ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂತು ಬೆಳೆ ಹೋಯ್ತು: ಶೇಂಗಾ ಬೆಳೆಗಾರರಿಗೆ ಸಂಕಷ್ಟ

ಬೂದಿರೋಗ ತಗುಲಿ ಗಿಡದಲ್ಲೇ ಕೊಳೆತ ಶೇಂಗಾ
Last Updated 9 ನವೆಂಬರ್ 2022, 8:49 IST
ಅಕ್ಷರ ಗಾತ್ರ

ಹೊಸಕೋಟೆ: ಬರಗಾಲ ಪೀಡಿತ ಈ ಪ್ರದೇಶದಲ್ಲಿ ಈ ವರ್ಷ ಅನಿರೀಕ್ಷಿತ ಮತ್ತು ಅಸಾಧಾರಣ ಮಳೆ ಸುರಿದು ಶೇಂಗಾ ಬೆಳೆ ಕೈಗೆಟುಕದಂತೆ ಆಗಿದೆ ಎಂದು ರೈತರು ನಿರಾಶೆ ವ್ಯಕ್ತಪಡಿಸಿದ್ದಾರೆ.

ಹಲವಾರು ವರ್ಷಗಳಿಂದ ಮಳೆ ಇಲ್ಲದ ಕಾರಣ ಹೋಬಳಿಯಾದ್ಯಂತ ಕಡಿಮೆ ಪ್ರಮಾಣದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಆರಂಭಿಕ ಮಳೆ ರೈತರಲ್ಲಿ ಬೆಳೆಯ ಭರವಸೆ ಮೂಡಿಸಿತ್ತು. ನಂತರ ಸುರಿದ ಅತಿವೃಷ್ಟಿಯಿಂದಾಗಿ ಫಸಲಿನ ಆಸೆ ನೀರಿನಲ್ಲೇ ಕೊಚ್ಚಿ ಹೋಗಿದೆ.

ನಿರಂತರ ಮಳೆಯಿಂದಾಗಿ ಶೇಂಗಾ ಗಿಡಗಳು ಕೊಳೆಯುವ ಸ್ಥಿತಿಗೆ ತಲುಪಿದ್ದವು. ಹೂವು ಅಲ್ಪಮಾತ್ರ ಮೂಡಿ ಕಾಯಿಗಳ ಸಂಖ್ಯೆ ಕಡಿಮೆಯಾಗಿದೆ. ಇದ್ದ ಕಾಯಿಗಳಿಗೆ ವೈರಸ್, ಬೂದಿರೋಗ ತಗುಲಿ ಗಿಡದಲ್ಲೇ ಕೊಳೆತು ನೆಲ ಸೇರಿದೆ. ಅಳಿದುಳಿದ ಕಾಯಿಗಳ ಬೀಜಗಳುಸಮೃದ್ಧವಾಗಿ ಬೆಳೆಯದೆ ಜೊಳಕಾಗಿವೆ. ಇದರಿಂದಾಗಿ ಒಟ್ಟು ಇಳುವರಿ ಸಂಪೂರ್ಣ ಕುಸಿದು ಬೆಳೆನಷ್ಟ ಉಂಟಾಗಿದೆ.

ಬೆಂಕಿಚೀಡೆ ರೋಗವು 2 ಬಾರಿ ಆವರಿಸಿ ಫಸಲಿನ ನಷ್ಟಕ್ಕೆ ಮತ್ತೊಂದು ಕಾರಣವಾಗಿದೆ. ಹಿಂದಿನ ವರ್ಷ ಸಕಾಲಿಕ ಮಳೆ ಇಲ್ಲದೆ ರೈತ ಕೆಟ್ಟರೆ, ಈ ವರ್ಷ ಮಳೆಯಿಂದಲೇ ಸಂಪೂರ್ಣ ನಾಶವಾಗಿದೆ ಎಂದು ರೈತರಾದ ಸಿದ್ದಾಪುರದ ಹನುಮಂತರಾಯಪ್ಪ, ತಿಪ್ಪಗಾನಹಳ್ಳಿಯ ನಾರಾಯಣಪ್ಪ ನೋವು ವ್ಯಕ್ತಪಡಿಸಿದರು.

ಹೋಬಳಿಯಾದ್ಯಂತ ಶೇಂಗಾ ಬೆಳೆ ಹೆಚ್ಚು ಬಿತ್ತನೆಯಾಗಿಲ್ಲ. ಮಳೆಯ ಕೊರತೆ, ರೋಗಬಾಧೆ, ಕಾಡುಪ್ರಾಣಿಗಳ ಹಾವಳಿ ಮತ್ತು ಕೂಲಿಯಾಳುಗಳ ಸಮಸ್ಯೆಯಿಂದ ಬಹುಪಾಲು ರೈತರು ಅಲ್ಪಪ್ರಮಾಣದಲ್ಲಿ ಶೇಂಗಾ ಬಿತ್ತನೆ ಮಾಡಿದ್ದಾರೆ. ಪ್ರಸ್ತುತ
ಮಳೆ ಬಿಟ್ಟಿರುವ ಹಿನ್ನೆಲೆಯಲ್ಲಿ ಶೇಂಗಾ ಕಟಾವು ಕಂಡುಬರುತ್ತಿದ್ದರೂ ಇಳುವರಿ ಆಶಾದಾಯಕವಾಗಿಲ್ಲ. ಮಿಶ್ರಬೆಳೆಯಾದ ತೊಗರಿ ಮೇಲೆ ರೈತರಲ್ಲಿ ಹೆಚ್ಚಿನ ಭರವಸೆ ಕಂಡುಬರುತ್ತಿದೆ. ಅದರೊಂದಿಗೆ ಸರ್ಕಾರದ ಬೆಳೆನಷ್ಟ ಪರಿಹಾರ ಮತ್ತು ಬೆಳೆವಿಮೆಯ ಕಡೆಗೆ ರೈತರ ಚಿತ್ತ ಕೇಂದ್ರೀಕೃತವಾಗಿದೆ.

ಇಳುವರಿ ಕಡಿಮೆ: ಉತ್ತಮ ಮಳೆಯ ನಿರೀಕ್ಷೆಯಲ್ಲಿ ಜಮೀನನ್ನು ಗುತ್ತಿಗೆ ಪಡೆದು ಶೇಂಗಾ ಬಿತ್ತನೆ ಮಾಡಿದೆ. ಪ್ರಾರಂಭಿಕವಾಗಿ ಶೇಂಗಾ ಗಿಡ ಉತ್ತಮವಾಗಿ ಬೆಳೆದು ಬಂದವು. ಹೂವು ಬಿಟ್ಟು ಕಾಯಿ ಆಗುವ ಸಂದರ್ಭದಲ್ಲಿ ಬೆಂಕಿ ರೋಗ ತಗುಲಿ ಎಲೆಗಳು ಸಂಪೂರ್ಣ ಮುದುಡಿ ಒಣಗಲಾರಂಭಿಸಿದವು. ಔಷಧಿ ಸಿಂಪಡಣೆ ಮಾಡಿದರೂ ಕಡಿಮೆಯಾಗಲಿಲ್ಲ. ಪರಿಣಾಮವಾಗಿ ಕಾಯಿ ಬಲಗೊಳ್ಳದೆ ಇಳುವರಿ ಕಡಿಮೆಯಾಗಿದೆ. ಗಿಡಗಳು ಉದ್ದವಾಗಿ ಬೆಳೆದಿದ್ದರೂ ಕಾಯಿಗಳಿಲ್ಲ. ರೋಗ ಸೋಂಕಿತ ಗಿಡಗಳನ್ನು ಕಿತ್ತಾಗ ಕಾಯಿಗಳು ಭೂಮಿಯೊಳಗೆ ಸೇರುತ್ತಿವೆ.

- ಗೋವಿಂದಪ್ಪ, ಯಲ್ಲಪ್ಪನಾಯಕನಹಳ್ಳಿ

₹14 ಸಾವಿರ ನಷ್ಟ: ಒಂದು ಕ್ವಿಂಟಲ್‌ಗೆ ₹9 ಸಾವಿರದಂತೆ ಶೇಂಗಾಬೀಜ ಕೊಂಡು ಬಿತ್ತನೆ ಮಾಡಿದೆ. ಬಿತ್ತನೆ ಖರ್ಚು, ಕಳೆ, ಎಡಗುಂಟೆ, ಬೆಳೆ ಕಟಾವು ಮತ್ತು ಬಿತ್ತನೆ ಬೀಜದ ಖರ್ಚು ಸೇರಿ ಒಟ್ಟು ₹30 ಸಾವಿರ ಖರ್ಚು ತಗುಲಿದೆ. ಆದರೆ 3.5 ಕ್ವಿಂಟಾಲ್ ಶೇಂಗಾ ಬೆಳೆದಿದ್ದು, ₹16,000 ದೊರೆತಿದೆ. ಮಳೆಯಿಂದ ಬಳ್ಳಿ ಸಂಪೂರ್ಣ ಕೊಳೆತು ಹೋಗಿದೆ. ಈ ವರ್ಷ ಶೇಂಗಾ ಬೆಳೆಯಿಟ್ಟು ನಮ್ಮ ದೈಹಿಕ ಶ್ರಮದ ಜೊತೆಗೆ ₹14 ಸಾವಿರ ನಷ್ಟ ಅನುಭವಿಸಿದ್ದೇನೆ.

- ನರಸಿಂಹಪ್ಪ, ಬಿ.ಹೊಸಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT