ಶುಕ್ರವಾರ, ಜುಲೈ 30, 2021
22 °C
ತೋಟಗಾರಿಕೆ ಇಲಾಖೆ ಕಚೇರಿ ಮುಂದೆ ರೈತರ ಧರಣಿ

ದೊಡ್ಡಬಳ್ಳಾಪುರ: ಪಹಣಿ ದೋಷ, ಪರಿಹಾರಕ್ಕೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಸರ್ಕಾರ ನಡೆಸಿರುವ ಬೆಳೆ ಸಮೀಕ್ಷೆಯಲ್ಲಿನ ತಪ್ಪಿನಿಂದಾಗಿ ರೈತರಿಗೆ ಸರ್ಕಾರದ ಯಾವುದೇ ಪರಿಹಾರ ಹಾಗೂ ಸೌಲಭ್ಯಗಳು ದೊರೆಯದಂತಾಗಿದೆ. ಇದನ್ನು ಸರಿಪಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ತೋಟಗಾರಿಕೆ ಇಲಾಖೆ ಕಚೇರಿ ಮುಂದೆ ಗುರುವಾರ ಧರಣಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸತೀಶ್‌, ‘ಹಸಿರು ಮನೆ ಹೂವು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಡಿ.ಶ್ಯಾಮಸುಂದರ್‌, ಪ್ರತಿಯೊಬ್ಬ ರೈತರ ಜಮೀನಿಗೆ ಭೇಟಿ ನೀಡಿ ಜಿಪಿಆರ್‌ಎಸ್‌ ಮೂಲಕ ಜಮೀನಿನಲ್ಲಿ ಇರುವ ಬೆಳೆಯ ಪೋಟೋ ಸಮೇತ ಪಹಣಿಯಲ್ಲಿ ಬೆಳೆ ದಾಖಲಿಸಬೇಕು. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆಯ ದಾಖಲಾತಿಯನ್ನು ಕಚೇರಿಯಲ್ಲೇ ಕುಳಿತು ಯಾವುದೋ ಪೋಟೋಗಳನ್ನು ಹಾಕುವ ಮೂಲಕ ಪಹಣಿಯಲ್ಲಿ ಬೆಳೆ ದಾಖಲು ಮಾಡಿದ್ದಾರೆ’ ಎಂದು ದೂರಿದರು.

‘ಹತ್ತು ವರ್ಷಗಳಿಂದ ಹಸಿರು ಮನೆ ನಿರ್ಮಾಣ ಮಾಡಿಕೊಂಡು 8 ಎಕರೆ ಪ್ರದೇಶದಲ್ಲಿ ಹೂವು ಬೆಳೆಯಲಾಗುತ್ತಿದೆ. ಆದರೆ 2019-2020ನೇ ಸಾಲಿನ ಪಹಣಿಯಲ್ಲಿ ಕೃಷಿಯೇತರ ಬೆಳೆ ಎಂದು ನಮೂದಿಸಲಾಗಿದೆ. ಲಾಕ್‌ಡೌನ್‌ ಜಾರಿಯಿಂದಾಗಿ ಹೂವು ಬೆಳೆಗಾರರಿಗೆ ಆಗಿರುವ ನಷ್ಟವನ್ನು ತುಂಬಿಕೊಡುವ ಸಲುವಾಗಿ ಹೆಕ್ಟೇರ್‌ಗೆ ₹ 25 ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ. ಈ ಪರಿಹಾರದ ಮೊತ್ತವನ್ನು ಪಡೆಯಲು ಪಹಣಿಯಲ್ಲಿ ಹೂವು ಬೆಳೆ ಸೇರಿದಂತೆ ಇತರ ಯಾವ ಬೆಳೆ ಇದೆ ಎನ್ನುವುದು ಇರಲೇಬೇಕು. ಇದು ಯಾರೋ ಒಬ್ಬ ರೈತರ ಸಮಸ್ಯೆ ಮಾತ್ರ ಆಗಿಲ್ಲ. ಈ ಹಿಂದೆ ಕೇಂದ್ರ ಸರ್ಕಾರ ಬೆಂಬಲ ಬೆಳೆ ಯೋಜನೆಯಲ್ಲಿ ರಾಗಿ ಖರೀದಿಗೂ ಸಹ ಇದೇ ನಿಯಮ ಮಾಡಿದ್ದರಿಂದ ಬಹುತೇಕ ರೈತರ ರಾಗಿ ಮಾರಾಟ ಮಾಡಲು ತೊಂದರೆ ಅನುಭವಿಸುವಂತಾಗಿದೆ. ಈಗ ಹೂವು ಹಾಗೂ ಮುಸುಕಿನಜೋಳದ ಬೆಳೆ ಪರಿಹಾರ ಪಡೆಯಲು ಸಹ ಅಡ್ಡಿಯಾಗಿದೆ’ ಎಂದರು.

ಧರಣಿ ನಿರತ ರೈತರನ್ನು ಭೇಟಿ ಮಾಡಿದ್ದ ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌, ‘ಪಹಣಿಯಲ್ಲಿ ಬೆಳೆ ಸಮೀಕ್ಷೆ ವರದಿ ದಾಖಲಾಗಿರುವ ದೋಷವನ್ನು ಸರಿಪಡಿಸುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಧರಣಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ, ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಶಾಶ್ವತ ನೀರಾವರಿ ಹೋರಾಟ ಸಮಿತಿ ದೊಡ್ಡಬೆಳವಂಗಲ ಹೋಬಳಿ ಅಧ್ಯಕ್ಷ ಹನುಮಂತರಾಯಪ್ಪ, ಹೂವು ಬೆಳೆಗಾರರ ಸಂಘದ ಮುಖಂಡ ಮಲ್ಲೇಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು