ಬುಧವಾರ, ಜನವರಿ 20, 2021
17 °C
ಆನೇಕಲ್‌: ಪೆರಿಯರ್‌ ರಾಮಸ್ವಾಮಿ ಜನ್ಮದಿನದಲ್ಲಿ ಅಭಿಮತ

ಪೆರಿಯಾರ್‌ ತತ್ವ ಸದಾ ಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ‘ಸಮಾಜದ ಮೌಢ್ಯತೆ ತೊಡೆದು ಹಾಕಿ ವೈಚಾರಿಕ ಪ್ರಜ್ಞೆ ಮೂಡಿಸಲು ಪೆರಿಯಾರ್‌ ರಾಮಸ್ವಾಮಿ ಅವರು ಶ್ರಮಿಸಿದರು. ಅವರ ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತ’ ಎಂದು ಹೋರಾಟಗಾರ ಫಟಾಫಟ್‌ ನಾಗರಾಜು ತಿಳಿಸಿದರು.

ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪೆರಿಯಾರ್‌ ರಾಮಸ್ವಾಮಿ ಅವರ ಜನ್ಮದಿನದ ಅಂಗವಾಗಿ ಮೌಢ್ಯದಿಂದ ವಿಜ್ಞಾನದೆಡೆಗೆ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಯುವಕರು ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್‌ರಂತಹ ದಾರ್ಶನಿಕರ ಜೀವನ ಚರಿತ್ರೆ ಮತ್ತು ತತ್ವಗಳನ್ನು ಅಧ್ಯಯನ ಮಾಡಿದರೆ ಸಮಾಜದ ಬದಲಾವಣೆಗೆ ನಾಂದಿಯಾಗುತ್ತದೆ. ವೈಜ್ಞಾನಿಕವಾಗಿ ಆಲೋಚಿಸುವ ಮತ್ತು ಪ್ರಗತಿಪರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮೂಢನಂಬಿಕೆಗಳನ್ನು ನಿರ್ಮೂಲನೆ ಮಾಡಲು ಶ್ರಮಿಸಬೇಕು’ ಎಂದರು.

‘ಪೆರಿಯಾರ್‌ ರಾಮಸ್ವಾಮಿ ಅವರು ದ್ರಾವಿಡ ಚಳವಳಿಯ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಅವಿರತವಾಗಿ ಶ್ರಮಿಸಿದರು. ಮೂರ್ತಿ ಪೂಜೆಯನ್ನು ಬಿಡಿ ದಾರ್ಶನಿಕರ ಭಾವಚಿತ್ರಗಳಿಗೆ ಪೂಜೆ ಮಾಡಿ ಎಂದು ಸಂದೇಶ ನೀಡಿದ್ದರು’ ಎಂದರು.

ಪ್ರಗತಿಪರ ಚಿಂತಕ ಜಿಗಣಿ ಶಂಕರ್‌ ಮಾತನಾಡಿ, ‘ಪೆರಿಯಾರ್‌ ರಾಮಸ್ವಾಮಿ ಅವರ ಜೊತೆಗೆ ಗುರುತಿಸಿಕೊಂಡು ಬೆಳೆದ ದ್ರಾವಿಡ ಚಳವಳಿಯಲ್ಲಿ ಬೆಳೆದ ಅನೇಕ ನಾಯಕರು ಅಧಿಕಾರವನ್ನು ಅನುಭವಿಸಿದರೂ ಆದರೆ ಪೆರಿಯರ್‌ ಚಿಂತನೆ ಅಳವಡಿಸಿಕೊಳ್ಳಲಿಲ್ಲ. ಒಗ್ಗಟ್ಟಿನ ಕೊರತೆಯಿಂದ ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಇಂದಿಗೂ ಸಾಧ್ಯವಾಗಿಲ್ಲ. ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಭಾಷೆಯ ಹೇರಿಕೆಯಾಗುತ್ತಿದೆ. ಪೆರಿಯಾರ್‌ ರಾಮಸ್ವಾಮಿ ಅವರು ಪ್ರಾಂತೀಯ ಭಾಷೆಗಳ ಮೇಲೆ ಹಿಂದಿಯ ದಬ್ಬಾಳಿಕೆಯನ್ನು ಅಂದಿನ ದಿನಗಳಲ್ಲಿಯೇ ವಿರೋಧಿಸಿ ಪ್ರಾಂತೀಯ ಭಾಷೆಗಳಿಗೆ ಮಹತ್ವ ನೀಡಬೇಕೆಂದು ಒತ್ತಾಯಿಸಿದ್ದರು. ಈ ನಿಟ್ಟಿನಲ್ಲಿ ಹೋರಾಟ ತೀವ್ರಗೊಳಿಸುವ ಮೂಲಕ ಜನರ ಸ್ವಾಭಿಮಾನದ ಸಂಕೇತವಾದ ಪ್ರಾಂತೀಯ ಭಾಷೆಗಳಿಗೆ ಮಹತ್ವ ನೀಡುವಂತೆ ಒತ್ತಾಯ ತರಬೇಕಾಗಿದೆ’ ಎಂದರು.

ಮುಖಂಡ ಸಿ.ರಾವಣ ಮಾತನಾಡಿ, ‘ಜಾತೀಯತೆ ವಿರೋಧಿಸಿ ಮತ್ತು ಸ್ತ್ರೀಸಮಾನತೆ, ಶೋಷಿತರ ದನಿಯಾಗಿ ಕ್ರಾಂತಿಕಾರಿ ಬದಲಾವಣೆಗೆ ಪೆರಿಯಾರ್‌ ರಾಮಸ್ವಾಮಿ ಅವರು ಹೋರಾಟ ನಡೆಸಿದರು. ಭಾರತೀಯ ಸಮಾಜದಲ್ಲಿನ ಮೂಲಭೂತ ಬದಲಾವಣೆಗಳಿಗೆ ಕಾರಣಕರ್ತರಾದರು’ ಎಂದರು.

ಮುಖಂಡರಾದ ಛಲವಾದಿ ನಾಗರಾಜು, ಗುಡ್ಡಹಟ್ಟಿ ಶಂಭಪ್ಪ, ಆನಂದ ಚಕ್ರವರ್ತಿ, ವೆಂಕಟೇಶಮೂರ್ತಿ, ಸುರೇಶ್‌ ಪೋತಾ, ಯಡವನಹಳ್ಳಿ ಕೃಷ್ಣಪ್ಪ, ನಾಗರಾಜು ಮೌರ್ಯ, ತ್ರಿಪುರ ಸುಂದರಿ, ರೇಷ್ಮ ಹಾಜರಿದ್ದರು. ವಿವಿಧ ಹೋರಾಟಗಾರರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು