ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ: ವಿಸ್ತರಣೆಯಾಗದ ಆನೇಕಲ್- ಥಳೀ ರಸ್ತೆ

ದಶಕಗಳಿಂದ ಆಗದ ವಿಸ್ತರಣೆ l ಸುಗಮ ಸಂಚಾರಕ್ಕೆ ಕುತ್ತು l ನಾಗರಿಕರ ಪರದಾಟ
Last Updated 22 ಮಾರ್ಚ್ 2020, 13:37 IST
ಅಕ್ಷರ ಗಾತ್ರ

ಆನೇಕಲ್: ಪಟ್ಟಣದ ಹೃದಯಭಾಗದಲ್ಲಿ ಹಾದುಹೋಗುವ ಥಳೀ ರಸ್ತೆಯು ಅತ್ಯಂತ ಕಿರಿದಾಗಿದ್ದು, ದಶಕಗಳಿಂದಲೂ ವಿಸ್ತರಣೆಗಾಗಿ ಕಾದು ಕುಳಿತಿದೆ. ಹಲವು ಪ್ರಯತ್ನಗಳು ನಡೆದರೂ ಅನುಷ್ಠಾನ ಮಾತ್ರ ತಡವಾಗುತ್ತಲೇ ಇದೆ.ರಸ್ತೆ ವಿಸ್ತರಣೆಯಾಗಿ ಸುಗಮ ಸಂಚಾರಕ್ಕೆ ಅನುವಾಗುತ್ತದೆ ಎಂಬ ನಿರೀಕ್ಷೆಯಲ್ಲಿರುವ ಸಾರ್ವಜನಿಕರು ಜಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ.

ಆನೇಕಲ್- ಥಳೀ ರಸ್ತೆಯು ರಾಜ್ಯ ಹೆದ್ದಾರಿ 35 ಆಗಿದೆ. ಆನೇಕಲ್‌ ತಿಲಕ್‌ ವೃತ್ತದಿಂದ ದೊಡ್ಡಕೆರೆ ಬಾಗಿಲು ಆಂಜನೇಯ ಸ್ವಾಮಿ ದೇವಾಲಯದವರೆಗಿನ ಸುಮಾರು 1 ಕಿ.ಮೀ. ರಸ್ತೆ ಅತ್ಯಂತ ಕಿರಿದಾಗಿದೆ. ಈ ರಸ್ತೆಯ ವಿಸ್ತರಣೆಯು 30-40 ವರ್ಷಗಳ ಹಿಂದೆ ಪಟ್ಟಣದ ಜನಸಂದಣಿ ಕಡಿಮೆಯಾಗಿದ್ದಾಗ ಆಗಿತ್ತು.

ರಸ್ತೆಯನ್ನು ವಿಸ್ತರಿಸಬೇಕೆಂಬ ಕೂಗು ದಶಕಗಳಿಂದಲೂ ಇದೆ. ಕಿರಿದಾದ ರಸ್ತೆಯಲ್ಲಿ ಹೆಚ್ಚಿನ ವಾಹನ ಸಂಚಾರವಿದೆ. ಒಂದು ವಾಹನ ಮಾತ್ರ ಸುಗಮವಾಗಿಸಂಚರಿಸಬಹುದು. ಬೃಹತ್‌ ವಾಹನಗಳು ಎರಡು ಬದಿಯಿಂದ ಬಂದರೆ ಗಂಟೆಗಟ್ಟಲೇ ರಸ್ತೆ ಸ್ಥಗಿತಗೊಳ್ಳುತ್ತದೆ. ಇದರಿಂದ ಜನರಿಗೆ ಕಾಯುವುದೇ ಕಾಯಕವಾಗುತ್ತದೆ.

ರಸ್ತೆಯಲ್ಲಿ ನಿತ್ಯ ಪರದಾಟ ತಪ್ಪಿದ್ದಲ್ಲ.ಇದಕ್ಕೆ ಕಾಯಕಲ್ಪ ನೀಡಬೇಕೆಂದು ಶಾಸಕರು, ಸಂಸದರು, ಸ್ಥಳೀಯ ಜನಪ್ರತಿನಿಧಿಗಳು ಹಲವು ಬಾರಿ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ವಿಸ್ತರಣಾ ಯೋಜನೆ ಅಂತಿಮ ಸ್ವರೂಪ ಪಡೆದಿದ್ದರೂ. ಅನುಷ್ಠಾನ ಪ್ರಕ್ರಿಯೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಸದ್ಯ ರಸ್ತೆ ವಿಸ್ತರಣೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಸಾರ್ವಜನರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ದಾಖಲೆಗಳು ಸಲ್ಲಿಕೆಯಾಗಿಲ್ಲ:ಥಳೀ ರಸ್ತೆಯ ಅಗಲೀಕರಣಕ್ಕೆ 99 ಮಂದಿಯ ಆಸ್ತಿ ಭೂಸ್ವಾಧೀನವಾಗಬೇಕಾಗಿದೆ. ಈ ದಿಸೆಯಲ್ಲಿ ಇದುವರೆಗೆ 17 ಆಸ್ತಿಗಳಿಗೆ ನೀಡಬೇಕಾದ ಪರಿಹಾರದ ಚೆಕ್‌ಗಳನ್ನು ನೀಡಲಾಗಿದೆ. ಸುಮಾರು ₹ 35 ಲಕ್ಷ ಹಣ ನೀಡಲಾಗಿದೆ. ಎಲ್ಲ ದಾಖಲೆಗಳನ್ನು ನೀಡಿದರೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಆದರೆ, ಹಲವಾರು ಮಂದಿ ದಾಖಲೆಗಳನ್ನು ನೀಡುತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ ಹೇಳುತ್ತಾರೆ.

ಕಾಮಗಾರಿಗೆ ಶೀಘ್ರ ಚಾಲನೆ:ರಸ್ತೆಯನ್ನು 50ಅಡಿ ಅಗಲದ ರಸ್ತೆಯಾಗಿ ವಿಸ್ತರಣೆ ಮಾಡಲು ಗುರುತಿಸಲಾಗಿದೆ. ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿವೆ. ದೊಡ್ಡಕೆರೆ ಬಾಗಿಲು ಆಂಜನೇಯಸ್ವಾಮಿ ದೇವಾಲಯದ ನಂತರ ಬರುವ ಥಳೀ ರಸ್ತೆಯ ಕೆಲವು ಮರಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆದಿದೆ. ಸಂಸದ ಡಿ.ಕೆ.ಸುರೇಶ್‌ ಮತ್ತು ತಾವು ಈ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದು ಹಲವು ದಶಕಗಳಿಂದ ನನೆಗುದಿಗೆ ಬಿದ್ದಿರುವ ಈ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ಹೆಚ್ಚಿನ ಪರಿಹಾರ ನೀಡಿ:ಥಳೀ ರಸ್ತೆಯಲ್ಲಿ ಅಂಗಡಿ ವ್ಯಾಪಾರಿ ಎನ್‌.ರಾಜೇಶ್‌ ಮಾತನಾಡಿ ಥಳೀ ರಸ್ತೆಯ ಅಗಲೀಕರಣ ಅತ್ಯಂತ ಅವಶ್ಯಕವಾಗಿದೆ. ಆದರೆ ಹಲವು ವರ್ಷಗಳಿಂದ ವ್ಯಾಪಾರ ವಹಿವಾಟು ನಡೆಸಿ ಆಸ್ತಿಗಳನ್ನು ಕಳೆದುಕೊಳ್ಳುವ ಕುಟುಂಬಗಳಿಗೆ ಸುಪ್ರೀಂ ಕೋರ್ಟ್‌ನ ಆದೇಶದಂತೆ ಎಸ್‌ಆರ್ ದರದ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡಬೇಕು. ಪರಿಹಾರ ನೀಡುವಾಗ ವಾಣಿಜ್ಯ ಸ್ಥಳಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸ್ಥಳೀಯರಾದ ಬಿ.ಶೈಲೇಂದ್ರಕುಮಾರ್‌ ಮಾತನಾಡಿ, ಥಳೀ ರಸ್ತೆ ಅಗಲೀಕರಣ ಅತ್ಯಂತ ಅವಶ್ಯಕವಾಗಿದೆ. ಹಲವು ವರ್ಷಗಳ ನಂತರ ಅಗಲೀಕರಣ ಪ್ರಕ್ರಿಯೆಗೆ ವೇಗ ದೊರೆತಿದೆ. ಕೆಲವರಿಗೆ ಪರಿಹಾರದ ಹಣ ನೀಡಲಾಗಿದೆ. ಎಲ್ಲರೂ ದಾಖಲೆಗಳನ್ನು ತ್ವರಿತವಾಗಿ ಸಲ್ಲಿಸಿ ಅಗಲೀಕರಣಕ್ಕೆ ಸಹಕರಿಸಬೇಕು ಎಂದರು.

‘ಕಾಮಗಾರಿ ಶೀಘ್ರ ಆರಂಭಿಸಿ’

ಸಮಸ್ಯೆಗಳನ್ನು ಪರಿಹರಿಸಿ ತ್ವರಿತವಾಗಿ ರಸ್ತೆ ವಿಸ್ತರಣೆಯಾದರೆ ಈ ಭಾಗದಲ್ಲಿ ಸಂಚರಿಸುವ ಸಾವಿರಾರು ಮಂದಿ ಸುಗಮವಾಗಿ ಸಂಚಾರ ಮಾಡಲ ಅನುವಾಗುತ್ತದೆ. ಆನೇಕಲ್‌– ಥಳೀ ರಸ್ತೆಯ ಮೂಲಕ ಚಿಕ್ಕಹೊಸಹಳ್ಳಿ, ಇಂಡ್ಲವಾಡಿ, ಹಾರೋಹಳ್ಳಿ, ಕನಕಪುರಕ್ಕೆ ತೆರಳುವ ನೂರಾರು ಮಂದಿ ಪ್ರಯಾಣಿಕರು ಈ ರಸ್ತೆಯನ್ನೇ ಬಳಸುತ್ತಾರೆ. ತಮಿಳುನಾಡಿನ ಥಳೀ, ಡೆಂಕಣಕೋಟೆಗೆ ತೆರಳಬೇಕಾದರೆ ಇದೇ ಮಾರ್ಗವನ್ನೇ ಬಳಸಬೇಕು. ವಣಕನಹಳ್ಳಿ, ಗುಮ್ಮಳಾಪುರ, ಸೋಲೂರು ಸೇರಿದಂತೆ ವಿವಿಧ ಭಾಗಗಳಿಗೆ ಇದೇ ಮಾರ್ಗದಲ್ಲಿ ತೆರಳಬೇಕು.

ಪ್ರವಾಸಿ ತಾಣ ಮುತ್ಯಾಲಮಡುವಿಗೂ ಇದೇ ಮಾರ್ಗದಲ್ಲಿ ಆನೇಕಲ್‌ನಿಂದ ಸಾಗಬೇಕು. ಇತಿಹಾಸ ಪ್ರಸಿದ್ಧಗುಮ್ಮಳಾಪುರ ಗೌರಿ ದೇವಿ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ದೇವರಬೆಟ್ಟ ಮತ್ತಿತರ ಪ್ರವಾಸಿತಾಣಗಳಿಗೆ ಈ ಮಾರ್ಗದ ಮೂಲಕವೇ ತೆರಳಬೇಕು. ಹಾಗಾಗಿ ನಿತ್ಯ ಹೆಚ್ಚಿನ ದಟ್ಟಣೆಯಿರುವ ಆನೇಕಲ್-ಥಳೀ ರಸ್ತೆ ಗಡಿಯ ಭಾಗದವರೆಗೂ ನಾಲ್ಕು ಪಥದ ರಸ್ತೆಯಾಗಿ ವಿಸ್ತರಣೆಯಾಗುತ್ತಿರುವ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ಆನೇಕಲ್‌ ಪಟ್ಟಣದಲ್ಲಿ ಹಾದುಹೋಗುವ ಥಳೀ ರಸ್ತೆಯ ಕಾಮಗಾರಿ ಪ್ರಾರಂಭವಾಗಿ ಕೆಲಸ ಮುಕ್ತಾಯವಾದರೆ ಸಾವಿರಾರು ಜನರು ನೆಮ್ಮದಿಯಾಗಿ ಸಂಚರಿಸಲು ಸಾಧ್ಯವಾಗುತ್ತದೆ.

***

ಥಳೀ ರಸ್ತೆ ಅಗಲೀಕರಣ ಅತ್ಯಂತ ಅವಶ್ಯಕವಾಗಿದೆ. ಈ ಕಾರ್ಯ ಪೂರ್ಣಗೊಂಡರೆ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಿ ಸಾವಿರಾರು ಜನರು ಸುಗಮವಾಗಿ ಸಂಚರಿಸಲು ಅನುಕೂಲವಾಗುತ್ತದೆ

-ಭೈರಪ್ಪ, ಸ್ಥಳೀಯರು

***

ಭೂಸ್ವಾಧೀನ ಸಂದರ್ಭದಲ್ಲಿ ವಾಣಿಜ್ಯ ಉದ್ದೇಶದ ಆಸ್ತಿಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು. ಎಸ್‌ಆರ್‌ ದರದ ನಾಲ್ಕು ಪಟ್ಟು ಪರಿಹಾರ ನೀಡಬೇಕು

- ಎನ್‌.ರಾಜೇಶ್, ವ್ಯಾಪಾರಿ

***

ಥಳೀ ರಸ್ತೆಯ ಅಗಲೀಕರಣಕ್ಕೆ ಸ್ಥಳೀಯರು ಸಹಕಾರ ನೀಡಿ ದಾಖಲೆಗಳನ್ನು ತ್ವರಿತವಾಗಿ ಇಲಾಖೆಗೆ ಸಲ್ಲಿಸಬೇಕು. ಇದರಿಂದ ಹಲವು ವರ್ಷಗಳ ಸ್ಥಳೀಯರ ಕನಸು ನನಸಾಗುತ್ತದೆ

- ಬಿ.ಶೈಲೇಂದ್ರಕುಮಾರ್‌, ಸ್ಥಳೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT