ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ವಿಫಲ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳ

Last Updated 4 ಮಾರ್ಚ್ 2021, 2:38 IST
ಅಕ್ಷರ ಗಾತ್ರ

ದೇವನಹಳ್ಳಿ: ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನೀಡಿದ್ದ ಭರವಸೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಲ್ಲಿನ ಹೊಸ ಬಸ್‌ನಿಲ್ದಾಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಬುಧವಾರ ನಡೆದ ರಾಜ್ಯಮಟ್ಟದ ಜನ ಧ್ವನಿ ಜಾಥಾದಲ್ಲಿ ಮಾತನಾಡಿದರು.

5 ವರ್ಷದಲ್ಲಿ 10 ಕೋಟಿ ಉದ್ಯೋಗ ನೀಡಬೇಕಿತ್ತು. ನೋಟು ಅಮಾನ್ಯೀಕರಣದಿಂದ ಲಕ್ಷಾಂತರ ಗುಡಿ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದವರು ಕೆಲಸ ಕಳೆದುಕೊಂಡಿದ್ದಾರೆ. ಉದ್ಯೋಗ ಸೃಷ್ಟಿ ಎಂಬುದೇ ಇಲ್ಲ. ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಒಂದು ಅಡುಗೆ ಅನಿಲ ಸಿಲಿಂಡರ್‌ ದರ ₹ 344 ಇತ್ತು. ಪ್ರಸ್ತುತ ₹ 850ರಿಂದ ₹ 900 ಮುಟ್ಟಿದೆ. ಇದೇ ನರೇಂದ್ರ ಮೋದಿ ಅವರ ಅಚ್ಚೇದಿನಗಳಾಗಿವೆ ಎಂದು ಕಿಡಿಕಾರಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಒಂದು ಲೀಟರ್‌ ಪೆಟ್ರೋಲ್ ದರ ₹ 50 ರಿಂದ ₹ 60 ದಾಟಿರಲಿಲ್ಲ. ಪ್ರಸ್ತುತ ಒಂದು ಲೀಟರ್ ಬೆಲೆ ಶತಕ ದಾಟಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ತೈಲದ ಬೆಲೆ 50 ಡಾಲರ್ ಇದೆ. ಮೋದಿ ಅವರೇ ನಿಮಗೆ ಮಾನ ಮರ್ಯಾದೆ ಇದೆಯಾ, ನೊಂದ ಜನರ ಉಸಿರು ನಿಮಗೆ ಒಳ್ಳೆಯದು ಮಾಡಲ್ಲ ಎಂದು ಕುಟುಕಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಒಬ್ಬರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಿದ್ದೆ. ನಮ್ಮಪ್ಪನ ಮನೆಯಿಂದ ತಂದ ಹಣದಿಂದ ಕೊಟ್ಟಿರಲಿಲ್ಲ. ಈಗ 5 ಕೆ.ಜಿ ಕೊಡುತ್ತಿದ್ದೀರಿ. ಯಡಿಯೂರಪ್ಪ ಅವರೇ ನಿಮ್ಮಪ್ಪನ ಮನೆಯಿಂದ ಕೊಡುತ್ತಿಲ್ಲ. ಜನರ ತೆರಿಗೆಯ ಹಣದಿಂದ ಕೊಡುತ್ತಿದ್ದೀರಿ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎಂದು ಆಗ್ರಹಿಸಿದರು.

ಮಾಜಿ ಸಂಸದ ವೀರಪ್ಪ ಮೊಯಿಲಿ ಮಾತನಾಡಿ, ಯುಪಿಎ ಸರ್ಕಾರದಲ್ಲಿ ಜನಸಾಮಾನ್ಯರಿಗೆ ಹೊರೆಯಾಗಬಾರದು ಎಂದು ತೈಲ ಕಂಪನಿಗಳಿಗೆ ವಾರ್ಷಿಕ ₹ 5.5 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರ ನೀಡಿತ್ತು. ಆ ಮೂಲಕ ಕಡಿಮೆ ದರದಲ್ಲಿ ಪೆಟ್ರೋಲ್, ಡೀಸೆಲ್ ಸಿಗುವಂತೆ ನೋಡಿಕೊಂಡಿತ್ತು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ 7.7 ಲಕ್ಷ ವಿವಿಧ ಬಾಡಿಗೆ ವಾಹನಗಳ ಚಾಲಕರಿದ್ದಾರೆ. ಕೊರೊನಾ ಸೋಂಕಿನ ಸಂದರ್ಭದಲ್ಲಿ ರಾಜ್ಯ ಸರ್ಕಾರ ಚಾಲಕರಿಗೆ ಪರಿಹಾರ ನೀಡಿದೆ. ಸವಿತಾ ಸಮಾಜ, ನೇಕಾರರು, ವಿವಿಧ ವೃತ್ತಿಯಲ್ಲಿರುವವರು ಸಂಕಷ್ಟದಿಂದ ಹೊರತಲ್ಲ. ಸ್ನಾತಕೋತ್ತರ ಪದವೀಧರರು ಬೀದಿಗೆ ಬಿದ್ದಿದ್ದಾರೆ. ಅವರ ಪದವಿಗೆ ಬೆಲೆಯಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಈಶ್ವರ್ ಖಂಡ್ರೆ, ಆರ್‌. ಧ್ರುವನಾರಾಯಣ್, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ, ಶಾಸಕರಾದ ಕೃಷ್ಣಭೈರೇಗೌಡ, ವೆಂಕಟರಮಣಪ್ಪ, ಶರತ್ ಬಚ್ಚೇಗೌಡ, ಎಐಸಿಸಿ ಕಾರ್ಯದರ್ಶಿ ಸಲೀಂ ಅಹಮದ್, ಮುಖಂಡರಾದ ರೆಹಮಾನ್ ಖಾನ್, ಜಕ್ಕಣ್ಣನವರ್, ಮುನಿಶಾಮಣ್ಣ, ಎ.ಸಿ. ಶ್ರೀನಿವಾಸ್, ಜಗನ್ನಾಥ್, ಆರ್. ರವಿಕುಮಾರ್, ವೆಂಕಟಸ್ವಾಮಿ, ಚೇತನ್ ಗೌಡ, ಕೆ.ಸಿ. ಮಂಜುನಾಥ್, ಅನಂತಕುಮಾರಿ, ಎಂ. ಲೋಕೇಶ್, ನಾಗೇಶ್, ಪ್ರಸನ್ನಕುಮಾರ್, ರಂಗಪ್ಪ, ರಾಮಚಂದ್ರಪ್ಪ, ಶಾಂತಕುಮಾರ್, ಎಸ್.ಪಿ. ಮುನಿರಾಜು, ರೇಖಾ ವೇಣುಗೋಪಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT