ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಿಂದ ಪಾರ್ಕಿಂಗ್ ಪ್ರದೇಶಕ್ಕೆ ತೆರಳಲು ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ‘ಎಲಿವೇಟೆಡ್ ವಾಕ್ ವೇ‘ನಲ್ಲಿ ಮಳೆ ನೀರು ಸಂಗ್ರಹವಾಗಿದೆ.
ಮಳೆ ನೀರಿನಿಂದ ಸೋರುತ್ತಿದೆ ಎಂದು ಆರೋಪಿಸಿರುವ ಪೋಟೊಗಳನ್ನು ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಯಾಣಿಕರೊಬ್ಬರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಮಳೆ ನೀರು ಸೋರಿಕೆಯಿಂದ ಪ್ರಯಾಣಿಕರು ಜಾರಿ ಬೀಳುವ ಸಂಭವವಿದೆ. ಇದೊಂದು ಅವೈಜ್ಞಾನಿಕ ಕಾಮಗಾರಿ ಎಂದು ಎಕ್ಸ್‌ನಲ್ಲಿ ಬರೆದು ಲೇವಡಿ ಮಾಡಿದ್ದಾರೆ.
ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಕೆಐಎ ವಕ್ತಾರರು, 'ಪಾದಚಾರಿ ಮಾರ್ಗದ ಮೇಲ್ಛಾವಣಿಯಿಂದ ನೀರು ಸೋರುತ್ತಿಲ್ಲ. ಆದರೆ, ಮಳೆ ರಭಸಕ್ಕೆ ಅಕ್ಕಪಕ್ಕದಿಂದ ನೀರು ಬಂದಿದೆ. ಸಂಗ್ರಹವಾದ ನೀರು ತ್ವರಿತವಾಗಿ ಹೊರಹಾಕಲು ಅಗತ್ಯ ಕ್ರಮಕೈಗೊಳ್ಳಲಾಗಿದೆ‘ ಎಂದು ತಿಳಿಸಿದ್ದಾರೆ.
ಟರ್ಮಿನಲ್-1ರಲ್ಲಿ ಬಂದಿಳಿಯುವ ಪ್ರಯಾಣಿಕರನ್ನು ಪಿ-4 ಪಾರ್ಕಿಂಗ್ ಕಡೆಗೆ ಸಾಗಲು ಹೊಸ 'ಎಲಿವೇಟೆಡ್ ವಾಕ್ ವೇ' ನಿರ್ಮಿಸಲಾಗಿದೆ. ಇದು ಆಗಸ್ಟ್ 25ರಂದು ಲೋಕಾರ್ಪಣೆಗೊಂಡಿತ್ತು.
ಪ್ರಧಾನಿ ಮೋದಿ ಅವರಿಂದ ನವೆಂಬರ್‌ನಲ್ಲಿ ಉದ್ಘಾಟನೆಗೊಂಡ ಟರ್ಮಿನಲ್-2 ಮೇಲ್ಛಾವಣಿಯಿಂದ ಮಳೆ ನೀರು ಸೋರುತ್ತಿದ್ದ ವಿಡಿಯೊ ಹಾಗೂ ಪೋಟೊಗಳು ಈ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಚರ್ಚೆಗೆ ಗ್ರಾಸವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.