ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾರದ ಒಳಗೆ ಮಾಹಿತಿ ನೀಡಿ’

ಪಿಎಂ ಕಿಸಾನ್‌ ಸಮ್ಮಾನ್ ನಿಧಿ ಯೋಜನೆ ಕಾರ್ಯಾಗಾರ
Last Updated 19 ಜೂನ್ 2019, 13:28 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಪಿಎಂ ಕಿಸಾನ್‌ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ವಾರ್ಷಿಕ ₹ 6 ಸಾವಿರ ಆರ್ಥಿಕ ನೆರವು ನೀಡಲು ಅಗತ್ಯ ಇರುವ ಸ್ವಯಂ ದೃಢೀಕರಣವನ್ನು ಗ್ರಾಮ ಲೆಕ್ಕಾಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುವ ಮೂಲಕ ಒಂದು ವಾರದ ಒಳಗೆ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎಸ್‌. ಕರೀಗೌಡ ಹೇಳಿದರು.

ಯೋಜನೆ ಅನುಷ್ಠಾನ ಕುರಿತಂತೆ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸೇರಿದಂತೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಸಲುವಾಗಿ ನಗರದ ಪುರಭವನದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.

ಈ ಹಿಂದೆ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರ ರೈತರು ಮಾತ್ರ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಆರ್ಥಿಕ ನೆರವು ಪಡೆಯಲು ಅರ್ಹರು ಎನ್ನುವ ನಿಯಮ ಇತ್ತು. ಆದರೆ ಈಗ ಈ ನಿಯಮವನ್ನು ತೆರವುಗೊಳಿಸಲಾಗಿದೆ. ಭೂಮಿ ಹೊಂದಿರುವ ಪ್ರತಿಯೊಬ್ಬ ರೈತರು ವಾರ್ಷಿಕ ₹ 6 ಸಾವಿರವನ್ನು ಎಲ್ಲ ರೈತರು ಪಡೆಯಲು ಅರ್ಹರಾಗಿದ್ದಾರೆ ಎಂದರು.

ಅರ್ಹರಲ್ಲ: ಆದರೆ ಸರ್ಕಾರಿ ನೌಕರರು ಸೇರಿದಂತೆ, ವಕೀಲರು, ಆದಾಯ ತೆರಿಗೆ ಪಾವತಿಸುವವರು, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರು ಮತ್ತು ಅಧ್ಯಕ್ಷರು ಈ ಯೋಜನೆಯಲ್ಲಿ ನೆರವು ಪಡೆಯಲು ಅರ್ಹರಾಗಿರುವುದಿಲ್ಲ. ಯೋಜನೆಯ ನೆರವು ಪಡೆಯಲು ಎಲ್ಲ ರೈತರಿಗೆ ಮಾಹಿತಿ ನೀಡುವ ಸಲುವಾಗಿ ಎಲ್ಲ ಚುನಾಯಿತ ಜನಪ್ರತಿನಿಧಿಗಳು ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಮನವಿ ಮಾಡಿ ಜಿಲ್ಲಾಡಳಿತದಿಂದ ಪತ್ರಗಳನ್ನು ಬರೆದು ಮನವಿ ಮಾಡಲಾಗಿದೆ ಎಂದರು.

ಯಾವೊಬ್ಬ ರೈತರು ಸಹ ಪಿಎಂ ಕಿಸಾನ್‌ ಯೋಜನೆಯಿಂದ ವಂಚಿತರಾಗದಂತೆ ಅಧಿಕಾರಿಗಳು ಎಚ್ಚರವ ಹಿಸಬೇಕು. ದಾಖಲೆಗಳನ್ನು ತ್ವರಿತವಾಗಿ ಆನ್‌ಲೈನ್‌ ಮೂಲಕ ದಾಖಲಿಸಲು ಅನುಕೂಲವಾಗುವಂತೆ ಮೊಬೈಲ್‌ ಆಪ್‌ ಅನ್ನು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ನೀಡಲಾಗುತ್ತಿದೆ. ಈ ಮೊಬೈಲ್‌ ಆ್ಯಪ್‌ ಮೂಲಕ ದಾಖಲಾಗುವ ಮಾಹಿತಿಯಿಂದ ಜುಲೈ 15ರ ವೆಳೆಗೆ ರೈತರ ಬ್ಯಾಂಕ್‌ ಖಾತೆಗಳಿಗೆ ಮೊದಲ ಕಂತಿನ ₹ 2 ಸಾವಿರ ಜಮಾ ಅಗಲಿದೆ ಎಂದರು.

ಎರಡನೇ ಕಂತಿನ ಹಣ ನಾಲ್ಕು ತಿಂಗಳಿಗೆ ಒಮ್ಮೆ ರೈತರ ಖಾತೆಗಳಿಗೆ ಜಮಾ ಆಗಲಿದೆ. ಮುಂದಿನ ಐದು ವರ್ಷಗಳ ಕಾಲ ಕೃಷಿ ಇಲಾಖೆಯಲ್ಲಿ ಈ ದಾಖಲೆಗಳು, ಮಾಹಿತಿಯನ್ನು ಸಂಗ್ರಹಿಸಿ ಇಡಲಾಗುವುದು. ಲೋಕಸಭಾ ಚುನಾವಣೆಗಿಂತ ಹಿಂದೆ ಅರ್ಜಿ ಸಲ್ಲಿಸಿರುವವರು ಸಹ ಸ್ವಯಂ ದೃಢೀಕರಣವನ್ನು ಗ್ರಾಮ ಲೆಕ್ಕಾಧಿಕಾರಿಗೆ ನೀಡಬೇಕು. ಸ್ವಯಂ ದೃಢೀಕರಣ ಪತ್ರದೊಂದಿಗೆ ರೈತರು ಆಧಾರ್‌ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕದ ನಕಲು ಪ್ರತಿಯನ್ನು ಮಾತ್ರ ನೀಡಬೇಕು ಎಂದರು.

ಉಪವಿಭಾಗಾಧಿಕಾರಿ ಸಿ.ಮಂಜುನಾಥ್‌, ತಹಶೀಲ್ದಾರ್‌ ಎಂ.ಕೆ.ರಮೇಶ್‌, ರಾಜಶೇಖರ್‌, ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕಿ ವಿನುತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT