ಗುರುವಾರ , ಮಾರ್ಚ್ 4, 2021
18 °C

ರಸ್ತೆಗಳಲ್ಲಿ ರಾಗಿ ಮೆದೆ: ಕ್ರಮಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ಗ್ರಾಮಾಂತರ ಪ್ರದೇಶಗಳಲ್ಲಿನ ಬಹುತೇಕ ರಸ್ತೆಗಳಲ್ಲಿ ರಾಗಿ ಮೆದೆಗಳನ್ನು ತಂದು ಹಾಕಿ ಕಣ ಮಾಡುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಗಮನ ಹರಿಸಬೇಕು ಎಂದು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.

ಮುಂಗಾರು ಆರಂಭದಲ್ಲೆ ಬಿತ್ತನೆ ಮಾಡಿರುವಂತಹ ಹೊಲಗಳಲ್ಲಿನ ರಾಗಿ ತೆನೆ ಸಹಿತ ಮೆದೆಗಳನ್ನು ಚನ್ನರಾಯಪಟ್ಟಣ ಹಾಗೂ ವಿಜಯಪುರ ಹೋಬಳಿಯ ಕೆಲವು ಹಳ್ಳಿಗಳ ರೈತರು ರಸ್ತೆಗಳಲ್ಲಿ ತಂದು ಉದ್ದಕ್ಕೂ ಹಾಕುತ್ತಾರೆ. ಸಂಚರಿಸುವ ವಾಹನಗಳ ಚಕ್ರಗಳಿಗೆ ಸಿಕ್ಕಿ ರಾಗಿ ಬೇರ್ಪಡುತ್ತದೆ ಎನ್ನುವ ಉದ್ದೇಶದಿಂದ ಇವನ್ನು  ಹಾಕಿದ್ದಾರೆ. ಇದರಿಂದ ದ್ವಿ ಚಕ್ರ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.

ರಾಗಿ ಮೆದೆಯನ್ನು ಹಾಕಿರುವ ಜಾಗದಲ್ಲಿ ವಾಹನಗಳ ಸಂಚಾರದಿಂದ ರಸ್ತೆಯ ಹೊರಗೆ ಹೋಗಿರುವ ಹುಲ್ಲನ್ನು ಸರಿಪಡಿಸಲೆಂದು ಇರುವ ಕಾರ್ಮಿಕರು ವಾಹನಗಳು ಬರುವುದನ್ನೂ ಗಮನಿಸದೆ, ಅಪಾಯಕ್ಕೆ ಸಿಲುಕಿರುವ ಘಟನೆಗಳೂ ನಡೆದಿವೆ. ಕೆಲವೊಮ್ಮೆ ಹುಲ್ಲಿನ ಮೇಲೆ ಹಾದುಹೋಗುವ ವಾಹನಗಳು ಜಾರಿ ಬಂದು ಜನರಿಗೆ ಬಡಿದಿರುವ ಘಟನೆಗಳೂ ನಡೆದಿವೆ ಎಂದರು.

ಮುಖಂಡ ಮುನಿರಾಜು ಮಾತನಾಡಿ, ಈ ವರ್ಷದಲ್ಲಿ ಬೆಳೆಗಳು ಸರಿಯಾಗಿ ಆಗಿಲ್ಲ, ಮೊದಲು ಬಿತ್ತನೆ ಮಾಡಿರುವ ಹೊಲಗಳಲ್ಲಿನ ಹರಿ (ರಾಗಿ ಮೆದೆ) ತಂದು ಹಾಕಿಕೊಳ್ಳುತ್ತಿದ್ದಾರೆ. ಹಳ್ಳಿಗಳಲ್ಲಿ ಕೃಷಿ ಇಲಾಖೆಯಿಂದ ಕಣಗಳನ್ನು ಮಾಡಲಿಕ್ಕೆ ಹಣ ಕೊಟ್ಟು ಕಾಂಕ್ರೀಟ್ ಕಣಗಳನ್ನೂ ಮಾಡಿದ್ದಾರೆ. ರೈತರು ಇಂತಹ ಕಣಗಳನ್ನು ಉಪಯೋಗಿಸಿಕೊಳ್ಳುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗಳು ಕ್ರಮ ವಹಿಸಬೇಕು ಎಂದಿದ್ದಾರೆ.

ಎಲ್ಲಿದೆ ದುಡ್ಡು: ರೈತ ವೆಂಕಟಪ್ಪ ಮಾತನಾಡಿ, ‘ನಾವು ಹೊಲದಲ್ಲಿ ಬಿತ್ತನೆ ಮಾಡಬೇಕಾದರೆ ಒಂದು ಎಕರೆಗೆ ಸುಮಾರು ₹ 10 ಸಾವಿರ ಖರ್ಚು ಮಾಡಿದ್ದೇವೆ. ಈಗ ಅಲ್ಪಸ್ವಲ್ಪ ಬೆಳೆ ಮಾತ್ರ ನಮ್ಮ ಕೈಗೆ ಸಿಕ್ಕಿದೆ. ನಾವು ಕಣ ಮಾಡಬೇಕಾದರೆ ಕನಿಷ್ಠ ₹ 5 ಸಾವಿರ ಖರ್ಚು ಮಾಡಬೇಕು’ ಎಂದರು.

‘ಕಣಕ್ಕೆ ಟ್ರ್ಯಾಕ್ಟರ್ ತರಿಸಬೇಕು, ಕಾರ್ಮಿಕರನ್ನು ಹೊಂದಿಸಿಕೊಳ್ಳಬೇಕು. ಇಷ್ಟೆಲ್ಲ ಮಾಡಲಿಕ್ಕೆ ಸಾಧ್ಯವಿಲ್ಲದ ಕಾರಣ ನಾವು ಪ್ರತಿ ವರ್ಷ ರಸ್ತೆಯಲ್ಲೆ ಹಾಕಿಕೊಂಡರೆ, ಸಂಜೆಯೊಳಗೆ ರಾಗಿ ಬೇರ್ಪಡುತ್ತದೆ. ಹುಲ್ಲು ಪ್ರತ್ಯೇಕ ಮಾಡಿದರೆ, ರಾಗಿಯನ್ನು ಸ್ವಚ್ಛಗೊಳಿಸಿಕೊಂಡು ಮನೆಗೆ ತೆಗೆದುಕೊಂಡು ಹೋಗ್ತೇವೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು