ಸೋಮವಾರ, ಸೆಪ್ಟೆಂಬರ್ 28, 2020
24 °C
ದೇವನಹಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು, ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ, ಬಿಸಿಯೂಟ ತಯಾರಕರು ಮತ್ತು ಆಶಾ ಕಾರ್ಯಕರ್ತೆಯರ ಸಂಘಟನೆಗಳ ಜಂಟಿ ಸಮಿತಿ ತಾಲ್ಲೂಕು ಘಟಕ ಕಾರ್ಯದರ್ಶಿ ಪುಷ್ಪಾವತಿ, ‘ರಾಜ್ಯದಲ್ಲಿ ಕೋವಿಡ್ 19 ಸೋಂಕು ಕಡಿವಾಣದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು, ಹಾಲಿ ಗೌರವಧನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾದ ದುಃಸ್ಥಿತಿ ಇದ್ದರೂ ನಾಲ್ಕಾರು ತಿಂಗಳ ವೇತನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ, ಬಿಸಿಯೂಟ ತಯಾರಿಕರಿಗೆ ಈವರೆಗೆ ಬಿಡುಗಡೆಯಾಗಿಲ್ಲ. ಸೋಂಕಿನಿಂದ ಸುರಕ್ಷತೆಗಾಗಿ ಜೀವ ರಕ್ಷಕ ಸಾಧನೆಗಳ ಕೊರತೆಯಿಂದ ಮರಣ ಹೊಂದುತ್ತಿದ್ದಾರೆ. ಸೂಕ್ತ ಚಿಕಿತ್ಸೆ ನೀಡುವಲ್ಲಿಯೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ನೌಕರರ ಬೇಡಿಕೆಯಂತೆ ವಿಮೆ ಸೌಲಭ್ಯ ನೀಡಿಲ್ಲ. ಅಪಾಯಕಾರಿ ಕೆಲಸಕ್ಕೆ ಪರಿಹಾರ ಭತ್ಯೆ ಇಲ್ಲ. ಸೇವಾ ಭದ್ರತೆ ಇಲ್ಲದೆ ದುಡಿಯುತ್ತಿರುವ ನೌಕರರ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಲೇ ಬರುತ್ತಿವೆ. ಆರೋಗ್ಯ ಮತ್ತು ಶಿಕ್ಷಣ ಹಾಗೂ ಇತರ ಅಗತ್ಯ ಸೇವೆಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಪ್ರಸ್ತಾವ ಮಾಡುತ್ತಿದ್ದು ಅದನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯದ ಉದ್ದಿಮೆಗಳ ಮತ್ತು ಸೇವೆಗಳ ಖಾಸಗೀಕರಣದಿಂದಾಗಿ ಸ್ವಾಭಿಮಾನಿಗಳಾದ ನೌಕರರು ಬಂಡವಾಳಶಾಹಿಗಳ ಮುಂದೆ ಭಿಕ್ಷೆ ಬೇಡಬೇಕಾದ ಸ್ಥಿತಿಗೆ ತರಕೂಡದು’ ಎಂದು ಒತ್ತಾಯಿಸಿದರು.

ಖಜಾಂಚಿ ಅನುಸೂಯದೇವಿ ಮಾತನಾಡಿ, ‘ಗೌರವಧನ ಪಡೆಯುತ್ತಿರುವ ನೌಕರರನ್ನು ಕಾಯಂ ಮಾಡಿ ಮಾಸಿಕ ₹ 21 ಸಾವಿರ ಕನಿಷ್ಠ ವೇತನ ನೀಡಬೇಕು. ನಿವೃತ್ತರಿಗೆ 10 ಸಾವಿರ ಪಿಂಚಣಿ ವ್ಯವಸ್ಥೆಯಾಗಬೇಕು. ಸೋಂಕಿನ ಅಪಾಯಕಾರಿ ಕೆಲಸದ ಭತ್ಯೆಯಾಗಿ ಪ್ರತಿ ತಿಂಗಳು 10 ಸಾವಿರ ಪ್ರೋತ್ಸಾಹ ಧನ ನೀಡಬೇಕು. ಜಂಟಿ ಸಮಿತಿಯ ಒಟ್ಟು 17 ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪ್ರಾಂತ ರೈತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಎನ್.ವೀರಣ್ಣ ಮಾತನಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು