ಸೋಮವಾರ, ಜನವರಿ 17, 2022
21 °C
ನಿಯಮ ಪಾಲಿಸಿ; ಇಲ್ಲದಿದ್ದರೆ ಕಷ್ಟ: ಸಚಿವ ಎಂ.ಟಿ.ಬಿ.ನಾಗರಾಜ್‌ ಎಚ್ಚರಿಕೆ

ಅನಿವಾರ್ಯವಾದರೆ ಲಾಕ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ‘ಕೋವಿಡ್-19 ತಡೆಗಟ್ಟಲು ಸಾರ್ವಜನಿಕರು ಸಹಕರಿಸದಿದ್ದರೇ ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಸರ್ಕಾರ ‘ಲಾಕ್ ಡೌನ್’ ತರಬೇಕಾಗುತ್ತದೆ. ಕಳೆದ ‘ಲಾಕ್ ಡೌನ್’ ಗಳಲ್ಲಿ ಸಾರ್ವಜನಿಕರು, ರೈತರು, ವ್ಯಾಪರಸ್ಥರು ಅನುಭವಿಸಿದ ಕಷ್ಟ ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಾಗಿ ಸೇರಿ ಕೋವಿಡ್-19 ನಿಯಂತ್ರಿಸಬೇಕಾಗಿದೆ’ ಎಂದು ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದರು.

ಸೂಲಿಬೆಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ, 15-18 ವರ್ಷದ ಮಕ್ಕಳ ಕೋವಿಡ್-19 (ಕೊವ್ಯಾಕ್ಸಿನ್) ಲಸಿಕಾಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಆರೋಗ್ಯದ ವಿಚಾರದಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಆದರೆ ಆರೋಗ್ಯ ಕಾಪಾಡಿಕೊಳ್ಳುವುದು ಹಾಗೂ ಸಮಾಜವನ್ನು ಆರೋಗ್ಯವಂತ ಇಡುವುದರಲ್ಲಿ ಪ್ರತಿಯೊಬ್ಬ ಸಾರ್ವಜನಿಕರ, ಸಮಾಜದ ಸಹಕಾರ ಮುಖ್ಯ. ನಿಯಮಗಳನ್ನು ಪಾಲಿಸಿ, ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಸಹಕರಿಸಿ ಮಾರಕ ರೋಗಗಳನ್ನು ತಡೆಗಟ್ಟಬೇಕು. ಎರಡು-ಮೂರು ದಿನಗಳಿಂದ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ವರದಿಯಾಗುತ್ತಿವೆ. ಪ್ರಕರಣಗಳನ್ನು ನಿಯಂತ್ರಿಸುವುದು ಶೇ 50ರಷ್ಟು ಸರ್ಕಾರದ ಕಡೆಯಿಂದ ಸಾಧ್ಯವಾದರೆ ಉಳಿದ ಶೇ 50 ನಿಯಂತ್ರಣ, ಸಾರ್ವಜನಿಕರು ಸರ್ಕಾರ ಸೂಚಿಸಿದ ನಿಯಮಾವಳಿಗಳನ್ನು ಪಾಲಿಸಿ ಸಹಕರಿಸುವ ಮೂಲಕ ಸಾಧ್ಯ’ ಎಂದರು.

ಜಿಲ್ಲೆಯಲ್ಲಿ ಕೋವಿಡ್-19 ಮೊದಲ ಲಸಿಕೆ ಶೇ 96, 2ನೇ ಲಸಿಕೆಯನ್ನು ಶೇ 86ರಷ್ಟು ಮಂದಿ ಪಡೆದಿದ್ದು, ಶೇ 100ರ ಲಸಿಕಾಕರಣದ ಗುರಿಯನ್ನು ತಲುಪಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಆಯುಷ್ಮಾನ್ ಭಾರತ್ ಯೋಜನೆ ಯಶಸ್ವಿಗೊಳಿಸಿ: ‘ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಾರಣಾಂತಿಕ ರೋಗಗಳಿಂದ ಬಡವರ, ಕಾರ್ಮಿಕರ ಕುಟುಂಬಗಳು ಚಿಕಿತ್ಸೆ ಪಡೆಯಲು, ವೆಚ್ಚವನ್ನು ಭರಿಸಲು ಕಷ್ಟವಾಗುತ್ತದೆ. ಬಡ ವರ್ಗಕ್ಕೆ ಸಹಕಾರಿಯಾಗಲಿ ಎಂದು ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿ ಮಾಡಿದೆ’ ಎಂದರು.

‘ಜಿಲ್ಲೆಯಲ್ಲಿ ಶೇ 27ರಷ್ಟು ಬಡವರ್ಗಕ್ಕೆ ಮಾತ್ರ ಆಯುಷ್ಮಾನ್ ಕಾರ್ಡ್ ವಿತರಣೆಯಾಗಿದೆ. ಈ ಯೋಜನೆ ಯಶಸ್ವಿಯಾಗಬೇಕಾದರೆ, ಶೇ 100ರಷ್ಟು ಆಯುಷ್ಮಾನ್ ಕಾರ್ಡ್ ವಿತರಣೆಯಾಗಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಯೋಜನೆಯ ಮಾಹಿತಿಯನ್ನು ತಲುಪಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಮುಂದಾಗಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಪ್ಪೇಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆನಂದ ರಾಜ್, ಹೊಸಕೋಟೆ ತಹಶೀಲ್ದಾರ್ ಗೀತಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೀಣಾ, ಪ್ರಾಂಶುಪಾಲ ಅಶ್ವತ್ಥ ನಾರಾಯಣ.ಎ.ಎನ್, ನಂದಗುಡಿ ಸರ್ಕಲ್ ಇನ್‌ಸ್ಪೆಕ್ಟರ್‌ ರಂಗಸ್ವಾಮಿ, ಮುಖಂಡರಾದ ಅರಸನಹಳ್ಳಿ ನಾರಾಯಣಸ್ವಾಮಿ, ರಘುವೀರ್, ಮರವೆ ಕೃಷ್ಣಪ್ಪ, ರವಿ.ಎಸ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.