ಭಾನುವಾರ, ಜನವರಿ 26, 2020
31 °C
ಇಂದಿರಾನಗರ ರೋಟರಿ ಕ್ಲಬ್ ವತಿಯಿಂದ ಕಾಮಗಾರಿ

100 ಅಂಗನವಾಡಿ ಕೇಂದ್ರ ನವೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಇಂದಿರಾನಗರ ರೋಟರಿ ಕ್ಲಬ್ ವತಿಯಿಂದ 150 ಅಂಗನವಾಡಿಗಳ ಪೈಕಿ 100 ಅಂಗನವಾಡಿಗಳ ನವೀಕರಣ ಕಾರ್ಯ ಮುಗಿದಿದೆ. 2020ರ ಜುಲೈ ತಿಂಗಳ ಅಂತ್ಯದೊಳಗೆ ಇನ್ನುಳಿದ 50 ಅಂಗನವಾಡಿಗಳ ನವೀಕರಣವೂ ಮುಕ್ತಾಯವಾಗಲಿದೆ ಎಂದು ಕ್ಲಬ್‌ನ ಹಿಂದಿನ ಅಧ್ಯಕ್ಷ ಜಗದೀಶ್ ಹೇಳಿದರು.

ಸೂಲಿಬೆಲೆ ಹಾಗೂ ಬಾಲೇನಹಳ್ಳಿ ಗ್ರಾಮದಲ್ಲಿ ಒಟ್ಟು ₹4.5 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ಅಂಗನವಾಡಿ ಕೇಂದ್ರಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಮ್ಮ ಸಂಸ್ಥೆಯಿಂದ 150 ಅಂಗನವಾಡಿ ಕೇಂದ್ರಗಳ ನವೀಕರಣ ಗುರಿಯನ್ನು ಹೊಂದಿದ್ದೆವು. ಹೊಸಕೋಟೆ ತಾಲ್ಲೂಕಿನಲ್ಲಿ 55 ಕೇಂದ್ರಗಳನ್ನು ನವೀಕರಿಸಿ ಕೊಡಲಾಗಿದೆ. ಆನೇಕಲ್ ತಾಲ್ಲೂಕು ಹಾಗೂ ಬೆಂಗಳೂರು ನಗರ ಸೇರಿದಂತೆ ಒಟ್ಟು 100 ಅಂಗನವಾಡಿ ಕೇಂದ್ರಗಳ ನವೀಕರಣ ಮುಕ್ತಾಯವಾಗಿದೆ’ ಎಂದು ವಿವರಿಸಿದರು.

‘ಮುಂದಿನ 7 ತಿಂಗಳಿನಲ್ಲಿ 50 ಅಂಗನವಾಡಿಗಳ ನವೀಕರಣ ಮುಕ್ತಾಯವಾಗಲಿದೆ. ನಮ್ಮ ಜತೆ ಕೈಜೋಡಿಸಿ ಸಹಾಯಹಸ್ತ ಚಾಚಿದ ಕ್ಯಾನ್ ಫಿನ್ ಹೋಂ ಹಾಗೂ ಭೋತ್ರಾ ಫೌಂಡೇಷನ್ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು’ ಎಂದರು.

ಭೋತ್ರಾ ಫೌಂಡೇಷನ್ ನ ಹೇಮಂತ್ ಭೋತ್ರಾ ಮಾತನಾಡಿ, ‘ನಮ್ಮ ಸಂಸ್ಥೆ ವತಿಯಿಂದ 5 ಅಂಗನವಾಡಿ ಕೇಂದ್ರಗಳ ನವೀಕರಣಕ್ಕೆ ಸಹಾಯ ನೀಡಿದ್ದೇವೆ. ಎರಡು ಕೇಂದ್ರಗಳು ನವೀಕರಣಗೊಂಡಿವೆ’ ಎಂದು ತಿಳಿಸಿದರು.

‘ಶಿಕ್ಷಕಿಯರು ಹಾಗೂ ಸಹಾಯಕಿಯರು ಅಂಗನವಾಡಿ ಕೇಂದ್ರಗಳ ಗುಣಮಟ್ಟ ಕಾಯ್ದುಕೊಳ್ಳಬೇಕು. ಇಲ್ಲಿನ ಗುಣಮಟ್ಟ ನೋಡಿ ಖಾಸಗಿ ಶಾಲೆಗಳಿಗೆ ಹೋಗುವ ಮಕ್ಕಳು ಅಂಗನವಾಡಿ ಕೇಂದ್ರಗಳ ಕಡೆ ಬರುವಂತಾಗಬೇಕು. ಇದು ನಿಮ್ಮೆಲ್ಲರ ಜವಾಬ್ದಾರಿ’ ಎಂದರು.

ರೋಟರಿ ಸಂಸ್ಥೆ ಕಾರ್ಯದರ್ಶಿ ಫಝಲ್ ರೆಹಮಾನ್, ಲೀನಾ ಭೋತ್ರಾ, ಸದಸ್ಯರಾದ ಫಿಲಿಫ್ಸ್ ಜಾರ್ಜ್, ಸಿಡಿಒಇಒ ಸೋಮಸಸುಂದರ್, ಮೇಲ್ವಿಚಾರಕಿ ಭಾರತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಮುನಿಕದರಪ್ಪ ಇದ್ದರು.

ಪ್ರತಿಕ್ರಿಯಿಸಿ (+)