ಗುರುವಾರ , ಏಪ್ರಿಲ್ 15, 2021
21 °C
ಕಾರ್ಲ್‌ ಮಾರ್ಕ್ಸ್ ಧರ್ಮ ಉಪನ್ಯಾಸ ಕಾರ್ಯಕ್ರಮ

‘ಧರ್ಮ ಮನುಷ್ಯನ ಹೃದಯದಲ್ಲಿ ಇರುತ್ತದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಕಾರ್ಲ್‌  ಮಾರ್ಕ್ಸ್  ಧರ್ಮವನ್ನು ಪ್ರಭುತ್ವ ಮತ್ತು ಚಾರಿತ್ರಿಕ ಚಲನೆಯಲ್ಲಿ ಚರ್ಚಿಸಿದರು. ಧರ್ಮವನ್ನು ಬಳಸಿಕೊಳ್ಳುವ ಮೂಲಕ ಅಧಿಕಾರವನ್ನು ಕಾಪಾಡಿಕೊಳ್ಳುವ ಪ್ರಭುತ್ವವನ್ನು ಅವರು ಗುರುತಿಸಿದ್ದರು ಎಂದು ರೈತ ಚಳವಳಿಯ ಮುಖಂಡ ಆರ್. ಚಂದ್ರತೇಜಸ್ವಿ ಹೇಳಿದರು.

ಅವರು ನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ಕಾರ್ಲ್‌ ಮಾರ್ಕ್ಸ್ ಜನ್ಮದ್ವಿಶತಮಾನೋತ್ಸವ ಅಂಗವಾಗಿ ನಡೆಯುತ್ತಿರುವ ಸಾಪ್ತಾಹಿಕ ಉಪನ್ಯಾಸ ಮಾಲೆಯಲ್ಲಿ ಕಾರ್ಲ್‌ ಮಾರ್ಕ್ಸ್ ಧರ್ಮ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮತಧರ್ಮದ ಬಗ್ಗೆ ಅವರು ಪ್ರತ್ಯೇಕ ಗ್ರಂಥಗಳನ್ನು ಬರೆದಿಲ್ಲ. ಅವರು ಸೂಚಿಸುವುದು ಧರ್ಮದ ಹಿಂದಿನ ವರ್ಗ ನಿಯಂತ್ರಣವನ್ನು. ಭೌತ ಉತ್ಪಾದನೆಯನ್ನು ನಿಯಂತ್ರಿಸುವವರೆ, ಮಾನಸಿಕ ಉತ್ಪಾದನೆಯನ್ನು ನಿಯಂತ್ರಿಸುತ್ತಾರೆ ಎಂಬುದು ಮಾರ್ಕ್ಸ್‌ ಚಿಂತನೆಯ ನೆಲೆಯಾಗಿದೆ. ದೇವರು ಇಲ್ಲವೇ ಇಲ್ಲ ಎಂದು ಹೇಳುವ ಉದ್ದೇಶ ಅವರಲ್ಲಿ ಇಲ್ಲ ಎಂದರು.

ಜಗತ್ತಿನ ಎಲ್ಲೆಡೆ ಧರ್ಮವನ್ನು ವೈಚಾರಿಕ ಚರ್ಚೆಗೆ ಒಳಪಡಿಸುವ ಚಿಂತಕರನ್ನು ವಿರೋಧಿಸಲಾಗಿದೆ. ಇಂದು ಸಹ ಮತ ಧರ್ಮದ ಬಗ್ಗೆ ಮಾತನಾಡುವುದು ಸೂಕ್ಷ್ಮ ಮತ್ತು ಸವಾಲಿನ ವಿಷಯವಾಗಿದೆ. ಚಿಂತನ ಮಂಥನ ಮಾಡುವವರ ಮೇಲೆ ದಾಳಿ ಮಾಡುವ ಪ್ರವೃತ್ತಿ ಇಂದು ಕಾಣುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ನಮ್ಮ ದೇಶದಲ್ಲಿ ಇಂದು ಸಂವಿಧಾನವನ್ನು ಮೀರಿ ಧರ್ಮದ ವಿಚಾರಗಳು ಪ್ರಸ್ತಾಪ ಅಗುತ್ತಿವೆ ಎಂದರು.

ವಿಚಾರವಾದಿಗಳಾದ ಡಾ.ಎಂ.ಎಂ. ಕಲ್ಬುರ್ಗಿ, ದಾಬೋಲ್ಕರ್, ಪನ್ಸಾರೆ, ಗೌರಿ ಲಂಕೇಶ್ ಮುಂತಾದವರ ಹತ್ಯೆಗಳು, ಮತ್ತೊಂದೆಡೆ ತಾಲಿಬಾನ್‍ಗಳು ಮಿಲಿಟರಿ ಶಾಲಾ ಮಕ್ಕಳನ್ನು ಕೊಂದದ್ದು ಇವುಗಳನ್ನು ಗಮನಿಸಿದರೆ ಕೋಮುವಾದ ಮತ್ತು ಧರ್ಮಾಂಧತೆ ವಿಜೃಂಭಿಸುತ್ತಿದೆ ಎಂದರು.

ಆಳುವ ವರ್ಗದ ವಿಚಾರಗಳೇ ಆಯಾ ಸಮಾಜದ ಆಳುವ ವಿಚಾರಗಳಾಗಿರುತ್ತದೆ. ತತ್ವಜ್ಞಾನಕ್ಕೂ ಮತ್ತು ಮತಧರ್ಮಕ್ಕೂ ಸಂಘರ್ಷ ನಿರಂತರವಾಗಿದೆ. ಧರ್ಮಗಳು ದೊಡ್ಡ ಪ್ರಮಾಣದ ಹಿಂಸಾಚಾರಗಳಿಗೂ ದಾರಿ ಮಾಡಿಕೊಟ್ಟಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪಿ.ಗೋವಿಂದರಾಜು ಮಾತನಾಡಿ,  ಧರ್ಮವನ್ನು ಕುರಿತು ಹೇಳುವ ವಿಚಾರದಲ್ಲಿ ನಿರೀಶ್ವರವಾದಿ ಅಗಿದ್ದರು. ವಿಜ್ಞಾನ ಒದಗಿಸುವ ವಾಸ್ತವಾಂಶಗಳ ಕಡೆಗೆ ಅವರ ಹೆಚ್ಚಿನ ಗಮನವಿತ್ತು. ಬುದ್ದ ಮತ್ತು ಕಾರ್ಲ್‌  ಮಾರ್ಕ್ಸ್  ಚಿಂತನೆಗಳು ಆಳದಲ್ಲಿ ಒಂದಾಗಿ ಅಗಿವೆ ಎಂಬುದನ್ನು ಅಂಬೇಡ್ಕರ್ ಗುರುತಿಸಿದ್ದಾರೆ ಎಂದರು.

ಬುದ್ದ ಹೇಳುವಂತೆ ನಿಜವಾದ ಧರ್ಮ ಮನುಷ್ಯನ ಹೃದಯದಲ್ಲಿ ಇರುತ್ತದೆ ಹೊರತು, ಶಾಸ್ತ್ರಗಳಲ್ಲಿ ಅಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಸಂವಿಧಾನವನ್ನು ಗೌರವಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಕಾರ್ಮಿಕ ಸಂಘಟನೆಯ ಮುಖಂಡರಾದ ಪಿ.ಎ.ವೆಂಕಟೇಶ್, ಕಾರ್ಲ್‌ ಮಾರ್ಕ್ಸ್  ಜನ್ಮದ್ವಿಶತಮಾನೋತ್ಸವ ಚಿಂತನ ಮಂಥನ ಸಮಿತಿಯ ಸಂಚಾಲಕರುಗಳಾದ ಕೆ.ರಘುಕುಮಾರ್, ಎಂ.ಮಂಜುನಾಥ್, ಚೌಡಯ್ಯ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.