ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಸ್ಐಗೆ ಅದ್ದೂರಿ ಸ್ವಾಗತ, ಸನ್ಮಾನ

ಕೊರೊನಾದಿಂದ ಗುಣಮುಖ: ಕರ್ತವ್ಯಕ್ಕೆ ಮತ್ತೆ ಹಾಜರು
Last Updated 7 ಜೂನ್ 2020, 9:59 IST
ಅಕ್ಷರ ಗಾತ್ರ

ಆನೇಕಲ್: ಕೊರೊನಾ ಸೋಂಕಿನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದ ಹೆಬ್ಬಗೋಡಿ ಪೊಲೀಸ್‌ ಠಾಣೆಯ ಎಎಸ್‌ಐ ಕೋದಂಡರಾಮರೆಡ್ಡಿ ಅವರಿಗೆ ಪೊಲೀಸ್‌ ಠಾಣೆಯಲ್ಲಿ ಅದ್ದೂರಿ ಸ್ವಾಗತ ಸಿಕ್ಕಿತು.

ಐಜಿಪಿ ಕೆ.ವಿ.ಶರತ್‌ಚಂದ್ರ ಮಾತನಾಡಿ, ‘ಪೊಲೀಸರು ಕೊರೊನಾ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ. ಈ ಹೋರಾಟದಲ್ಲಿ ಗುಣಮುಖರಾಗಿ ಬಂದ ಎಎಸ್‌ಐ ಕೋದಂಡರಾಮರೆಡ್ಡಿ ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಯಾವುದೇ ಆತಂಕವಿಲ್ಲದೇ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸಂದೇಶ ನೀಡಿದ್ದಾರೆ. ಕೊರೊನಾ ಪಾಸಿಟಿವ್‌ ಬರುತ್ತಿದ್ದಂತೆ ಆಸ್ಪತ್ರೆಗೆ ದಾಖಲಾದ ಕೋದಂಡರಾಮರೆಡ್ಡಿ ಅವರು ತಮ್ಮ ಕುಟುಂಬದವರನ್ನು ಕ್ವಾರಂಟೈನ್‌ ಒಳಪಡಿಸಿದರು. ಧೈರ್ಯದಿಂದ ಕೊರೊನಾವನ್ನು ಎದುರಿಸಿ ಎರಡು ತಪಾಸಣೆಗಳಲ್ಲೂ ನೆಗಟಿವ್‌ ಬಂದಿದ್ದು ಸಂಪೂರ್ಣ ಗುಣಮುಖರಾಗಿದ್ದಾರೆ. ಹಾಗಾಗಿ ಅವರನ್ನು ಪೊಲೀಸ್‌ ಇಲಾಖೆ ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದರು.

ಬೆಂಗಳೂರು ಗ್ರಾಮಾಂತರ ಪೊಲೀಸ್‌ ಎಸ್ಪಿ ರವಿ.ಡಿ.ಚನ್ನಣ್ಣನವರ್‌ ಮಾತನಾಡಿ, ‘ಕೋದಂಡರಾಮರೆಡ್ಡಿ ಅವರು ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿರುವುದು ಸಂತಸ ತಂದಿದೆ. ಕಳೆದ ತಿಂಗಳು 22ರಂದು ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು. ಈಗ ಸಂಪೂರ್ಣ ಗುಣಮುಖರಾಗಿದ್ದಾರೆ’ ಎಂದರು.

‘ಹೆಬ್ಬಗೋಡಿ ಪೊಲೀಸ್‌ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಈ ಆರೋಪಿಗಳಿಗೆ ಕೊರೊನಾ ಪಾಸಿಟಿವ್‌ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಯ 30 ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಎಲ್ಲರಿಗೂ ನೆಗಟಿವ್‌ ಬಂದಿದೆ’ ಎಂದರು.

ಗುಣಮುಖರಾಗಿ ಪೊಲೀಸ್‌ ಠಾಣೆಗೆ ಕರ್ತವ್ಯಕ್ಕೆ ಹಾಜರಾದ ಎಎಸ್‌ಐ ಕೋದಂಡರಾಮರೆಡ್ಡಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ ‘ಕೊರೊನಾ ಲಕ್ಷಣಗಳು ಇರಲಿಲ್ಲ. ಆದರೆ ತಪಾಸಣೆ ಸಂದರ್ಭದಲ್ಲಿ ಪಾಸಿಟಿವ್‌ ಬಂದಿತು. ಹಾಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ ಉತ್ತಮ ಚಿಕಿತ್ಸೆ ದೊರೆಯಿತು. ಈಗ ನೆಗಟಿವ್‌ ಬಂದಿರುವುದು ನಿರಾಳವಾಗಿದೆ. ಧೈರ್ಯದಿಂದ ಕೊರೊನಾವನ್ನು ಎದುರಿಸುವುದನ್ನು ಎಲ್ಲರೂ ರೂಢಿಸಿಕೊಳ್ಳಬೇಕಾಗಿದೆ’ ಎಂದರು.

ಅಡಿಷನಲ್‌ ಎಸ್ಪಿ ಸಜೀತ್‌, ಡಿವೈಎಸ್ಪಿ ಕೆ.ನಂಜುಂಡೇಗೌಡ, ಸರ್ಕಲ್ ಇನ್‌ಸ್ಪೆಕ್ಟರ್‌ ಕೆ.ವಿಶ್ವನಾಥ್, ಶೇಖರ್‌, ಕೃಷ್ಣ, ಸತೀಶ್‌, ನಾಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT