ಸೋಮವಾರ, ಜೂನ್ 21, 2021
30 °C

ರಾಗಿಗೆ ಬೆಂಬಲ ಬೆಲೆ: ನಿಯಮಾವಳಿ ಗೊಂದಲ, ಅಧಿಕಾರಿಗಳು ರೈತರ ನಡುವೆ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ವಿಚಾರ ಇದೀಗ ರೈತರು ಮತ್ತು ಅಧಿಕಾರಿಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.

ಪಹಣಿಯಲ್ಲಿ (RTC) ರಾಗಿ ಎಂದು ನಮೂದಾಗಿದ್ದರೆ ಮಾತ್ರ ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ‌. ಆದರೆ ಬಹುತೇಕ ರೈತರ ಪಹಣಿಯಲ್ಲಿ ರಾಗಿ ಬೆಳೆ ನಮೂದಾಗಿಯೇ ಇಲ್ಲ.

‘ನಮ್ಮ ಹೊಲದಲ್ಲಿ ರಾಗಿ ಬೆಳೆದಿದ್ದೇವೆ. ಆದರೆ ಪಹಣಿಯಲ್ಲಿ ನೋ ಕ್ರಾಪ್ ಎಂದು ಬರುತ್ತಿದೆ. ಪಹಣಿಯಲ್ಲಿ ಬೆಳೆ ನಮೂದು ಮಾಡುವ ಕೆಲಸ ಕಂದಾಯ ಇಲಾಖೆ ಅಧಿಕಾರಿಗಳದ್ದು. ರಾಗಿ ಖರೀದಿಸುವುದನ್ನು ತಪ್ಪಿಸಿಕೊಳ್ಳಲು ಸರ್ಕಾರಿ ಅಧಿಕಾರಿಗಳು ಕುಂಟು ನೆಪ ಹೇಳುತಿದ್ದಾರೆ’ ಎಂದು ರೈತರು ದೂರಿದರು.

ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ರಾಗಿ ಖರೀದಿ ಕೇಂದ್ರದ ಎದುರು ರೈತರು ಸರ್ಕಾರದ ರಾಗಿ ಖರೀದಿ ಪ್ರಕಟಣೆಯ ಬ್ಯಾನರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ರಾಗಿಗೆ ಮುಕ್ತ ಮಾರುಕಟ್ಟೆಯಲ್ಲಿ ಸಗಟು ಖರೀದಿ ಬೆಲೆ ₹ 2300 ರಿಂದ 2600 ಇದೆ. ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ₹ 3159 ನೀಡಿ ಖರೀದಿಸುತ್ತಿದೆ. ಈ ವರ್ಷ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಗಿ ಇಳುವರಿ ಸುಧಾರಿಸಿದೆ. ದೊಡ್ಡಳ್ಳಾಪುರ ತಾಲ್ಲೂಕಿನಲ್ಲಿ ಪ್ರತಿ ಎಕರೆಗೆ ಸರಾಸರಿ 18 ಕ್ವಿಂಟಲ್ ಇಳುವರಿ ಬಂದಿದೆ.

‘ಪಹಣಿ ಸಮಸ್ಯೆ ಇಡೀ ರಾಜ್ಯದಲ್ಲಿ ಕಂಡುಬಂದಿದೆ. ಖಾಸಗಿ ಏಜೆನ್ಸಿಗಳಿಗೆ ವಹಿಸಿ ಸರ್ಕಾರ ಮೊಬೈಲ್ ಆ್ಯಪ್‌ಗಳ ಮೂಲಕ ಬೆಳೆ ಸಮೀಕ್ಷೆ ಮಾಡಿಸಿತ್ತು. ಆದರೆ ಎಂಟ್ರಿ ಸರಿಯಾಗಿ ಆಗಲಿಲ್ಲ. ಮೊದಲು ಗ್ರಾಮ ಲೆಕ್ಕಿಗರು ನಾವು ರಾಗಿ ಬೆಳೆದಿದ್ದೇವೆ ಎಂದು ದೃಢೀಕರಣ ಮಾಡಿಕೊಡುತ್ತಿದ್ದರು. ಅದನ್ನು ಆಧರಿಸಿ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುತ್ತಿದ್ದರು. ಈ ವರ್ಷ ಬೆಳೆ ಚೆನ್ನಾಗಿ ಬಂದಿದೆ. ಬೆಂಬಲ ಬೆಲೆಯ ಗೊಂದಲದಿಂದ ರೈತರಿಗೆ ಉತ್ತಮ ಬೆಳೆಯ ಲಾಭ ಸಿಗುತ್ತಿಲ್ಲ’ ಎಂದು ರೈತರು ದೂರಿದರು.


ರಾಗಿ ಖರೀದಿ ಕೇಂದ್ರ ಬ್ಯಾನರ್ ಸುಟ್ಟು ರೈತರು ಆಕ್ರೋಶ ವ್ಯಕ್ತಪಡಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು