ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಮೂಲ ಜನಪದ ಸಂಸ್ಕೃತಿ ಉಳಿಸಿ

ಜನಪದ ಉತ್ಸವ-2020ಕ್ಕೆ ಚಾಲನೆ
Last Updated 9 ಅಕ್ಟೋಬರ್ 2020, 6:39 IST
ಅಕ್ಷರ ಗಾತ್ರ

ವಿಜಯಪುರ: ದೇಶದಲ್ಲಿ ಕರ್ನಾಟಕದ ರಾಜ್ಯದ ಜನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದ್ದು, ಅದನ್ನು ಮುಂದಿನ ಪೀಳಿಗೆಗಾಗಿ ಉಳಿಸಿಕೊಳ್ಳಬೇಕಾಗಿದೆ ಎಂದು ಜ್ಞಾನಗಂಗಾ ಪದವಿ ಕಾಲೇಜಿನ ಅಧ್ಯಕ್ಷ ಪ್ರಸನ್ನಕುಮಾರ್ ತಿಳಿಸಿದರು.

ಇಲ್ಲಿನ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಪರಿವರ್ತನಾ ಟ್ರಸ್ಟ್‌‌ ಪಾಪನಹಳ್ಳಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಜನಪದ ಉತ್ಸವ-2020 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಮ್ಮ ಭಾಷೆಯಲ್ಲಿ ನಾಟಕ, ಬಯಲಾಟ, ಯಕ್ಷಗಾನ ಮುಂತಾದ ವಿವಿಧ ಪ್ರಕಾರಗಳನ್ನು ಕಾಣಬಹುದು. ಕನ್ನಡ ಜನಪದ ಸಂಸ್ಕೃತಿಯ ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ. ಇವುಗಳನ್ನು ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ’ ಎಂದರು.

ಸಿಂಧೂರ ಜಾನಪದ ಕಲಾ ಸಂಸ್ಥೆಯ ಅಧ್ಯಕ್ಷ ವೆಂಕಟಗಿರಿಕೋಟೆ ಮುನಿರಾಜು ಮಾತನಾಡಿ, ‘ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ. ತನ್ನ ಮೂಲ ನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಭದ್ರವಾಗಿ ಉಳಿಸಿಕೊಂಡಿರುವುದು ಸಮಾಧಾನಕರ ಸಂಗತಿ. ಕಂಸಾಳೆಪದ, ಗೀಗಿಪದ, ಕೋಲಾಟದಪದ, ರಾಗಿ ಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಈ ಜನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯು ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ’ ಎಂದರು.

ಮುಖಂಡ ಕೆ.ಮುನಿರಾಜು ಮಾತನಾಡಿ, ‘ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು, ನಮ್ಮ ಹಳ್ಳಿಗಳಲ್ಲಿ ಸೃಜನಶೀಲತೆ ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು. ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜನಪದವಾಗಿರಬಹುದು ಎಂದು ಹಿರಿಯರು ಹೇಳುತ್ತಾರೆ. ಜನಪದ ಮತ್ತು ಜಾನಪದ ಎಂಬ ಶಬ್ದಗಳು ಒಂದು ಸಾಮಾಜಿಕ ವ್ಯವಸ್ಥೆಯನ್ನು ಸೂಚಿಸುತ್ತವೆ’ ಎಂದರು.

ವೀರಗಾಸೆ ಕುಣಿತ, ತಮಟೆ ವಾದನ ಕಾರ್ಯಕ್ರಮಗಳು ಗಮನ ಸೆಳೆದವು. ಎಂ.ವಿ.ನಾಯ್ಡು ತಂಡದಿಂದ ಜನಪದ ಗೀತೆಗಳ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜ್ಞಾನಗಂಗಾ ಪದವಿ ಕಾಲೇಜಿನ ಪ್ರಾಂಶುಪಾಲ ನಾರಾಯಣಸ್ವಾಮಿ, ಪರಿವರ್ತನಾ ಟ್ರಸ್ಟ್‌ ಪಾಪನಹಳ್ಳಿಯ ಸಂಸ್ಥಾಪಕ ಮೂರ್ತಿ, ಕಲಾವಿದ ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT