ಸೋಮವಾರ, ಮೇ 17, 2021
23 °C
ಹುಲಿಕುಂಟೆಯಲ್ಲಿ ನೂತನ ಕೈಗಾರಿಕಾ ಪ್ರದೇಶ ಸ್ಥಾಪನೆ

ಹುಲಿಕುಂಟೆಯಲ್ಲಿ ನೂತನ ಕೈಗಾರಿಕಾ ಪ್ರದೇಶ: ಸ್ಥಳೀಯರ ಪರ-ವಿರೋಧ

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ಹುಲುಕುಂಟೆ ಬಳಿ ಹೊಸ ಕೈಗಾರಿಕಾ ಪ್ರದೇಶ ತಲೆಎತ್ತುವ ಮೂಲಕ ಬಾಶೆಟ್ಟಿಹಳ್ಳಿ ನಂತರ ಮತ್ತೊಂದು ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಸಿದ್ಧತೆ ಆರಂಭವಾಗಿದೆ. ಈ ಕುರಿತಂತೆ ಅಕ್ಟೋಬರ್‌ 10ರಂದು ನಡೆದ ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿರುವ ಗ್ರಾಮದ ಸರ್ವೆ ನಂಬರ್‌ ಹಾಗೂ ನೀಲನಕ್ಷೆ ಪ್ರಕಟವಾಗಿದೆ.

ನೆಲಮಂಗಲ ತಾಲ್ಲೂಕಿನ ಓಬಳಾಪುರ ಹಾಗೂ ಹುಲಿಕುಂಟೆ ವ್ಯಾಪ್ತಿಯ 1,150 ಎಕರೆ ಪ್ರದೇಶದಲ್ಲಿ ‘ಮಲ್ಟಿ ಮಾಡಲ್‌ ಲಾಜಿಸ್ಟಿಕ್‌ ಪಾರ್ಕ್‌’ (ಎಂಎಂಎಲ್‌ಪಿ) ಸ್ಥಾಪನೆಯಾಗುತ್ತಿದೆ. ನೆಲಮಂಗಲ ತಾಲ್ಲೂಕಿನ ಓಬಳಾಪುರ ಕೈಗಾರಿಕಾ ಪ್ರದೇಶದಲ್ಲಿ 550 ಎಕರೆ, ಹುಲಿಕುಂಟೆ ಕೈಗಾರಿಕಾ ಪ್ರದೇಶದಲ್ಲಿ 600 ಎಕರೆ ಗುರುತಿಸಲಾಗಿದೆ.

ಕೈಗಾರಿಕೆಗೆ ಸ್ವಾಧೀನವಾಗುತ್ತಿರುವ ಒಂದು ಎಕರೆ ಖುಷ್ಕಿಗೆ ಜಮೀನಿಗೆ ಕನಿಷ್ಠ ₹17ರಿಂದ ₹55 ಲಕ್ಷ, ತರಿ ಜಮೀನಿಗೆ ₹19ರಿಂದ ₹59 ಲಕ್ಷ, ಬಾಗಾಯ್ತು ಜಮೀನಿಗೆ ₹20 ರಿಂದ ₹65ಲಕ್ಷ, ಸ್ಥಳೀಯ ಸಂಸ್ಥೆ ವಸತಿ ನಿವೇ‍ಶನ ಮೌಲ್ಯ ಪ್ರತಿ ಚದರಿ ಮೀಟರ್‌ಗೆ ₹1,200ರಿಂದ ₹2,400. ಪ್ರಸ್ತಾಪಿತ ಬೆಲೆ ₹1,320ರಿಂದ ₹2,880, ಸಕ್ಷಮ ಪ್ರಾಧಿಕಾರದಿಂದ ವಸತಿ ನಿವೇಶನದ ಮೌಲ್ಯ ಪ್ರತಿ ಚರದ ಮೀಟರ್‌ಗೆ ಪ್ರಸ್ತಾಪಿತ ಬೆಲೆ ₹2,640ರಿಂದ ₹5,760 ಎಂದು ನಿಗದಿಪಡಿಸಲಾಗಿದೆ.

ಈ ಕೈಗಾರಿಕೆ ಅಗತ್ಯವಿತ್ತೆ ? ತಾಲ್ಲೂಕಿನ ಬಾಶೆಟ್ಟಿಹಳ್ಳಿಯಲ್ಲಿ 80ರ ದಶಕದಲ್ಲಿ ಆರಂಭವಾದ ಕೈಗಾರಿಕಾ ಪ್ರದೇಶ ನಾಲ್ಕು ಬಾರಿ ವಿಸ್ತರಣೆಯಾಗಿ ಈಗ ಸುಮಾರು 2,500 ಎಕರೆಗೆ ಬಂದು ನಿಂತಿದೆ. ಹಾಗೆಯೇ ಹುಲಿಕುಂಟೆ ಗಡಿ ಭಾಗಕ್ಕೆ ಹೊಂದಿಕೊಂಡಂತೆಯೇ ನೆಲಮಂಗಲ ತಾಲ್ಲೂಕಿನ ದಾಬಸ್‌ಪೇಟೆ, ಶಿವಗಂಗೆ ಸಮೀಪ ಸುಮಾರು 1,500 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಯಾಗಿದೆ. ಈ ಇಷ್ಟೂ ಪ್ರದೇಶದಲ್ಲೂ ಭೂಸ್ವಾಧೀನವಾಗಿ ದಶಕಗಳೇ ಕಳೆದಿದ್ದರೂ ಇನ್ನು ಪೂರ್ಣಪ್ರಮಾಣದಲ್ಲಿ ಕೈಗಾರಿಕೆಗಳು ಕಾರ್ಯಾರಂಭ ಮಾಡದೇ ಜಮೀನು ಖಾಲಿಯಾಗಿಯೇ ಉಳಿದಿವೆ. ವಾಸ್ತವ ಸ್ಥಿತಿ ಹೀಗಿರುವಾಗ ತಾಲ್ಲೂಕಿಗೆ ಮತ್ತೊಂದು ಕೈಗಾರಿಕಾ ಪ್ರದೇಶ ಸ್ಥಾಪನೆ ಅಗತ್ಯ ಇತ್ತೇ ಎನ್ನುವ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹುಲಿಕುಂಟೆ, ಓಬಳಾಪುರ ವ್ಯಾಪ್ತಿಯಲ್ಲಿ ಬಹುತೇಕ ಜನ ಕೃಷಿಯನ್ನೇ ನಂಬಿ ಬದುಕು ನಡೆಸುತ್ತಿರುವ ಸಣ್ಣ ಹಿಡುವಳಿದಾರ ಕುಟುಂಬಗಳ ಹಾಗೂ ಸಂಖ್ಯೆಯೇ ಹೆಚ್ಚಾಗಿದೆ. ಇಂತಹ ಪ್ರದೇಶದಲ್ಲಿ ಕೃಷಿಕರನ್ನು ಒಕ್ಕಲೆಬ್ಬಿಸಿ ಕೈಗಾರಿಕೆ ಸ್ಥಾಪನೆ ಮಾಡುವ ಅಗತ್ಯವಾದರು ಏನಿದೆ ಎನ್ನುವುದು ಈ ಭಾಗದ ರೈತರ ಪ್ರಶ್ನೆಯಾಗಿದೆ. ಈ ಭಾಗದಲ್ಲಿ ಸ್ಥಾಪನೆ ಆಗುತ್ತಿರುವುದು ಲಾಜಿಸ್ಟಿಕ್‌ ಪಾರ್ಕ್‌ ಹೊರತು; ಕೈಗಾರಿಕೆಗಳು ಅಲ್ಲ. ಉದ್ಯೋಗವೂ ಮರೀಚಿಕೆ ಎನ್ನುತ್ತಾರೆ ಸ್ಥಳೀಯರು.

ಎತ್ತಿನಹೊಳೆ ಕುಡಿಯುವ ನೀರಿಗೂ ತೊಂದರೆ

ತಾಲ್ಲೂಕಿನ ಸಾಸಲು ಹೋಬಳಿ ಗರುಡಗಲ್ಲು, ಮಂಚೇನಹಳ್ಳಿ ಸಮೀಪ ಕುಡಿಯುವ ನೀರಿನ ಎತ್ತಿನಹೊಳೆ ಯೋಜನೆಯಿಂದ ಬರುವ ನೀರು ಸಂಗ್ರಹಿಸಲು ಬೈರಗೊಂಡ್ಲು ಜಲಾಶಯ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಹುಲಿಕುಂಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾದರೆ ನೀರು ಹರಿದು ಹೋಗುವುದೇ ಈ ಜಲಾಶಯದ ಕಡೆಗೆ. ಇಂತಹ ಪ್ರದೇಶದಲ್ಲೇ ಕೈಗಾರಿಕೆಗಳು ಸ್ಥಾಪನೆಯಾದರೆ ಇಲ್ಲಿಂದ ಹರಿದು ಬರುವ ಕೊಳಚೆ ನೀರು ಎತ್ತಿನಹೊಳೆ ನೀರು ಸಂಗ್ರಹಣೆ ಮಾಡುವ ಬೈರಗೊಂಡ್ಲು ಜಲಾಶಯಕ್ಕೆ ಹೋಗಿ ಸೇರುವ ಅಪಾಯಗಳಿವೆ. ಹೀಗಾಗಿ ಕುಡಿಯುವ ನೀರಿನ ಯೋಜನೆಗೂ ಕುತ್ತುಬರಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು