ಭಾನುವಾರ, ಫೆಬ್ರವರಿ 28, 2021
31 °C
ಮುಖ್ಯಮಂತ್ರಿ ವಿರುದ್ಧ ಶಾಸಕ ನಿಸರ್ಗ ನಾರಾಯಣಸ್ವಾಮಿ ಅಸಮಾಧಾನ

ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನು ಮರೆತು ಕೇವಲ 120ಮಂದಿ ಶಾಸಕರಿಗೆ ಮಾತ್ರ ಮುಖ್ಯಮಂತ್ರಿ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ. ಈ ತಾರತಮ್ಯ ನೀತಿ ಬಿಡಬೇಕು. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ 15ನೇ ವಾರ್ಡ್‌ನ ಸುಣ್ಣಕಲ್ಲು ಬೀದಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಕ್ಷೇತ್ರಗಳ ಬೆಳವಣಿಗೆಗಾಗಿ ಹಣ ನೀಡದೆ ವಂಚನೆ ಮಾಡಲಾಗುತ್ತಿದೆ ಎಂದು ದೂರಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ಮೈತ್ರಿ ಸರ್ಕಾರದ ಅವಧಿಯಲ್ಲಿ ನಿಗದಿಪಡಿಸಿದ್ದ ಅನುದಾನ ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ರಸ್ತೆಗಳ ನಿರ್ಮಾಣವೂ ಸೇರಿದಂತೆ ಪ್ರತಿಯೊಂದು ಅಭಿವೃದ್ಧಿ ಕೆಲಸಗಳಿಗೂ ಅಡ್ಡಗಾಲು ಹಾಕುತ್ತಿದೆ. ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಯೂ ಸೇರಿದಂತೆ ಅನುದಾನ ಬಿಡುಗಡೆ ಮಾಡಲು ಜ.28ರವರೆಗೂ ಸಚಿವರು ಅವಕಾಶ ಕೇಳಿದ್ದಾರೆ. ಒಂದು ವೇಳೆ ಸಚಿವರು ವಿಫಲರಾದರೆ ಭರವಸೆ ಸಮಿತಿ
ಯಲ್ಲಿ ದೂರು ಸಲ್ಲಿಸಲಾಗುವುದು ಎಂದರು.

ಬಯಲು ಸೀಮೆ ಭಾಗದಲ್ಲಿರುವ ಕ್ಷೇತ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರ ಶ್ಲಾಘನೀಯವಾಗಿದೆ. ಕೆರೆಗಳಲ್ಲಿ ಅಂತರ್ಜಲ ವೃದ್ಧಿ ಮಾಡುವ ಉದ್ದೇಶದಿಂದ ಎಚ್.ಎನ್.ವ್ಯಾಲಿ ಯೋಜನೆ
ಯಿಂದ ವೆಂಕಟಗಿರಿಕೋಟೆ ಕೆರೆಗೆ ನೀರು ಹರಿಸಲಾಗುತ್ತಿದ್ದು, ತಟಮಾಚನಹಳ್ಳಿ ಕೆರೆಗೂ ನೀರು ಹರಿಸ ಲಾಗುವುದು. ಈ ಮೂಲಕ ಅಂತರ್ಜಲದ ಮಟ್ಟ ಏರಿಕೆ ಮಾಡಲಾಗುತ್ತಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಘಟಕದ ಮೇಲ್ವಿಚಾರಕಿ ಅಕ್ಷತಾ ರೈ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಕಾರ್ಯಕ್ರಮ ಜಾರಿಗೆ ತರಲಾಗಿದ್ದು ಜನರೂ ಕೂಡ ಈ ಎಲ್ಲ ಸೌಲಭ್ಯ ಸದುಪಯೋಗ ಮಾಡಿಕೊಂಡಿದ್ದಾರೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್, ಮುಖಂಡರಾದ ಮುನಿರಾಜು, ಕಿರಣ್, ಆಜಂಪಾಷ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಪ್ರತಿನಿಧಿಗಳು, ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು