ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸುರಕ್ಷಿತ ಗಣಿಗಾರಿಕೆ ಭಯದ ನೆರಳು

Last Updated 26 ಜನವರಿ 2021, 4:38 IST
ಅಕ್ಷರ ಗಾತ್ರ

ದೇವನಹಳ್ಳಿ: ಶಿವಮೊಗ್ಗ ಬಳಿಯ ಹುಣಸೋಡು ಕಲ್ಲುಗಣಿ ಸ್ಫೋಟ ಪ್ರಕರಣ ತಾಲ್ಲೂಕಿನ ಜನರಲ್ಲಿ ಭಯ ಹುಟ್ಟು ಹಾಕಿದೆ. ತಾಲ್ಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಹಲವರಿಗೆ ಚಿನ್ನದ ಮೊಟ್ಟೆ ಇಡುವ ಜಾಗಗಳಾಗಿವೆ. ಇಲ್ಲಿ ನಡೆ
ಯುತ್ತಿರುವ ಅಸುರಕ್ಷಿತ ಗಣಿಗಾರಿಕೆ ಸುತ್ತಮುತ್ತಲಿನ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

ಶಿವಮೊಗ್ಗದ ಹುಣಸೋಡು ಸ್ಫೋಟ ಪ್ರಕರಣದ ನಂತರ ಜನರು ಭಯದ ನೆರಳಿನಲ್ಲಿ ಬದುಕುವಂತಾಗಿದೆ. ಸ್ಥಳೀಯ ಗಣಿಗಾರಿಕೆ ಸುರಕ್ಷೆ ಬಗ್ಗೆ ತಾಲ್ಲೂಕಿನಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಅಕ್ರಮ ಗಣಿಗಾರಿಕೆ:ಹಲವಾರು ದಶಕಗಳಿಂದ ಮುದ್ದನಾಯಕನಹಳ್ಳಿ ಮತ್ತು ತೈಲಗೆರೆ ಬಳಿ ಅವ್ಯಾಹತವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಮೊದಲ ಬಾರಿಗೆ 2011 ರಲ್ಲಿ ಗಣಿಗಳ ಮೇಲೆ ದಾಳಿ ನಡೆಸಿದ್ದ ಅಂದಿನ ತಹಶೀಲ್ದಾರ್ ಅಪಾರ ಪ್ರಮಾಣದ ಜಿಲೆಟಿನ್‍ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದರು. ಆರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ತೈಲಗೆರೆ ಮತ್ತು ಮುದ್ದನಾಯಕನಹಳ್ಳಿ ಸುತ್ತಮುತ್ತ ಅಪಾರ ಪ್ರಮಾಣದ ರಾಸಾಯನಿಕ ಸ್ಫೋಟಕ ಬಳಸಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಲಾರಿಯಲ್ಲಿ ಸಾಗಿಸುತ್ತಿದ್ದ ₹25.5 ಲಕ್ಷ ರೂಪಾಯಿ ಮೌಲ್ಯದ ಸ್ಫೋಟಕ ವಸ್ತುಗಳನ್ನು ಎರಡು ವರ್ಷಗಳ ಹಿಂದ ವಶಪಡಿಸಿಕೊಳ್ಳಲಾಗಿತ್ತು.

ಪರವಾನಗಿ ಇಲ್ಲದೆ 38 ಬಾಕ್ಸ್‌ಗಳಲ್ಲಿ ಸಾಗಿಸಕಲಾಗುತ್ತಿದ್ದ ಜಿಲೆಟಿನ್‍ ಕಡ್ಡಿ ಮತ್ತು ಇತರೆ ಸ್ಫೋಟಕಗಳನ್ನು ವಶಕ್ಕೆ ಎಂಟು ಆರೋಪಿಗಳನ್ನು ಬಂಧಿಸಲಾಗಿತ್ತು. ಜೈಲು ಸೇರಬೇಕಿದ್ದ ಆರೋಪಿಗಳು ಹೊರಬಂದರು. ರಾಜಕೀಯ ಪ್ರಭಾವಕ್ಕೆ ಮಣಿದು ಪೊಲೀಸರು ‘ಬಿ’ ರಿಪೋರ್ಟ್‌ ಹಾಕಿ ಕೈತೊಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ತಾಲ್ಲೂಕಿನಲ್ಲಿ 2006 ರಲ್ಲಿ ಬೈಯಪ್‌ (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ) ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲಾಡಳಿತ, ಬಿಎಂಆರ್‌ಡಿಎ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆ ಮತ್ತು ಸರ್ಕಾರದ ಉನ್ನತ ಮಟ್ಟದ ಕಾರ್ಯದರ್ಶಿಗಳ ಮೊದಲ ಸಭೆ ನಡೆದಿತ್ತು.

ವಿಮಾನ ನಿಲ್ದಾಣದಿಂದ 15 ರಿಂದ 25 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳಿಂದ ಅರ್ಕಾವತಿ ನದಿ ಪಾತ್ರ ಮತ್ತು ವಿಮಾನ ನಿಲ್ದಾಣಕ್ಕೆ ಧಕ್ಕೆಯಾಗಲಿದೆ. ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆಕ್ಷೇಪ ಎತ್ತಿತ್ತು.ಕೊಯಿರಾ, ಮನಗೊಂಡನಹಳ್ಳಿ, ಮೀಸಗಾನಹಳ್ಳಿ, ಚಿಕ್ಕಗೊಲ್ಲಹಳ್ಳಿ, ಮಾಯಸಂದ್ರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಸರ್ಕಾರ ನಿಷೇಧ ಮಾಡಿತ್ತು.

ಅದಾದ 15 ವರ್ಷಗಳ ನಂತರ ಮತ್ತೆ 2020 ರಿಂದ 2040 ರವರೆಗೆ ಗಣಿಗಾರಿಕೆ ನಡೆಸಲು ಸರ್ಕಾರ ಮತ್ತೇ ಪರವಾನಗಿ ನೀಡಿದೆ ಎಂದು ಆರ್‌ಟಿಐ ಕಾರ್ಯಕರ್ತರಾದ ರಾಮಚಂದ್ರ ಮತ್ತು ಆಂಜಿನಪ್ಪ ದೂರಿದ್ದಾರೆ.

ರಾಸಾಯನಿಕ ಬಳಿಸಿ ನಡೆಸುವ ಸ್ಫೋಟ ಮತ್ತು ಗಣಿದೂಳಿನಿಂದ ಮಕ್ಕಳ ಕಣ್ಣು, ಚರ್ಮ ಮತ್ತು ಶ್ವಾಸಕೋಶದಲ್ಲಿ ತೊಂದರೆ ಕಾಣಿಸುತ್ತಿವೆ. ಇದನ್ನು ಸಂಬಂಧಿಸಿದ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು 2017ರಲ್ಲಿ ವೈದ್ಯರ ತಂಡ ತಾಲ್ಲೂಕು ಆರೋಗ್ಯಾಧಿಕಾರಿಗೆ ವರದಿ ನೀಡಿತ್ತು. ವರದಿ ದೂಳು ತಿನ್ನುತ್ತಿದೆ. ಗಣಿದೂಳು ಮತ್ತಷ್ಟು ಹೆಚ್ಚುತ್ತಲೇ ಇದೆ ಎನ್ನುತ್ತಾರೆ ಸೊಣ್ಣೇನಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಪೋಷಕರು.

20 ವರ್ಷಗಳಿಂದ ಗಣಿಗಾರಿಕೆ
ಯಿಂದ ಸತ್ತವರಿಗೆ ಲೆಕ್ಕವಿಲ್ಲ. ಗಣಿಯಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರು ಒಡಿಶಾ, ಅಸ್ಸಾಂ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶವರಾಗಿದ್ದು, ಅತಿ ಕಡಿಮೆ ಕೂಲಿಗೆ ದುಡಿಸಿಕೊಳ್ಳಲಾಗುತ್ತಿದೆ ಎನ್ನುವುದು ಸ್ಥಳೀಯ ಗ್ರಾಮಸ್ಥರ ಆರೋಪ.

ತೈಲಗೆರೆ, ಮುದ್ದನಾಯಕನಹಳ್ಳಿ, ಮೀಸಗಾನಹಳ್ಳಿ ಗ್ರಾಮಗಳ ವ್ಯಾಪ್ತಿ ಕಾರಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿದೆ.

ಪಂಚಾಯತ್‍ರಾಜ್‍ ಅಧಿನಿಯಮ 1993 ರ ನಿಯಮ 107ರ ಉಪನಿಯಮದಂತೆ ಗಣಿಗಾರಿಕೆ ಸ್ಥಗಿತಗೊಳಿಸುವ ಮತ್ತು ತಡೆಹಿಡಿಯುವ ಅಧಿಕಾರ ಗ್ರಾಮ ಪಂಚಾಯಿತಿಗಿದೆ. ಇದರನ್ವಯ ಐದು ವರ್ಷಗಳ ಆಡಳಿತಾವಧಿಯಲ್ಲಿ ಮೂರು ಬಾರಿ ಸರ್ವ ಸದಸ್ಯರು ಠರಾವು ಮಂಡಿಸಿ ಗಣಿಗಾರಿಕೆ ನಿಲ್ಲಿಸುವಂತೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ರಾಜ್ಯ ಪಂಚಾಯತ್‍ ರಾಜ್‍ ಇಲಾಖೆಗೆ ಕಡತ ಕಳುಹಿಸಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಕಾರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವರಾಜ್‍.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT