ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ಜನರ ಹೃದಯ ಗೆಲ್ಲಲು ರಾಜಕೀಯ ಪ್ರವೇಶ: ಡಾ.ಸಿ.ಎನ್‌.ಮಂಜುನಾಥ್‌

ಆನೇಕಲ್‌: ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌
Published 17 ಮಾರ್ಚ್ 2024, 15:29 IST
Last Updated 17 ಮಾರ್ಚ್ 2024, 15:29 IST
ಅಕ್ಷರ ಗಾತ್ರ

ಆನೇಕಲ್: ‘ಚಿಕಿತ್ಸೆ ಮೊದಲು ಹಣ ಪಾವತಿ ನಂತರ, ಕಡತಕ್ಕಿಂತ ಜೀವ ಮುಖ್ಯ, ಮಾನವೀಯತೆಗೆ ಮೊದಲ ಆದ್ಯತೆ ಎಂಬುದು ನನ್ನ ವೈದ್ಯಕೀಯ ಜೀವನದ ತತ್ವವಾಗಿದೆ. ನಾವು ಓದಿದ ವಿದ್ಯಾಭ್ಯಾಸ ಇತರರಿಗೆ ಬೆಳಕಾಗಬೇಕು. ಹೀಗಾಗಿ ವೈದ್ಯಕೀಯ ಸೇವೆ ವಿಸ್ತರಿಸುವ ಸಲುವಾಗಿ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌ ಹೇಳಿದರು.

ತಾಲ್ಲೂಕಿನ ಚಂದಾಪುರದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಕಾರ್ಯಕರ್ತರ ಸಮಯ ಮತ್ತು ಸಹಕಾರ ನನಗೆ ಅಗತ್ಯವಿದೆ. ಚುನಾವಣೆಯಲ್ಲಿ ಆನೇಕಲ್‌ ವಿಧಾನಸಭಾ ಕ್ಷೇತ್ರ ಆನೆ ಬಲ ನೀಡಬೇಕು. ಹೃದ್ರೋಗ ವೈದ್ಯನಾಗಿ 75 ಲಕ್ಷ ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ. ಎಂಟು ಲಕ್ಷ ಮಂದಿ ಹೃದ್ರೋಗ ಸಂಬಂಧಿತ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ವೈದ್ಯನಾಗಿ ಒಟ್ಟಾರೆ 2.5 ಕೋಟಿ ಜನರ ಸಂಪರ್ಕ ಹೊಂದಿದ್ದೇನೆ’ ಎಂದು ತಿಳಿಸಿದರು.

‘ಜನಸೇವೆಗೆ ಅವಕಾಶ ಕಲ್ಪಿಸಬೇಕು. ಕ್ಷೇತ್ರದಲ್ಲಿ ನಾವು ಮಾಡಿದ ಒಳ್ಳೆಯ ಕೆಲಸಗಳು ನಮ್ಮನ್ನು ಪರಿಚಯಿಸುತ್ತದೆ. ಅಧಿಕಾರದಲ್ಲಿದ್ದಾಗ ಸೌಮ್ಯತೆ, ಸಂಪತ್ತಿನಲ್ಲಿ ಸರಳತೆ, ಕೋಪದಲ್ಲಿ ಮೌನವಿರಬೇಕು. ಹಾಗಾಗಿ ಜನರ ಹೃದಯ ಗೆಲ್ಲುವ ಸಲುವಾಗಿ ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದ್ದೇನೆ’ ಎಂದು ತಿಳಿಸಿದರು.

‘ಜನರಿಗೆ ಪ್ರೀತಿ ಹಂಚಲು, ಬಡವರ ಕಣ್ಣೀರು ಮತ್ತು ರೈತರ ಬೆವರು ಒರೆಸಬೇಕು ಎಂಬ ಮಹಾದಾಸೆಯನ್ನು ಹೊತ್ತು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೇನೆ. ಪಕ್ಷಾತೀತವಾಗಿ ಜನರ ಪ್ರೀತಿ ಮತ್ತು ಆಶೀರ್ವಾದ ನನಗೆ ಅವಶ್ಯಕತೆಯಿದೆ’ ಎಂದು ಕೋರಿದರು.

ಸಭೆ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಆನೇಕಲ್‌ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಭದ್ರಕೋಟೆಯಾಗಿದೆ. ಕಾರ್ಯಕರ್ತರ ಬಲ, ಮುಖಂಡರ ಉತ್ಸಾಹ ನೋಡುತ್ತಿದ್ದರೆ ಈ ಬಾರಿ ಲೋಕಸಭಾ ಕ್ಷೇತ್ರದಲ್ಲಿ ಕಮಲ ಅರಳುವುದು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಮುನಿರತ್ನ ಮಾತನಾಡಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚರಿತ್ರೆಯ ಗೆಲುವಾಗಬೇಕು. ಆರೋಗ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಡಾ.ಸಿ.ಎನ್‌.ಮಂಜುನಾಥ್‌ ಅವರನ್ನು ಬೆಂಬಲಿಸಬೇಕು. ಮಂಜುನಾಥ್‌ ಅವರು ಎಂದಿಗೂ ದೇವೇಗೌಡರ ಅಳಿಯ ಎಂಬುದನ್ನು ತೋರಿಸಿಕೊಂಡಿಲ್ಲ. ಬದಲಿಗೆ ತಮ್ಮ ಜನಪರ ಕೆಲಸಗಳಿಂದ ಮನೆಮಾತಾಗಿದ್ದಾರೆ ಎಂದು ತಿಳಿಸಿದರು.

ಜಯದೇವ ಆಸ್ಪತ್ರೆಯನ್ನು ಜಾಗತಿಕ ಮಟ್ಟದಲ್ಲಿ ಖ್ಯಾತಗೊಳಿಸಿದ ಕೀರ್ತಿ ಬಿಜೆಪಿ ಅಭ್ಯರ್ಥಿ ಮಂಜುನಾಥ್‌ ಅವರಿಗೆ ಸಲ್ಲುತ್ತದೆ. ಅವರ ಆಲೋಚನೆಗಳಿಗೆ ಕ್ಷೇತ್ರದ ಮತದಾರರು ಬಲ ನೀಡಬೇಕು. ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಒಗ್ಗೂಡಿ ಮಂಜುನಾಥ್‌ ಅವರನ್ನು ಗೆಲ್ಲಿಸುವ ಅವಶ್ಯಕತೆಯಿದೆ. ಕಾರ್ಯಕರ್ತರು ಒಗ್ಗೂಡಿ ಶ್ರಮಿಸುವ ಮೂಲಕ ಚುನಾವಣೆಯಲ್ಲಿ ಮತ ನೀಡಬೇಕು ಎಂದರು.

ಶಾಸಕರಾದ ಎಂ.ಕೃಷ್ಣಪ್ಪ, ಸತೀಶ್‌ ರೆಡ್ಡಿ, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್‌, ಬಿಜೆಪಿ ಮಂಡಲ ಅಧ್ಯಕ್ಷ ಬಿ.ಬಿ.ಐ.ಮುನಿರೆಡ್ಡಿ, ಮುನಿರಾಜುಗೌಡ, ಬಮೂಲ್‌ ನಿರ್ದೇಶಕ ಆಂಜಿನಪ್ಪ, ಮುಖಂಡರಾದ ಯಂಗಾರೆಡ್ಡಿ, ರಂಗನಾಥ್, ಕೆ.ಪಿ.ರಾಜು, ಅತ್ತಿಬೆಲೆ ಬಸವರಾಜು, ದೇವೇಗೌಡ, ಬಂಡಾಪುರ ರಾಮಚಂದ್ರ, ಗೆರಟಿಗನಬೆಲೆ ರಾಮಕೃಷ್ಣ, ಟಿ.ವಿ.ಬಾಬು, ಹುಲ್ಲಹಳ್ಳಿ ಶ್ರೀನಿವಾಸ್‌, ಪಟಾಪಟ್‌ ಶ್ರೀನಿವಾಸ್, ದೊಡ್ಡಹಾಗಡೆ ಶಂಕರ್‌, ಜಯಪ್ರಕಾಶ್, ಅಶೋಕ್‌ರೆಡ್ಡಿ, ನರಸಿಂಹರೆಡ್ಡಿ, ತಿಮ್ಮರಾಜು, ಶ್ವೇತಾ ರಾಘವೇಂದ್ರ, ಮಂಜುಳ ನೀಲಕಂಠಯ್ಯ ಇದ್ದರು.

ಕಾಂಗ್ರೆಸ್‌ ಶಾಸಕರು ಬಿಜೆಪಿಗೆ: ಸಿಪಿವೈ ಸ್ವಪಕ್ಷೀಯ ಶಾಸಕರೇ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬೇಡ. ಅನುದಾನ ನೀಡುತ್ತಿಲ್ಲ ಎಂದು ದೂರುತ್ತಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದೆ ಎಂದು ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ ಹೇಳಿದರು. ಆದಷ್ಟು ಬೇಗ ಈ ಸರ್ಕಾರ ಪತನಗೊಳಿಸಲಾಗುವುದು ಎಂದರು. ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಅಣ್ಣ ತಮ್ಮಂದಿರಂತೆ ಈ ಬಾರಿ ಕೆಲಸ ಮಾಡಬೇಕು. ಡಾ.ಸಿ.ಎನ್‌.ಮಂಜುನಾಥ್‌ ಅವರು ಕೇಂದ್ರದ ಆರೋಗ್ಯ ಸಚಿವರಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT