ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್‌: ವಿವಿಧೆಡೆ ಸಂಚರಿಸಿದ ಕನ್ನಡ ಜ್ಯೋತಿ ರಥಯಾತ್ರೆ

Published : 11 ಆಗಸ್ಟ್ 2024, 14:31 IST
Last Updated : 11 ಆಗಸ್ಟ್ 2024, 14:31 IST
ಫಾಲೋ ಮಾಡಿ
Comments

ಆನೇಕಲ್ : ಕರ್ನಾಟಕ ಸಂಭ್ರಮ-50 ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನ ಪ್ರಯುಕ್ತ ರಾಜ್ಯದ ವಿವಿಧೆಡೆ ಸಂಚರಿಸಿ ಆನೇಕಲ್‌ಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಶಾಸಕ ಬಿ.ಶಿವಣ್ಣ ಮತ್ತು ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ್‌ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಭಾನುವಾರ ಬರಮಾಡಿಕೊಂಡರು.

ಕನ್ನಡ ಜ್ಯೋತಿ ರಥಯಾತ್ರೆ ಪ್ರಯುಕ್ತ ಹೆಬ್ಬಗೋಡಿಯಲ್ಲಿ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಆಯೋಜಿಸಲಾಗಿತ್ತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಮೆರವಣಿಗೆಗೆ ಮೆರುಗು ನೀಡಿದರು. ವೀರಗಾಸೆ, ಡೊಳ್ಳು ಕುಣಿತ, ತಮಟೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದವು.

ರಥಯಾತ್ರೆಗೆ ಹೆಬ್ಬಗೋಡಿಯಲ್ಲಿ ಚಾಲನೆ ನೀಡಲಾಯಿತು. ಹೆಬ್ಬಗೋಡಿ, ಬೊಮ್ಮಸಂದ್ರ, ಚಂದಾಪುರ, ಅತ್ತಿಬೆಲೆ ಗಡಿ, ಆನೇಕಲ್‌, ಜಿಗಣಿ, ಬನ್ನೇರುಘಟ್ಟಗಳಲ್ಲಿ ರಥಯಾತ್ರೆಯು ಸಾಗಿತು. ರಥಯಾತ್ರೆ ಎಲ್ಲೆಡೆ ಸಂಭ್ರಮದಿಂದ ಸ್ವಾಗತಿಸಲಾಯಿತು. ಮಹಿಳೆಯರು ಮಂಗಲ ಕಲಶ ಹೊತ್ತು ರಥಯಾತ್ರೆಗೆ ಪೂಜೆ ಸಲ್ಲಿಸಿದರು. ಭುವನೇಶ್ವರಿ ಮಾತೆಗೆ ಹೂವು ಎಸೆಯುವ ಮೂಲಕ ರಥವನ್ನು ಸ್ವಾಗತಿಸಿದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ಕನ್ನಡ ಜೀವನದ ಭಾಗವಾಗಬೇಕು. ಕನ್ನಡವನ್ನು ಬಳಸುವುದರಿಂದ ಭಾಷೆ ಶ್ರೇಷ್ಠತೆ ಮತ್ತಷ್ಟು ಹೆಚ್ಚುತ್ತದೆ. 2023 ನವೆಂಬರ್‌ ತಿಂಗಳಿನಲ್ಲಿ ರಥಯಾತ್ರೆಯನ್ನು ವಿಜಯನಗರ ಜಿಲ್ಲೆ ಹಂಪೆಯಲ್ಲಿ ಪ್ರಾರಂಭಿಸಲಾಯಿತು. ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ರಥಯಾತ್ರೆ ಸಂಚರಿಸಲಿದೆ ಎಂದರು.

ಆನೇಕಲ್‌ ತಾಲ್ಲೂಕು ಗಡಿ ತಾಲ್ಲೂಕಾಗಿದೆ. ಐದು ಕೈಗಾರಿಕಾ ಪ್ರದೇಶಗಳಿದ್ದು ಕೈಗಾರಿಕೆಗಳು, ಕೆಲಸಗಳಿಗಾಗಿ ವಿವಿಧ ರಾಜ್ಯಗಳಿಂದ ತಾಲ್ಲೂಕಿಗೆ ಜನರು ಬರುತ್ತಾರೆ. ಹಾಗಾಗಿ ಕಾರ್ಮಿಕರೊಂದಿಗೆ ಕನ್ನಡದಲ್ಲಿಯೇ ವ್ಯವಹಾರ ನಡೆಸುವ ಮೂಲಕ ಕನ್ನಡವನ್ನು ಕಲಿಸುವ ಕೆಲಸಗಳಾಗಬೇಕು ಎಂದರು.

ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ್‌ ಮಾತನಾಡಿ, ಕನ್ನಡ ಪ್ರೇಮ ನವೆಂಬರ್ ತಿಂಗಳಿಗೆ ಸೀಮಿತವಾಗದೆ ಪ್ರತಿನಿತ್ಯದ ಭಾಗವಾಗಬೇಕು. ಕನ್ನಡ ನಾಡು ನುಡಿ, ಸಂಸ್ಕೃತಿ, ಪರಂಪರೆಗಳಿಂದ ಅಲಂಕೃತವಾಗಿರುವ ಒಂದು ಶಕ್ತಿ. ಕನ್ನಡ ನಮ್ಮೆಲ್ಲರ ಮಂತ್ರವಾಗಬೇಕು. ಕನ್ನಡವೇ ನಮ್ಮ ಉಸಿರಾಗಬೇಕು ಎಂದರು.

ಆನೇಕಲ್ ಪಟ್ಟಣದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜಾನಪದ ಕಲಾತಂಡಗಳ ನೋಟ
ಆನೇಕಲ್ ಪಟ್ಟಣದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜಾನಪದ ಕಲಾತಂಡಗಳ ನೋಟ
ಆನೇಕಲ್ ಪಟ್ಟಣದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯ ಆಕರ್ಷಕ ನೋಟ
ಆನೇಕಲ್ ಪಟ್ಟಣದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯ ಆಕರ್ಷಕ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT