ಭಾನುವಾರ, ಮೇ 29, 2022
22 °C
ಬೆಂಗಳೂರಿನ ಶುಭ ಸಮಾರಂಭಗಳಿಗೆ ಪೂರೈಕೆ l ಮರಗಳಿಗೆ ಹಾನಿ

ಹೆಚ್ಚಿದ ತೆಂಗಿನ ಗರಿಗಳ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಮಾಘಮಾಸ ಆರಂಭವಾದ ನಂತರ ಫೆ. 14ರಿಂದ ಮದುವೆ, ಹೊಸ ಮನೆಗಳ ಪ್ರವೇಶ, ನೂತನ ದೇವಾಲಯಗಳ ಉದ್ಘಾಟನೆ ಸೇರಿದಂತೆ ಹಲವಾರು ಶುಭ ಸಮಾರಂಭಗಳು ಆರಂಭವಾಗಿರುವ ಬೆನ್ನಲ್ಲೇ ತೆಂಗಿನ ತೋಟ, ಮಾವಿನ ತೋಟ ಹಾಗೂ ಬಾಳೆ ತೋಟಗಳಲ್ಲಿ ಕಳವು ಪ್ರಕರಣಗಳು ಮಿತಿಮೀರಿದ್ದು, ರೈತರು ರಾತ್ರಿ ಹಗಲೆನ್ನದೆ ಕಾದುಕುಳಿತುಕೊಳ್ಳುವಂತಾಗಿದೆ.

ಮದುವೆ ಮನೆಯ ಮುಂದೆ ಹಸಿರು ಚಪ್ಪರ ಹಾಕಲು ತೆಂಗಿನ ಗರಿ, ತೋರಣಕ್ಕೆ ಮಾವಿನ ಸೊಪ್ಪು ಹಾಗೂ ಗೊನೆ ಬಂದಿರುವ ಅಥವಾ ಚೆನ್ನಾಗಿ ಬೆಳೆದಿರುವ ಬಾಳೆ ಕಂದುಗೊನೆಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ, ಹೂ ಬಿಟ್ಟಿರುವ ಮಾವಿನ ಮರಗಳಲ್ಲಿ ರೈತರು ಮಾವಿನ ಸೊಪ್ಪನ್ನು ಕಿತ್ತು ಮಾರಾಟ ಮಾಡಲು ಇಷ್ಟಪಡುವುದಿಲ್ಲ. ಹಾಗೆಯೇ ತೆಂಗಿನ ಗರಿಗಳನ್ನು ಕತ್ತರಿಸಿದರೆ ತೆಂಗಿನಕಾಯಿಯ ಗೊನೆ ಮುರಿದು ಬೀಳುತ್ತದೆ ಎನ್ನುವ ಕಾರಣದಿಂದ ಗರಿಗಳನ್ನು ಹಣ ನೀಡಿದರೂ ಕತ್ತರಿಸುವುದಿಲ್ಲ. ಈ ಎಲ್ಲಾ ಕಾರಣದಿಂದಾಗಿ ಶುಭ ಸಮಾರಂಭಗಳಿಗೆ ತೆಂಗಿನ ಗರಿಗಳಿಗಾಗಿ ರಾತ್ರಿವೇಳೆ ತೋಟಗಳಿಗೆ ನುಗ್ಗಿ ಗರಿಗಳನ್ನು ಕಳವು
ಮಾಡಲಾಗುತ್ತಿದೆ.

ತಾಲ್ಲೂಕಿನ ನಂದಿಬೆಟ್ಟದ ತಪ್ಪಲಿನ ಮೇಳೆಕೋಟೆ ಸುತ್ತಮುತ್ತಲಿನ ಗ್ರಾಮಗಳ ರೈತರ ತೋಟಗಳಲ್ಲಿ ತೆಂಗಿನ ಗರಿ, ಮಾವಿನ ಸೊಪ್ಪು ಕಳವು ಮಿತಿಮೀರಿದೆ. ಮಳೆಕೋಟೆ ಗ್ರಾಮವೊಂದರಲ್ಲೇ ನಂಜೇಗೌಡ, ನಾರಾಯಣಪ್ಪ, ಮೋಹನ್‌, ಲಕ್ಷ್ಮಮ್ಮ ಎಂಬುವರ ತೋಟಗಳಲ್ಲಿನ ತೆಂಗಿನ ಮರಗಳು ಗರಿಗಳಿಲ್ಲದೆ ಬೋಳಾಗಿ ನಿಂತಿವೆ. ಬೆಂಗಳೂರಿನಲ್ಲಿ ಜೋಡಿ ತೆಂಗಿನ ಗರಿಗೆ ₹ 250 ದರ ನಿಗದಿಪಡಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಈ ದರ ₹ 300 ದಾಟುತ್ತದೆ. ಹಾಗಾಗಿ, ರಾತ್ರೋರಾತ್ರಿ ಕಳವು ಮಾಡಲಾಗುತ್ತಿದೆ ಎಂಬುದು ರೈತರ ದೂರು. 

ಯಾವುದಾದರು ವಸ್ತುಗಳು ಕಳುವಾದರೆ ಪೊಲೀಸರಿಗೆ ದೂರು ನೀಡಬಹುದು. ಆದರೆ ತೆಂಗಿನ ಗರಿ, ಮಾವಿನ ಸೊಪ್ಪು, ಬಾಳೆ ಕಂದು(ಗಿಡ)ಗಳು ಕಳುವಾಗುತ್ತಿವೆ ಎಂದು ಯಾವ ರೀತಿ ದೂರು ನೀಡುವುದು ಎನ್ನುವುದೇ ಗೊಂದಲವಾಗಿದೆ. ಹೀಗಾಗಿ ಮದುವೆಗಳು ಹೆಚ್ಚಾಗಿರುವ ಒಂದೆರಡು ದಿನಗಳ ಮೊದಲೇ ತೋಟಗಳಲ್ಲಿ ಕಾವಲು ಆರಂಭಿಸುವಂತಾಗಿದೆ ಎಂದು ರೈತರು ಅಳಲು
ತೋಡಿಕೊಂಡರು.

‘ಮಳೆ ಕೊರತೆ ಹಾಗೂ ಕೊಳವೆಬಾವಿಗಳಲ್ಲಿ ನೀರು ಪೂರೈಕೆ ಕೊರತೆಯಿಂದ ತೆಂಗಿನ ತೋಟಗಳು ತೊಂದರೆಗೆ ಸಿಲುಕಿವೆ. ರೋಗ ಬಾಧೆಗೂ ತುತ್ತಾಗುತ್ತಿವೆ. ಈ ನಡುವೆಯೇ ಶುಭ ಸಮಾರಂಭಗಳು ನಡೆಯುವ ಮುನ್ನಾ ದಿನಗಳಲ್ಲಿ ತೆಂಗಿನ ಗರಿಗಳ ಕಳವು ಹೆಚ್ಚುತ್ತಿದೆ. ಕಿಡಿಗೇಡಿಗಳ ಈ ಹಣದ ದಾಹವು ತೆಂಗಿನ ಮರಗಳ ಬೆಳವಣಿಗೆಗೆ ಮಾರಕವಾಗಿದೆ. ಪೊಲೀಸರು ಈ ಬಗ್ಗೆ ನಿಗಾವಹಿಸಿ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು’ ಎಂಬುದು ರೈತ ನಂಜೇಗೌಡ ಅವರ
ಒತ್ತಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು