ಮಂಗಳವಾರ, ಏಪ್ರಿಲ್ 7, 2020
19 °C
ಕಲುಷಿತಗೊಳ್ಳುತ್ತಿರುವ ಕೆರೆ l ಸಂರಕ್ಷಣೆಗೆ ಗ್ರಾಮಸ್ಥರ ಒತ್ತಾಯ

‘ಮುತ್ತಾನಲ್ಲೂರು ಅಮಾನಿ ಕೆರೆ ರಕ್ಷಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಗ್ರಾಮಗಳ ಜೀವನಾಡಿಯಾಗಿದ್ದ ಕೆರೆಗಳು ಕಲುಷಿತವಾಗಿ ಜನರಿಂದ ದೂರವಾಗುವಂತಾಗಿವೆ. ಕೆರೆಯಲ್ಲಿ ನೀರಿದ್ದರೂ ಯಾವುದೇ ಉಪಯೋಗಕ್ಕೆ ಬಾರದಂತಾಗಿರುವ ದುಸ್ಥಿತಿ ಆನೇಕಲ್‌ ತಾಲ್ಲೂಕಿನ ಮುತ್ತಾನಲ್ಲೂರು ಅಮಾನಿ ಕೆರೆಗೆ ಬಂದಿದ್ದು, ಕೆರೆ ಸಂರಕ್ಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.  

ಆನೇಕಲ್‌ ತಾಲ್ಲೂಕಿನ ಮುತ್ತಾನಲ್ಲೂರು ಅಮಾನಿ ಕೆರೆಯು ಸುಮಾರು 167.94 ಹೆಕ್ಟೇರ್‌ ವಿಸ್ತಿರ್ಣದ ವಿಶಾಲ ಪ್ರದೇಶ ಹೊಂದಿದೆ. ಹಿಂದಿನ ಕಾಲದಲ್ಲಿ ಕೆರೆಯು ಸುತ್ತಮುತ್ತಲ ಗ್ರಾಮಗಳ ಅಂತರ್ಜಲವನ್ನು ಕಾಪಾಡಿಕೊಂಡು ಬಂದಿತ್ತು. ವಿಶಾಲವಾದ ಕೆರೆಯ ಅಚ್ಚುಕಟ್ಟು ವಿಸ್ತಾರವಾಗಿತ್ತು. ಕೆರೆ ನೀರನ್ನೇ ಅವಲಂಬಿಸಿ ಸಾವಿರಾರು ರೈತರು ಬದುಕು ಕಟ್ಟಿಕೊಂಡಿದ್ದರು. ಇದೀಗ ಕೆರೆಗೆ ಸಂಚಕಾರ ಬಂದಿದೆ. 

ಕೈಗಾರೀಕರಣದ ಫಲವಾಗಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಮತ್ತು ಚಂದಾಪುರ ಪುರಸಭೆ ವ್ಯಾಪ್ತಿಯ ಕಲುಷಿತ ನೀರು ಅಮಾನಿ ಕೆರೆ ಒಡಲು ಸೇರುತ್ತಿದೆ. ಚಂದಾಪುರ ಚೋಳರ ಕೆರೆಯ ಮೂಲಕ ಮುತ್ತಾನಲ್ಲೂರು ಕೆರೆಗೆ ಕಲ್ಮಶಗೊಳ್ಳುತ್ತಿದೆ ಎಂದು ಹೇಳಿದರು. 

ಚಂದಾಪುರ ಪುರಸಭೆ ವ್ಯಾಪ್ತಿಯ ಚರಂಡಿ ನೀರು ಸಂಸ್ಕರಣಗೊಳ್ಳದೇ ಚೋಳರ ಕೆರೆಯ ಮೂಲಕ ಮುತ್ತಾನಲ್ಲೂರು ಕೆರೆಗೆ ಹರಿದು ಬರುತ್ತಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಕೈಗಾರಿಕೆಗಳ ತ್ಯಾಜ್ಯದಿಂದಾಗಿ ಕೆರೆ ತುಂಬಿದೆ. ಆದರೆ ಈ ಕೆರೆಯ ನೀರು ಯಾವುದೇ ಬಳಕೆಗೂ ಉಪಯೋಗವಾಗುತ್ತಿಲ್ಲ. ಈ ಕೆರೆಗೆ ಕಾಯಕಲ್ಪ ನೀಡಿ ಕಲುಷಿತ ನೀರು ಬರದಂತೆ ತಡಯಬೇಕೆಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.

ಕೆರೆ ವ್ಯಾಪ್ತಿಯಲ್ಲಿ ಹಲವಾರು ಗ್ರಾಮಗಳು ಬರುತ್ತವೆ. ಎಲ್ಲಾ ಗ್ರಾಮಗಳಲ್ಲೂ ಅಂತರ್ಜಲ ಕಲುಷಿತವಾಗಿದೆ. ಮುತ್ತಾನಲ್ಲೂರು ಕೆರೆ ನೀರನ್ನು ಮುಟ್ಟಿದ ಜನರಲ್ಲಿ ಚರ್ಮ ರೋಗಗಳು ಕಾಣಿಸಿಕೊಂಡಿವೆ. ಹಾಗಾಗಿ ಜನರು ಕೆರೆಯೆಂದರೆ ದೂರು ಸರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ  ಸುಜಾತ ತಿಳಿಸಿದರು.

ಕೆರೆ ರಕ್ಷಿಸಲು ಹೋರಾಟ: ಪುರಾತನ ಕೆರೆಯನ್ನು ಸಂರಕ್ಷಿಸಿ ಜನರ ಬಳಕೆಗೆ ಮುಕ್ತವಾಗುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಚಿನ್ಮಯ ಸೇವಾ ಸಂಸ್ಥೆಯ ಅಧ್ಯಕ್ಷ ಡಾ.ಚಿನ್ನಪ್ಪ.ವೈ.ಚಿಕ್ಕಹಾಗಡೆ ಅವರ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಂಡಿದ್ದರು.

ಶುಕ್ರವಾರ ರಾಜಭವನದವರೆಗೂ ಗ್ರಾಮಸ್ಥರು, ಮಹಿಳೆಯರು ತೆರಳಿ ಮನವಿ ಪತ್ರ ಸಲ್ಲಿಸಿದ್ದಾರೆ. ಮುತ್ತಾನಲ್ಲೂರಿಗೆ ಕಲುಷಿತ ನೀರು ಬರದಂತೆ ತಡೆಯಬೇಕು. ಚಂದಾಪುರದ ಪುರಸಭೆ ವ್ಯಾಪ್ತಿಯಿಂದ ಸಂಸ್ಕರಿಸದ ನೀರನ್ನು ಕೆರೆಗೆ ಬಿಡುವುದನ್ನು ತಡೆಯಬೇಕು ಮತ್ತು ಕೆರೆಯನ್ನು ಸಂರಕ್ಷಿಸಿ ಸಾರ್ವಜನಿಕರ ಬಳಕೆಗೆ ಉಪಯುಕ್ತವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು