ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲಿಮರ ತೆರವಿಗೆ ಕ್ರಮ ವಹಿಸಲು ಒತ್ತಾಯ 

Last Updated 10 ಮೇ 2019, 13:38 IST
ಅಕ್ಷರ ಗಾತ್ರ

ವಿಜಯಪುರ: ಬಯಲುಸೀಮೆ ಪ್ರದೇಶಗಳಿಗೆ ಎಚ್.ಎನ್.ವ್ಯಾಲಿ (ಹೆಬ್ಬಾಳ–ನಾಗವಾರ ಕಣಿವೆ) ಯೋಜನೆಯಡಿ ನೀರು ಹರಿಸುವುದಕ್ಕೂ ಮುನ್ನಕೆರೆಯಲ್ಲಿರುವ ಹೂಳು ಮತ್ತು ಜಾಲಿ ಮರಗಳನ್ನು ತೆರವು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಿಲ್ಲೆಯ ಬಹುತೇಕ ಕೆರೆಗಳನ್ನು ಜೀರ್ಣೋದ್ಧಾರಗೊಳಿಸುವ ಕೆಲಸ ಮಾಡುತ್ತಿದ್ದಾರಾದರೂ ನಮ್ಮ ಭಾಗದಲ್ಲಿನ ಕೆರೆಗಳಲ್ಲಿ ಬೆಳೆದು ನಿಂತಿರುವ ಜಾಲಿ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿಲ್ಲ ಎಂದು ರೈತಲಕ್ಷ್ಮೀನಾರಾಯಣ ಹೇಳಿದರು.

ಪೈಪ್‌ಲೈನ್‌ಗಳು ದೇವನಹಳ್ಳಿಯ ಮೂಲಕ ಹಾದು ಹೋಗುತ್ತಿವೆ. ಇಲ್ಲಿನ ಮತ್ತಷ್ಟು ಕೆರೆಗಳಿಗೆ ನೀರು ತುಂಬಿಸಲು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಶಾಸಕರು ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿನ ಪಾಪಾಗ್ನಿ ನದಿ ಅಭಿವೃದ್ಧಿಗೆ ಸಂಸದರ ನಿಧಿಯಿಂದ ₹ 90 ಲಕ್ಷ ಅನುದಾನ ಬಿಡುಗಡೆಯಾಗಿದೆ. ಆದರೆ, ಈ ಭಾಗದಲ್ಲಿ ಹಾದುಹೋಗುವ ದಕ್ಷಿಣ ಪಿನಾಕಿನಿ ನದಿಯ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ನಿಂದ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿದೆ. ಕೋಲಾರದ ಭಾಗಕ್ಕೆ ಈಗಾಗಲೇ ನೀರು ಹರಿಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಯಾವಾಗ ನೀರು ಹರಿಯಲಿದೆ ಎಂದು ಕಾದು ಕುಳಿತುಕೊಂಡಿದ್ದೇವೆ ಎಂದು ನಾರಾಯಣಪ್ಪ ಹೇಳಿದರು.

ಮುಂದಿನ ಆರು ತಿಂಗಳಲ್ಲಿ ಈ ಭಾಗಕ್ಕೆ ಎಚ್.ಎನ್.ವ್ಯಾಲಿ ನೀರು ಹರಿಯಲಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಮತ್ತು ಸಂಸದ ಎಂ.ವೀರಪ್ಪ ಮೊಯಿಲಿ ಅವರು ಆಶ್ವಾಸನೆ ನೀಡಿದ್ದರು. ಕೊಳಚೆ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಣ ಮಾಡಿ ನೀಡುತ್ತಿಲ್ಲ ಎಂದು ನೀರಾವರಿ ಹೋರಾಟ ಸಮಿತಿಯವರು ಸುಪ್ರೀಂಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರಿಂದ ಈ ಭಾಗದ ಕೆರೆಗಳಿಗೆ ನೀರು ಹರಿಯುವುದು ವಿಳಂಬವಾಗಿತ್ತು. ಈಗ ತಡೆಯಾಜ್ಞೆ ತೆರವಾಗಿದೆ ಎಂದು ಸ್ಥಳೀಯರಾದಹರೀಶ್, ನಾಗರಾಜ್, ಅಶೋಕ್‌ಕುಮಾರ್, ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನಲ್ಲಿನ ಎಲ್ಲಾ ಕೆರೆಗಳನ್ನು ಈಗಾಗಲೇ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೇ ಮಾಡಿ, ಗಡಿ ಗುರುತಿಸಿದ್ದಾರೆ. ಕೆರೆಗಳಿಗೆ ಟ್ರಂಚ್‌ ಮಾಡಿ ಅತಿಕ್ರಮ ಪ್ರವೇಶ ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೂ ಕೆರೆಗಳ ಒತ್ತುವರಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಮುಖಂಡ ಹನುಮಂತರಾಯಪ್ಪ ದೂರಿದರು.

‘ಬಯಲು ಸೀಮೆಯಲ್ಲಿ ನೀರಿಗೆ ಇಷ್ಟೊಂದು ಹಾಹಾಕಾರ ಉಂಟಾಗಲು ನೀಲಗಿರಿ ಮತ್ತು ಜಾಲಿ ಮರಗಳೇ ಕಾರಣ. ಇವುಗಳ ತೆರವಿಗೆ ಸಾಕಷ್ಟು ಬಾರಿ ಸರ್ಕಾರದ ಮೇಲೆ ಒತ್ತಡ ತಂದರೂ ಪ್ರಯೋಜನವಾಗಿಲ್ಲ. ನೀಲಗಿರಿ ಮತ್ತು ಅಕೇಶಿಯಾ ಮರಗಳ ತೆರವಿಗೆ ನ್ಯಾಯಾಲಯದ ನಿರ್ದೇಶನವಿದ್ದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರದೇಶದಲ್ಲಿಯೂ ನೀಲಗಿರಿ ಮರಗಳು ದಟ್ಟವಾಗಿ ಬೆಳೆದು ನಿಂತಿವೆ. ಇವುಗಳ ತೆರವಿಗೆ ಯಾರೂ ಆಸಕ್ತಿ ವಹಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಮುಖಂಡ ಮೂರ್ತಿ ಮಾತನಾಡಿ, ‘ಕೆರೆ ಸಂಜೀವಿನಿ ಯೋಜನೆಯಡಿಯಲ್ಲಿ 2017ನೇ ಸಾಲಿನಲ್ಲಿ ಮೂರು ಕೆರೆಗಳನ್ನು ಆಯ್ಕೆ ಮಾಡಲಾಗಿತ್ತು. ಒಂದೊಂದು ಕೆರೆಗೆ ತಲಾ ₹ 5 ಲಕ್ಷ ಬಿಡುಗಡೆಯಾಗಿತ್ತು. ಕೆರೆಯಲ್ಲಿನ ಹೂಳು ತೆಗೆಯಲು ಈ ಅನುದಾನ ಬಳಕೆ ಮಾಡಿಕೊಳ್ಳುವಂತೆ ಸರ್ಕಾರ ನಿರ್ದೇಶನ ನೀಡಿತ್ತು. ಆದರೂ ಸಮರ್ಪಕವಾಗಿ ಕೆರೆಗಳ ಅಭಿವೃದ್ಧಿಯಾಗಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT