ಗುರುವಾರ , ಫೆಬ್ರವರಿ 27, 2020
19 °C
ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ಸಂಕ್ರಾಂತಿ ಕವಿಗೋಷ್ಠಿ, ಗೀತಗಾಯನ

ದೇಸಿ ಸಂಸ್ಕೃತಿ ಮರೆವು ಸಲ್ಲ : ಬಿ.ನಾರಾಯಣಗೌಡ ವಿಷಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ‘ಪಾಶ್ಚಿಮಾತ್ಯ ಸಂಸ್ಕೃತಿಯ ಭರಾಟೆಗೆ ಸಿಲುಕಿ ನಮ್ಮ ದೇಸಿ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ’ ಎಂದು ಹಿರಿಯ ಮುಖಂಡ ಬಿ.ನಾರಾಯಣಗೌಡ ವಿಷಾದಿಸಿದರು.

ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆಯಿಂದ ತಮ್ಮತನವನ್ನು ಮರೆತು ಹಳ್ಳಿ ಸಂಸ್ಕೃತಿಯನ್ನು ಬಿಟ್ಟು ನಗರ ಜೀವನಕ್ಕೆ ಕೈಚಾಚುತ್ತಿದ್ದೇವೆ. ಹಳ್ಳಿಗಳಲ್ಲಿರುವ ಮೂಲಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ಹಬ್ಬ-ಹರಿದಿನಗಳನ್ನು ಗ್ರಾಮೀಣ ಭಾಗದಲ್ಲಿ ಆಚರಿಸುವ ಪದ್ಧತಿಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ಸಾಹಿತ್ಯವನ್ನು ಯುವಜನತೆಗೆ ತಿಳಿಸಿಕೊಡುವ, ಸಾಹಿತ್ಯದ ಹೂರಣವನ್ನು ಉಣಬಡಿಸುವ ಕೆಲಸವನ್ನು ಪರಿಷತ್ತು ಮಾಡಬೇಕಿದೆ. ರೈತರ ಸಮಸ್ಯೆಗಳನ್ನು ಹೆಕ್ಕಿ ತೆಗೆಯುವ, ಗ್ರಾಮೀಣ ಸೊಗಡನ್ನು ಕವಿತೆಗಳ ಮೂಲಕ ಪರಿಚಯಿಸುವ ಸಾಮರಸ್ಯ ಸಂಸ್ಕೃತಿಯ ಅಗತ್ಯವಿದೆ ಎಂದು ತಿಳಿಸಿದರು.

ಸಾಹಿತಿ ಬೊಮ್ಮನಾಯಕನಹಳ್ಳಿ ಕೃಷ್ಣಪ್ಪ ಮಾತನಾಡಿ, ಬರವಣಿಗೆ ಸಮಾಜಕ್ಕೆ ಅಸ್ತ್ರವಾಗಬೇಕು. ಆ ಅಸ್ತ್ರದಿಂದ ಸಮಾಜದಲ್ಲಿರುವ ದ್ವೇಷ, ಅಸೂಯೆ, ವೈರತ್ವಗಳ ವಿರುದ್ಧ ಯುದ್ಧ ಮಾಡಬೇಕಾಗಿದೆ. ಕಾವ್ಯಗಳನ್ನು ರಚಿಸುವ ಮೊದಲು ಅಧ್ಯಯನದ ಅಗತ್ಯವಿದೆ. ಇಲ್ಲವಾದಲ್ಲಿ ಅನಾನುಭವದಿಂದ ಬರೆಯುವ ಕವನಗಳು ಸಮಾಜಕ್ಕೆ ಪೂರಕವಾಗದೆ ಮಾರಕವಾಗುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಚಲುವರಾಜು ಮಾತನಾಡಿ, ಸಾಹಿತ್ಯಕ್ಕೆ ಕಲ್ಪನೆ ಬೇಕು. ಕಾವ್ಯವೆಂಬುದು ಸಾರ್ವತ್ರಿಕವಾಗಿರಬೇಕು. ಬದಲಾವಣೆಗೆ ತನ್ನನ್ನು ತೊಡಗಿಸಿಕೊಂಡು ಸುಧಾರಣೆ ತರುವ ಕಾವ್ಯ ಪ್ರಯೋಗಕ್ಕೆ ಮುಂದಾಗಬೇಕು ಎಂದರು.

ಸಾಹಿತಿಗಳಾದ ಡಾ.ಕೂ.ಗಿ.ಗಿರಿಯಪ್ಪ, ದೇ.ನಾರಾಯಣಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ಬಿ.ಎಂ.ಸಣ್ಣಪ್ಪ, ತಾಲ್ಲೂಕು ಕಸಾಪ ಕಾರ್ಯದರ್ಶಿ ಮಂಜೇಶ್ ಬಾಬು, ಕೋಶಾಧ್ಯಕ್ಷ ಶ್ರೀನಿವಾಸ ರಾಂಪುರ ಇದ್ದರು.

ಕವಿಗೋಷ್ಠಿಯಲ್ಲಿ ಎಲೆಕೇರಿ ಶಿವರಾಂ, ಎಂ.ಟಿ.ನಾಗರಾಜು, ಕೂರಣಗೆರೆ ಕೃಷ್ಣಪ್ಪ, ವಿ.ಪಿ.ವರದರಾಜು, ಸಿ.ಎಸ್.ಸಿದ್ದಲಿಂಗಯ್ಯ, ಮಂಗಾಡಹಳ್ಳಿ ಗೋಪಾಲ್, ಎಲೆಕೇರಿ ಡಿ.ರಾಜಶೇಖರ್, ಅಬ್ಬೂರು ಶ್ರೀನಿವಾಸ್, ಯೋಗೇಶ್ ದ್ಯಾವಪಟ್ಟಣ, ಚೇತನ್ ಗೌಡ ರಾಮನಗರ, ತುಂಬೇನಹಳ್ಳಿ ಕಿರಣ್ ರಾಜ್, ಮಿಮಿಕ್ರಿ ಶಂಕರ್ ಬಾಬು ತಮ್ಮ ಕವನ ವಾಚಿಸಿದರು.

ಗಾಯಕರಾದ ಬೇವೂರು ರಾಮಯ್ಯ, ಗೋವಿಂದಹಳ್ಳಿ ಶಿವಣ್ಣ, ಬಸವರಾಜು ಗುರುವಿನಪುರ, ವೆಂಕಟರಾಮು ಗೀತಗಾಯನವನ್ನು ನಡೆಸಿಕೊಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು