ಗುರುವಾರ , ಸೆಪ್ಟೆಂಬರ್ 23, 2021
24 °C

ಜಲಮೂಲ ರಕ್ಷಿಸದಿದ್ದರೆ ಉಳಿಗಾಲವಿಲ್ಲ: ನಿರ್ಮಲಾನಂದನಾಥ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ತಲೆಮಾರಿನ ಜೀವ ಜಲದ ಮೂಲ ರಕ್ಷಿಸದಿದ್ದರೆ ಭವಿಷ್ಯದ ಪೀಳಿಗೆಗೆ ಉಳಿಗಾಲವಿಲ್ಲ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮಿ ಹೇಳಿದರು.

ಇಲ್ಲಿನ ಕನ್ನಮಂಗಲ ಕೆರೆಯಲ್ಲಿ ಸ್ಥಳೀಯರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.

ಮನುಷ್ಯನ ಜೀವನ ನೀರಿಲ್ಲದೆ ಸಾಧ್ಯವಿಲ್ಲ, ಹೆಚ್ಚುತ್ತಿರುವ ಜನಸಂಖ್ಯೆ, ನೀರಿನ ಮಿತಿ ಮೀರಿದ ಬಳಕೆ, ಜಲಮೂಲಗಳ ಆಪೋಶನದಿಂದ ಎಲ್ಲೆಡೆ ನೀರಿಗಾಗಿ ಹಾಹಾಕಾರ ಹೆಚ್ಚುತ್ತಿದೆ. ಪರಿಸರ ಸಮತೋಲನ ಕಾಯ್ದುಕೊಳ್ಳದಿರುವುದು ಸಹ ಒಂದು ಕಾರಣ. ಪ್ರತಿಯೊಂದು ಸಮಸ್ಯೆಗಳಿಗೆ ಸರ್ಕಾರವನ್ನು ಅವಲಂಬಿಸುವುದು ಸರಿಯಲ್ಲ ಎಂದು ಹೇಳಿದರು.

ಅನೇಕರು ಈಗ ಸ್ಥಿತಿವಂತರಿದ್ದಾರೆ. ಸ್ಥಳೀಯರು ಮನಸ್ಸು ಮಾಡಿದರೆ ಯಾವುದೇ ಕೆಲಸ ಅಸಾಧ್ಯವಲ್ಲ. ಶತಮಾನಗಳ ಹಿಂದೆ ಒಂದೊಂದು ಗ್ರಾಮದ ಜನರು ಸ್ವಯಂಪ್ರೇರಿತರಾಗಿ ಗೋಕಟ್ಟೆ, ಕುಂಟೆ, ಕೆರೆ, ಬಾವಿ ತೋಡಿಕೊಳ್ಳುತ್ತಿದ್ದರು ಎಂದರು.

‘ಇಲ್ಲಿನ ಜಿಲ್ಲಾಧಿಕಾರಿ ರಾಜ್ಯಕ್ಕೆ ಮಾದರಿ ಎನ್ನಬಹುದಾದ ಉತ್ತಮ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆ. ಇಂತಹ ಸಾಮೂಹಿಕ ಸಹಭಾಗಿತ್ವದ ಕೆಲಸ ಬರಿ ತಾಲ್ಲೂಕು, ಜಿಲ್ಲೆಗೆ ಸೀಮಿತವಾಗದೆ ಇಡೀ ರಾಜ್ಯ ಮಟ್ಟದಲ್ಲಿ ನಡೆದರೆ ಜಲ ಕ್ರಾಂತಿಯೇ ಆಗಲಿದೆ’ ಎಂದು ಸ್ವಾಮೀಜಿ ಹೇಳಿದರು.

‘ಈ ಅಭಿವೃದ್ಧಿ ಕೆಲಸದಿಂದ ನನಗೂ ಖುಷಿಯಾಗಿದೆ. ಇದೇ ಮಾದರಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಆರಂಭಿಸುವ ಚಿಂತನೆ ಯಾಕೆ ಮಾಡಬಾರದು ಎಂದು ಅನಿಸುತ್ತದೆ, ನೋಡೋಣ ದೈವ ಪ್ರೇರಣೆ’ ಎಂದು ಜಿಲ್ಲಾಧಿಕಾರಿಗೆ ಸ್ಥಳದಲ್ಲೇ ಅಭಿನಂದಿಸಿದರು.

ಜಿಲ್ಲಾಧಿಕಾರಿ ಕರೀಗೌಡ ಮಾತನಾಡಿ, ‘ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸ್ಥಳೀಯರ ಸಹಭಾಗೀತ್ವದಲ್ಲಿ ಸರ್ಕಾರದಿಂದ ನಯಾಪೈಸೆ ಅನುದಾನವಿಲ್ಲದೆ ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದರು.

ನೆಲಮಂಗಲ ತಾಲ್ಲೂಕಿನಲ್ಲಿ ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಅನುದಾನದಡಿಯಲ್ಲಿ ಕೆರೆ ಅಭಿವೃದ್ಧಿಯಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 22 ಕೆರೆಗಳನ್ನು ಗುರುತಿಸಲಾಗಿದ್ದು 16 ಕೆರೆಗಳ ಕಾಮಗಾರಿ ಸಂಪೂರ್ಣ ಮುಗಿದಿದೆ. ಉಳಿದ ಕೆರೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಕೆಲವು ಕೆರೆಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಸ್ಥಳೀಯರು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ. ಮಂಜುನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು