ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಕಲಾವಿದರ ನೆರವಿಗೆ ಸರ್ಕಾರ ಮುಂದಾಗಲಿ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ಒತ್ತಾಯ
Last Updated 7 ಡಿಸೆಂಬರ್ 2019, 13:16 IST
ಅಕ್ಷರ ಗಾತ್ರ

ವಿಜಯಪುರ: ‘ಬಡತನ ಮೆಟ್ಟಿನಿಂತು, ರಂಗಕಲೆಗಾಗಿ ಸಮರ್ಪಿಸಿಕೊಂಡು ಮುನ್ನಡೆಯುತ್ತಿರುವ ಕಲಾವಿದರ ಬದುಕು ಹಸನಾಗಬೇಕಾದರೆ ಸರ್ಕಾರ ಅವರ ನೆರವಿಗೆ ಧಾವಿಸಬೇಕು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ಹೇಳಿದರು.

ಇಲ್ಲಿನ ಆದಿಮಲ್ಲಮ್ಮ ಕಲಾವಿದರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾವ್ಯ ಮತ್ತು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಮಹತ್ತರ ಕಾಣಿಕೆ ನೀಡಿದ ಮಹಾನ್ ದಾರ್ಶನಿಕ ಕನಕದಾಸರ ಸಾಮಾಜಿಕ ಕ್ರಾಂತಿ ಸದಾ ಸ್ಮರಣೀಯ. ಬೈಲಾಟಗಳು ಜನಪದ ಪರಂಪರೆಯ ಭಾಗಗಳಾಗಿವೆ. ಆರಂಭದ ಕಾಲದಲ್ಲಿ ರಂಗಕಲಾವಿದರು ನಿಜವಾದ ನಾಯಕರಾಗಿದ್ದರು. ಅವರಿಗೆ ಸಾಮಾಜಿಕ ಮಾನ್ಯತೆ, ಗೌರವ ಸಿಗುತ್ತಿತ್ತು. ಆದರೆ ಇಂದು ಆಧುನೀಕರಣದ ಸುಳಿಗೆ ಸಿಲುಕಿ ಅಳಿದುಳಿದ ರಂಗಕಲಾವಿದರು ಬದುಕುವ ಸಲುವಾಗಿ ಹೋರಾಟ ಮಾಡುತ್ತಿದ್ದು, ಅವರು ಗೌರವ ಹೊರತುಪಡಿಸಿ ಎಲ್ಲವನ್ನು ಕಳೆದುಕೊಂಡಿದ್ದಾರೆ’ ಎಂದರು.

‘ಚಿಮಣಿ ದೀಪದ ದಿನಮಾನಗಳಲ್ಲಿ ಜಾತ್ರೆ, ಹಬ್ಬ, ಹರಿದಿನಗಳಲ್ಲಿ ಬೈಲಾಟಗಳು ಗ್ರಾಮೀಣರಿಗೆ ಮನರಂಜನೆ ನೀಡಿ ಅವರಲ್ಲಿ ಭಕ್ತಿಯ ಬೀಜ ಬಿತ್ತುವುದಲ್ಲದೆ, ಜನರನ್ನು ಧರ್ಮದ ಪಥದತ್ತ ಸಾಗಿಸುವಷ್ಟು ಪ್ರಭಾವಶಾಲಿಯಾಗಿದ್ದವು. ಚಲನಚಿತ್ರ, ದೂರದರ್ಶನ ಬಂದ ನಂತರ ನಾಟಕ ಪ್ರದರ್ಶನ ಹಾಗೂ ರಂಗಭೂಮಿಯತ್ತ ಒಲವು ಕ್ಷೀಣಿಸತೊಡಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಲಾವಿದ ಪ್ರಸನ್ನ ಕುಮಾರ್ ಮಾತನಾಡಿ, ‘ರಂಗಕಲಾವಿದರು ನಿರುದ್ಯೋಗಿಗಳಾಗಿ ಕಷ್ಟದಲ್ಲಿ ಬದುಕುತ್ತಿದ್ದು, ಅವರಿಗೆ ಸರ್ಕಾರ ಹಾಗೂ ಸಮುದಾಯದ ಸಹಾಯ, ಸಹಕಾರ ಅವಶ್ಯಕ. ರಂಗಕಲೆ ಜೀವಂತ. ಹಿಂದಿನ ಹಿರಿಯ ಕಲಾವಿದರು ಬೈಲಾಟ ನಾಟಕಗಳ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ, ನಟನಾ ಕೌಶಲ್ಯದ ಮೂಲಕ ಗ್ರಾಮೀಣರನ್ನು ರಂಜಿಸಿ ಜನಪ್ರಿಯತೆ ಪಡೆದಿದ್ದರು’ ಎಂದರು.

‘ಅವಸಾನದ ಅಂಚಿನಲ್ಲಿರುವ ರಂಗ ಕಲೆಯನ್ನು, ಕಲಾವಿದರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೆರವಿನ ಅವಶ್ಯಕತೆಯಿದೆ. ಇಂತಹ ರಂಗಭೂಮಿ ಕ್ಷೇತ್ರದಲ್ಲಿಯೇ ಸಾಧಿಸಬೇಕೆಂಬ ಹಂಬಲ ಇಟ್ಟುಕೊಂಡು ಆ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಹಲವು ರಂಗಾಸಕ್ತರನ್ನು ಪ್ರೋತ್ಸಾಹಿಸಬೇಕಿದೆ’ ಎಂದರು.

ರಂಗಭೂಮಿ ಕಲಾವಿದರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT