ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಕಾಲಮಿತಿ’

ಪ್ರಜಾ ವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಬಳಗದ ಪ್ರಯತ್ನಕ್ಕೆ ಪ್ರಸಂಶನೆಯ ಮಹಾ ಪೂರ
Last Updated 7 ಡಿಸೆಂಬರ್ 2018, 13:46 IST
ಅಕ್ಷರ ಗಾತ್ರ

ದೇವನಹಳ್ಳಿ: ‘ನಾಗರಿಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಧ್ವನಿಯಾಗುವ ಮೂಲಕ ‘ಪ್ರಜಾವಾಣಿ’ ಮತ್ತು ಡೆಕ್ಕನ್‌ ಹೆರಾಲ್ಡ್’ ಪತ್ರಿಕೆಗಳು ಸಾಮಾಜಿಕ ಕಳಕಳಿ ತೋರಿವೆ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಪ್ರಸಂಶಿಸಿದರು.

‌ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ‘ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಒಳಗದ ವತಿಯಿಂದ ಆಯೋಜಿಸಿದ್ದ ಜನಸ್ಪಂದನ ಸಿಟಿಜನ್ಸ್ ಫಾರ್ ಚೇಂಜ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ಷೇತ್ರದಲ್ಲಿ ಸಮಸ್ಯೆಗಳಿಗೆ ಕೊರತೆ ಇಲ್ಲ. ಕಾಲಮಿತಿಯೊಳಗೆ ಕಾಯಕಲ್ಪ ನೀಡಬೇಕಿದೆ. ಜನರು ಸಮಸ್ಯೆಗಳಿಗೆ ಪರಿಹಾರ ಕೋರಿ ಮನವಿ ಸಲ್ಲಿಸಿ ಮನೆಯಲ್ಲೇ ಕುಳಿತುಕೊಂಡರೆ ಎಲ್ಲ ಸಮಸ್ಯೆಗಳು ಬಗೆಹರಿಯುವುದಿಲ್ಲ. ನೀಡಿರುವ ಅಹವಾಲುಗಳಿಗೆ ಸಂಬಂಧಿಸಿದ ಅಧಿಕಾರಿಗಳ ಬೆನ್ನಹಿಂದೆ ಬೀಳಬೇಕು. ಜನಪ್ರತಿನಿಧಿಗಳಾದ ನಾವು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡರೆ ತ್ವರಿತವಾಗಿ ಸಮಸ್ಯೆಗಳು ಬಗೆಹರಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದು ಸಲಹೆ ನೀಡಿದರು.

‘ಮೊದಲ ಬಾರಿಗೆ ಶಾಸಕನಾಗಿರುವ ನನಗೆ ರಾಜಕೀಯ ಅನುಭವ ಇಲ್ಲ. ಆದರೆ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಸರ್ಕಾರದ ಜಾಗ ಒಂದು ಆಡಿ ಒತ್ತುವರಿ ಮಾಡಿದರು ತೆರವುಗೊಳಿಸುವುದು ಅನಿವಾರ್ಯ. ಕಾನೂನು ಮೀರಿ ಒತ್ತುವರಿಗೆ ಅವಕಾಶವಿಲ್ಲ. ನಾನು ಶಾಸಕವಾಗಿ ಆರು ತಿಂಗಳು ಕಳೆದಿದೆ. ಆಯ್ಕೆಯಾದ ನಂತರ ನಡೆದ ಮೊದಲ ಸಭೆ ಟೋಲ್ ಸುಂಕ ಹೆಚ್ಚುವರಿ ವಸೂಲಿ ಜತೆಗೆ ಬಿ.ಎಂ.ಟಿ.ಸಿ ಬಸ್‌ಗಳಲ್ಲಿ ಪ್ರತಿ ಟ್ರಿಪ್‌ಗೆ ₹6 ಹೆಚ್ಚುವರಿಯಾಗಿ ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತಿದೆ ಎಂದು ದೂರಿಗೆ ಎರಡು ಇಲಾಖೆ ಅಧಿಕಾರಿಗಳನ್ನು ಕರೆಯಿಸಿ ಮಾತನಾಡಿದ ಸಂದರ್ಭದಲ್ಲಿ ಹೆಚ್ಚುವರಿ ವಸೂಲಿ ಮಾಡುವುದಿಲ್ಲವೆಂದು ಹೇಳಿದ್ದರು. ಮತ್ತೆ ವಸೂಲಿ ಎಂದರೆ ಹೇಗೆ’ ಎಂದು ಕೇಳಿದರು.

‘ಹೆದ್ದಾರಿ ರಸ್ತೆ ವಿಸ್ತರಣೆ ಮತ್ತು ವಿಮಾನ ನಿಲ್ದಾಣಕ್ಕೆ ಸ್ವಾಧೀನ ಪಡಿಸಿಕೊಂಡ ಪ್ರತಿ ಎಕರೆ ಫಲವತ್ತಾದ ರೈತರ ಭೂಮಿಗೆ ಕೇವಲ ₹6 ಲಕ್ಷದಿಂದ ಆರಂಭಗೊಂಡು ₹20 ಲಕ್ಷಕ್ಕೆ ಮುಗಿಸಿಬಿಟ್ಟಿದ್ದಾರೆ. ರೈತರು ಸ್ಥಳೀಯವಾಗಿ ಟೋಲ್ ಸುಂಕ ಕಟ್ಟಬೇಕು ಎಂದರೆ ಹೇಗೆ ಇದರ ಬಗ್ಗೆ ಅಧಿವೇಶನದಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆಯುತ್ತೇನೆ’ ಎಂದರು.

ಶಾಸಕನಾದ ನಂತರ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೂತ್ರ ಪಿಂಡ ಸಮಸ್ಯೆ, ಹೃದಯ ಶಸ್ತ್ರ ಚಿಕಿತ್ಸೆ ಸೇರಿದಂತೆ ವಿವಿಧ ರೋಗಗಳಿಂದ ಬಳಲುತ್ತಿರುವ 150 ಅರ್ಹರಿಗೆ ಪರಿಹಾರ ಸಿಕ್ಕಿದೆ. 224 ಕ್ಷೇತ್ರಗಳಲ್ಲಿ ದೇವನಹಳ್ಳಿ ಕ್ಷೇತ್ರದಿಂದ ಅತಿ ಹೆಚ್ಚು ಪರಿಹಾರ ಸಿಕ್ಕದೆ ಎಂದರು .

‘6 ತಿಂಗಳಲ್ಲಿ ₹70 ಕೋಟಿ ಅನುದಾನ ಕ್ಷೇತ್ರದ ಅಭಿವೃದ್ಧಿಗಾಗಿ ತಂದಿದ್ದೇನೆ. ಇದನ್ನು ಹೊರತು ಪಡಿಸಿ ಇತ್ತೀಚೆಗೆ 25 ಕೋಟಿ ವಿಶೇಷ ಅನುದಾನ ತಂದಿದ್ದೇನೆ. ಸುವರ್ಣ ಗ್ರಾಮ ಯೋಜನೆಯಡಿ ಎರಡು ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು ತಲಾ 75 ಲಕ್ಷ ಬಿಡುಗಡೆಯಾಗಿದೆ. ವಿಜಯಪುರ ಪಟ್ಟಣದಲ್ಲಿ ರಾಜ್ಯ ರಸ್ತೆ ಸಾರಿಗೆ ಡಿಪೊ ಕಾಮಗಾರಿಗೆ ಗುದ್ದಿಲಿ ಪೂಜೆ ನಡೆಸಬೇಕಾಗಿತ್ತು. ಅಧಿವೇಶನ ಮುಗಿದ ನಂತರ ಅನೇಕ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಲಾಗುವುದು ಎಂದರು.

‘ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಾಣಕ್ಕೆ ಸಾರ್ವಜನಿಕರು ಅಹವಾಲು ನೀಡಿದ್ದಾರೆ. ಇದು ನನ್ನ ಅಭಿವೃದ್ಧಿ ಕಾರ್ಯಸೂಚಿಯಲ್ಲಿದೆ. ಕನ್ನಮಂಗಲ ಗೇಟ್ ಮತ್ತು ಕನ್ನಮಂಗಲ ಪಾಳ್ಯದ ಬಳಿ ರಸ್ತೆಗೆ ರಾತ್ರಿ ವೇಳೆ ಬೀದಿ ದೀಪಗಳಿಲ್ಲ. ರಸ್ತೆಗೆ ಬಿಳಿಗೆರೆ ಹಾಕಿಲ್ಲ, ಅಪಘಾತಗಳು ಹೆಚ್ಚುತ್ತಿವೆ ಎಂದು ಪುರಸಭೆ ಸದಸ್ಯ ರವೀಂದ್ರ ಸಮಸ್ಯೆ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳತ್ತೇನೆ’ ಎಂದರು.

ಕಂದಾಯ ಮತ್ತು ಸರ್ವೇ ಇಲಾಖೆಯಲ್ಲಿ ಹೆಚ್ಚಿನ ಸಮಸ್ಯೆಗಳಿವೆ ಯಾಕೆ ಎಂದು ಗೊತ್ತಿಲ್ಲ. ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಯಾವುದೇ ಕೋಮುಗಲಭೆ ಇಲ್ಲ. ಪ್ರತಿಯೊಂದು ಇಲಖೆಗಳು ಸಾಮಾಜಿಕ ಕಾಳಜಿ ಇಟ್ಟುಕೊಂಡು ಕೆಲಸ ಮಾಡಿದರೆ ನನ್ನ ಬಳಿಗೆ ಯಾವುದೇ ದೂರುಗಳು ಬರುವುದಿಲ್ಲ. ಅಧಿಕಾರಿಗಳು ಸಾಥ್ ನೀಡಿದರೆ ಇತಿಹಾಸ ಸೃಷ್ಟಿಸಬಹುದು ಎಂದರು.

ಹಿಂದಿನ ಸರ್ಕಾರದಲ್ಲಿ ನಡೆದಿರುವ ಕಾಮಗಾರಿ ಮುಗಿದಿವೆ. ಅದನ್ನು ಮಾತ್ರ ಉದ್ಘಾಟನೆ ಮಾಡಲಾಗುತ್ತಿದೆ. ಹೊಸ ಕಾಮಗಾರಿಗೆ ಭೂಮಿ ಪೂಜೆ ನಡೆಸಬೇಕಾಗಿದೆ. ಕ್ಷೇತ್ರದಲ್ಲಿರುವ 8 ದೇವಾಲಯಗಳಿಗೆ ತಲಾ ₹2 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ರಸ್ತುತ ದೇವನಹಳ್ಳಿ ತಾಲ್ಲೂಕನ್ನು ಜಿಲ್ಲಾ ಕೇಂದ್ರ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕು. ಹೈಟೆಕ್ ಬಸ್ ನಿಲ್ದಾಣ ತಾಲ್ಲೂಕು ಕೇಂದ್ರದಲ್ಲಿ ಆಗಬೇಕು. ಜಿಲ್ಲಾ ಕೇಂದ್ರದಿಂದ ಸಂಪರ್ಕಿಸುವ ಎಲ್ಲ ಸಂಪರ್ಕ ರಸ್ತೆಯಲ್ಲಿ ಬಿ.ಎಂ.ಟಿ.ಸಿ.ಎಸ್ ಸಂಚಾರದ ವ್ಯವಸ್ಥೆಯಾಗಬೇಕು. ಪ್ರತಿಯೊಂದು ಬಡಾವಣೆಯಲ್ಲಿ ಒಂದು ಉದ್ಯಾನವನಕ್ಕಾಗಿ ಜಾಗ ಮೀಸಲಿರುತ್ತದೆ. ಅಂತಹ ಕಡೆ ಉದ್ಯಾನವನ ಅಭಿವೃದ್ಧಿ ಪಡಿಸಬೇಕು ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ವತಿಯಿಂದ ಪ್ರತಿ ಹೋಬಳಿ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆದರೆ ಅನೇಕ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಮಾತನಾಡಿ, ‘ಇಂದಿನ ಜನಸ್ಪಂದನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ, ಸರ್ಕಾರ ನಡೆಸುವ ಜಿಲ್ಲಾ ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅಷ್ಟೊಂದು ಸಮಸ್ಯೆಗಳು ಕಂಡುಬಂದಿರಲಿಲ್ಲ ಎಂದರು.

ತಾಲ್ಲೂಕಿನಲ್ಲಿ ಎರಡು ಪುರಸಬೆ, 15 ತಾಲ್ಲೂಕು ಪಂಚಾಯಿತಿ, 4 ಜಿಲ್ಲಾ ಪಂಚಾಯಿತಿ ಸದಸ್ಯರಿದ್ದಾರೆ. ಎರಡೂವರೆ ವರ್ಷಗಳಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಆನೇಕ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಕೊಳವೆ ಬಾವಿ, ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಸಿಮೆಂಟ್ ಮತ್ತು ಡಾಂಬರು ರಸ್ತೆ, ಶಾಲಾ ಕಾಲೇಜು ಕೊಠಡಿಗಳ ನಿರ್ಮಾಣ ಮಾಡಲಾಗಿದೆ. ನಿವೇಶನ ಇಲ್ಲದಿರುವರನ್ನು ವಸತಿ ಯೋಜನೆಯಲ್ಲಿ ಗುರುತಿಸಲಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಎಂ.ಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ತಹಶೀಲ್ದಾರ್ ಎಂ.ರಾಜಣ್ಣ, ಎ.ಪಿ.ಎಂ.ಸಿ ಅಧ್ಯಕ್ಷ ಕೆ.ವಿ. ಮಂಜುನಾಥ್, ಉಪವಿಭಾಗಧಿಕಾರಿ ಮಂಜುನಾಥ್,ಹಾಪ್ ಕಾಮ್ಉಪಾಧ್ಯಕ್ಷ ಬಿ.ಮುನೇಗೌಡ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಪುರಸಭೆ ಸದಸ್ಯ ರವೀಂದ್ರ, ಬೇಕರಿ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ವಿಜಯಪುರ ಪುರಸಭೆ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಪೊಲೀಸ್ ಇನ್‌ಸ್ಪೆಕ್ಟರ್ ಶಿವಕುಮಾರ್, ಸಬ್‌ ಇನ್‌ಸ್ಪೆಕ್ಟರ್ ಪ್ರಕಾಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎನ್.ಮಂಜುಳ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್, ಬೆಸ್ಕಾಂ ಎಂಜಿಯರ್ ಷಡಾಕ್ಷರಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್, ಬಿ.ಎಂ.ಟಿ.ಸಿ ವಿಭಾಗೀಯ ವ್ಯವಸ್ಥಾಪಕ ಹಿರೇಮಠ್ ಇದ್ದರು. ಹೆಣ್ಣು ಮಕ್ಕಳ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ನಾಡಗೀತೆ ಮತ್ತು ರೈತ ಗೀತೆ ಹಾಡುವ ಮೂಲಕ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT