ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಖರೀದಿ ಕೇಂದ್ರ ಬಂದ್‌ ಮಾಡಿ ಪ್ರತಿಭಟನೆ

ರಾಗಿ ಖರೀದಿಗೆ ಹೆಸರು ನೋಂದಣಿಗೆ 29ರವರೆಗೂ ಅವಕಾಶ
Last Updated 3 ಫೆಬ್ರುವರಿ 2020, 13:36 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ರಾಗಿ ಖರೀದಿಸಲು ದಿನಕ್ಕೊಂದು ರೀತಿಯ ಕಾನೂನುಗಳನ್ನು ಜಾರಿಗೆ ತರುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘದ ವತಿಯಿಂದ ನಗರದ ಎಪಿಎಂಸಿಯಲ್ಲಿನ ರಾಗಿ ಖರೀದಿ ಕೇಂದ್ರ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌ ರೈತರಿಗೆ ಮಾಹಿತಿ ನೀಡಿ, ಕೃಷಿ ಇಲಾಖೆ ವತಿಯಿಂದ ‘ಫ್ರೂಟ್‌’ವೆಬ್‌ಸೈಟ್‌ನಲ್ಲಿ ಸೂಕ್ತ ಮಾಹಿತಿ ದಾಖಲಾಗದೆ ಇರುವುದರಿಂದ ರಾಗಿ ಖರೀದಿಯಲ್ಲಿ ತೊಂದರೆಯಾಗಿತ್ತು. ಇದನ್ನು ಸರಿಪಡಿಸುವ ಸಲುವಾಗಿಯೇ ಹೆಚ್ಚುವರಿಯಾಗಿ ಮೂರು ಕಂಪ್ಯೂಟರ್‌ಗಳನ್ನು ರಾಗಿ ಖರೀದಿ ಕೇಂದ್ರದಲ್ಲಿ ಹೊಸದಾಗಿ ಸ್ಥಾಪಿಸಲಾಗಿದೆ ಎಂದರು.

ಮಂಗಳವಾರದಿಂದ ದೊಡ್ಡಬೆಳವಂಗಲ ಹಾಗೂ ತೂಬಗೆರೆ ನಾಡ ಕಚೇರಿಯಲ್ಲಿ ರಾಗಿ ಬೆಳೆಗಾರ ರೈತರಿಂದ ಸೂಕ್ತ ಮಾಹಿತಿ ಪಡೆದು ಫ್ರೂಟ್‌ ವೆಬ್‌ಸೈಟ್‌ನಲ್ಲಿ ದಾಖಲಿಸಲಾಗುವುದು. ತಾಲ್ಲೂಕಿನಲ್ಲಿ ಇದುವರೆಗೆ 3,042 ಜನ ರೈತರು ರಾಗಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 2,300 ಜನ ರೈತರ ದಾಖಲಾತಿ ಫ್ರೂಟ್‌ನಲ್ಲಿ ಸೂಕ್ತವಾಗಿ ದಾಖಲಾಗಿಲ್ಲ. ಇವುಗಳ ಪೈಕಿ 1,500 ತಕರಾರು ಅರ್ಜಿಗಳನ್ನು ಸರಿಪಡಿಸಲಾಗಿದೆ ಎಂದರು.

ಈ ಹಿಂದೆ ಸಣ್ಣ ಹಾಗೂ ದೊಡ್ಡ ಹಿಡುವಳಿದಾರ ರೈತರು ಎನ್ನುವ ವಿಂಗಡಣೆ ಮಾಡಲಾಗಿತ್ತು. ಸಣ್ಣ ಹಿಡುವಳಿದಾರರಿಂದ ಮಾತ್ರ ಎಕರೆಗೆ 15 ಕ್ವಿಂಟಲ್‌ ರಾಗಿ ಖರೀದಿಸಲಾಗುತಿತ್ತು. ಆದರೆ ಈಗ ಸಣ್ಣ, ದೊಡ್ಡ ಎಲ್ಲಾ ಹಿಡುವಳಿದಾರ ರೈತರಿಂದಲು ಎಕರೆಗೆ 10 ಕ್ವಿಂಟಲ್‌ ನಂತೆ ಗರಿಷ್ಠ 50 ಕ್ವಿಂಟಲ್‌ ರಾಗಿ ಖರೀದಿಸಲಾಗುತ್ತಿದೆ. ರಾಗಿ ಖರೀದಿಗೆ ರೈತರು ಹೆಸರು ನೋಂದಣಿ ಮಾಡಿಕೊಳ್ಳಲು ಫೆ.29ರವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದರು.

ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ಕೇಂದ್ರ ಸರ್ಕಾರ ರಾಗಿ ಖರೀದಿಗೆ ಮಿತಿ ಹೇರಿದೆ. ಹೀಗಾಗಿಯೇ ದಿನಕ್ಕೊಂದು ನಿಯಮವನ್ನು ಜಾರಿಗೆ ತರುವ ಮೂಲಕ ರೈತರಿಂದ ರಾಗಿ ಖರೀದಿಸುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಕೂಡಲೇ ರೈತರಿಂದ ರಾಗಿ ಖರೀದಿ ಆರಂಭಿಸಬೇಕು, ರೈತರು ಮಾರಾಟ ಮಾಡುವ ಎಲ್ಲ ರಾಗಿಯನ್ನು ಖರೀದಿ ಮಾಡಲೇ ಬೇಕು. ಮಧ್ಯವರ್ತಿಗಳ ಲಾಬಿಗೆ ಮಣಿದು ಯಾವುದೇ ರೈತರ ರಾಗಿ ಖರೀದಿಯನ್ನು ನಿರಾಕರಿಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸನ್ನ, ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಮುಖಂಡರಾದ ಕೆ.ಸುಲೋಚನಮ್ಮ ವೆಂಕಟರೆಡ್ಡಿ, ಮುತ್ತೇಗೌಡ, ಸತೀಶ್‌, ಶಿರವಾರ ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT