್ರಮ್‌ಗಳು
ಕಲಾವಿದರು ಬಾರಿಸಿದ ದೊಡ್ಡ ಗಾತ್ರದ ಡ್ರಮ್‌ಗಳು

ಕನ್ನಡ ಅಸ್ಮಿತೆ ಇಲ್ಲಿಂದಲೇ ಶುರು ಆಗಬೇಕು ಇತ್ತೀಚೆಗೆ ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ಅತ್ತಿವಟ್ಟ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮಕ್ಕೆ ತಮಿಳುನಾಡಿನಿಂದ ತಮಟೆ ತಂಡವನ್ನು ಕರೆಸಿದ್ದರು. ಸುಮಾರು ಮೂರು ದಿನಗಳ ಈ ಆಚರಣೆಗೆ ಈ ತಂಡಕ್ಕೆ ಸುಮಾರು ₹1.50 ಲಕ್ಷದಷ್ಟು ಮೊತ್ತವನ್ನು ಅವರಿಗೆ ನೀಡಲಾಗಿದೆ. ಇದೇ ಮೊತ್ತ ಸ್ಥಳೀಯರಿಗೆ ಸಿಕ್ಕದರೆ ಅವರನ್ನು ಪ್ರೋತ್ಸಾಹಿದಂತೆ ಆಗುತ್ತಿತು. ‘ಕನ್ನಡ ಅಸ್ಮಿತೆ’ ಎಂಬುದು ಇಲ್ಲಿಂದಲೇ ಶುರು ಆಗಬೇಕು ಎನ್ನುವ ಪ್ರಜ್ಞಾವಂತರು ಈ ಮೂಲಕ ಸ್ಥಳೀಯ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT