ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ

7
ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಯಲು ಆಡ್ಡಿ– ಆಕ್ಷೇಪ

ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ

Published:
Updated:
Deccan Herald

ವಿಜಯಪುರ: ಕುಡಿಯುವ ನೀರಿಗಾಗಿ ಸರ್ಕಾರಿ ಜಮೀನಿನಲ್ಲಿ ಕೊಳವೆಬಾವಿ ಕೊರೆಯಲು ಹೋದರೆ, ರೈತರೊಬ್ಬರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಇರಿಗನಹಳ್ಳಿ ಗ್ರಾಮದ ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರಿಗನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಈಗಾಗಲೇ ಮೂರು ಕೊಳವೆಬಾವಿಗಳನ್ನು ಕೊರೆಯಿಸಿದ್ದಾರೆ. ಮೂರೂ ವಿಫಲವಾಗಿವೆ. ನಂತರ ಜಲಬಿಂದುಗಳನ್ನು ಗುರ್ತಿಸುವಾಗ ಮಂಡಿಬೆಲೆ ಗ್ರಾಮ ಪಂಚಾಯಿತಿಯ ಧರ್ಮಪುರ, ಇರಿಗೇನಹಳ್ಳಿ ಗಡಿಯಲ್ಲಿರುವ ಸರ್ಕಾರಿ ಜಮೀನಿನಲ್ಲಿ ಜಲಬಿಂದು ಗುರ್ತಿಸಿದ್ದಾರೆ ಎಂದು ಪ್ರತಿಭಟನಕಾರರು ವಿವರಿಸಿದರು.

‘ಕೊಳವೆಬಾವಿ ಯಂತ್ರವನ್ನು ಇಲ್ಲಿಗೆ ತಂದು ಕೊರೆಯಲು ಮುಂದಾದಾಗ ಇಲ್ಲಿನ ರೈತರೊಬ್ಬರು, ಸಮೀಪದಲ್ಲಿ ನಮ್ಮ ಕೊಳವೆಬಾವಿಯಿದೆ. ಆದ್ದರಿಂದ ಇಲ್ಲಿ ಕೊರೆಯಬೇಡಿ ಎಂದು ಅಡ್ಡಿಪಡಿಸುತ್ತಿದ್ದಾರೆ. ಕುಡಿಯುವ ನೀರಿಗಾಗಿ ಎಲ್ಲಿ ಬೇಕಾದರೂ ಕೊಳವೆಬಾವಿ ಕೊರೆಯಬಹುದಾಗಿದೆ. ಆದರೂ, ಇವರು ನಮಗೆ ಅಡ್ಡಿಪಡಿಸುವುದು ಸರಿಯಲ್ಲ, ಅಧಿಕಾರಿಗಳು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ನಮಗೆ ಕುಡಿಯಲಿಕ್ಕೆ ನೀರು ಕೊಡಲಿ’ ಎಂದು ಇರಿಗೇನಹಳ್ಳಿ ಗ್ರಾಮದ ಸುವರ್ಣಮ್ಮ ಒತ್ತಾಯಿಸಿದರು.

ಗ್ರಾಮಸ್ಥೆ ಸರಳ ಮಾತನಾಡಿ, ‘ನಾವು ನೀರಿಗಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಖಾಲಿ ಬಿಂದಿಗೆಗಳನ್ನು ಎತ್ತಿಕೊಂಡು ಪಕ್ಕದ ಊರಿಗೆ ಹೋಗಿ ನೀರು ತರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಕೊಳವೆಬಾವಿ ಕೊರೆಯದಂತೆ ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ. ನಾವೇನು ಅವರ ಸ್ವಂತ ಜಮೀನಿನಲ್ಲಿ ಕೊರೆಯಿರಿ ಎಂದು ಹೇಳಿಲ್ಲ. ಸರ್ಕಾರಿ ಜಾಗದಲ್ಲಿ ಕೊರೆಯಲಿಕ್ಕೆ ಕೇಳಿದ್ದೇವೆ’ ಎಂದರು.

ಗ್ರಾಮಸ್ಥ ತಾಯಪ್ಪ ಮಾತನಾಡಿ, ‘ರೈತರು ಕೊರೆದಿರುವ ಕೊಳವೆಬಾವಿಗೂ ಈಗ ಗುರುತಿಸಿರುವ ಜಾಗಕ್ಕೂ 500 ಮೀಟರ್ ದೂರವಿದೆ. ಇಲ್ಲಿ ಕೊರೆದರೆ ನಮ್ಮ ಕೊಳವೆಬಾವಿಯಲ್ಲಿ ನೀರಿನ ಇಳುವರಿ ಕಡಿಮೆಯಾಗುತ್ತದೆ ಎನ್ನುವುದು ರೈತರ ವಾದ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ನಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.ಇಲ್ಲವಾದರೆ ನಾವು ವಾಪಸ್‌ ಹೋಗುವುದೂ ಇಲ್ಲ’ ಎಂದು ತಿಳಿಸಿದರು.

ಸ್ಥಳಕ್ಕೆ ಬಂದು ಕುಡಿಯುವ ನೀರಿನ ವಿಭಾಗದ ಎಇಇ ಸೋಮಶೇಖರಯ್ಯ ಅವರು ರೈತರನ್ನು ಕರೆಯಿಸಿ ಮಾತನಾಡಿ, ‘ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಬೇಕಾಗಿರುವುದು ನಮ್ಮ ಕರ್ತವ್ಯ. ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡಬೇಕಾಗಿದೆ. ಆದ್ದರಿಂದ ಕೊಳವೆಬಾವಿ ಕೊರೆಯಲಿಕ್ಕೆ ಅವಕಾಶ ಮಾಡಿಕೊಡಿ’ ಎಂದು ಸಲಹೆ ನೀಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಪಾಲರಾವ್ ಮಾತನಾಡಿ, ‘ಕೊಳವೆಬಾವಿ ಕೊರೆಯಿಸಿದ ನಂತರ ನೀರು ಸಿಕ್ಕಿದರೆ ಧರ್ಮಪುರ ಹಾಗೂ ಇರಿಗೇನಹಳ್ಳಿಯವರು ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ. ನಾವು ಜನರಿಗೆ ಅನುಕೂಲ ಮಾಡಬೇಕೆಂದು ಕೆಲಸ ಮಾಡುತ್ತಿದ್ದೇವೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವಕಾಶ ಕೊಡಿ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !