ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಹೊಟ್ಟೆಪಾಡಿಗೆ ಆಸರೆಯಾದ ಬೊಂಬಾಯಿ ಮಿಠಾಯಿ ಮಾರಾಟ

Last Updated 5 ಅಕ್ಟೋಬರ್ 2020, 2:44 IST
ಅಕ್ಷರ ಗಾತ್ರ

ವಿಜಯಪುರ: ಹೆಗಲ ಮೇಲೊಂದು ಉದ್ದನೆಯ ಕೋಲು, ಕೋಲಿಗೆ ಕಟ್ಟಿಕೊಂಡಿರುವ ಬೊಂಬಾಯಿ ಮಿಠಾಯಿ ಇರುವ ಹಗುರವಾದ ಪೊಟ್ಟಣಗಳನ್ನು ಹೊತ್ತುಕೊಂಡು ಸಾಗುತ್ತಾ ದಿನನಿತ್ಯ ತುತ್ತಿನ ಚೀಲ ತುಂಬಿಸಲು ಉತ್ತರ ಪ್ರದೇಶದಿಂದ ವಲಸೆ ಬಂದಿರುವ ಕಾರ್ಮಿಕ ರಾಜ್ ಪಾಲ್ ಅವರು ಕೊರೊನಾ ಸಂಕಷ್ಟದ ನಡುವೆ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಾ ದಿನದೂಡುತ್ತಿದ್ದಾರೆ.

ಉತ್ತರ ಪ್ರದೇಶದಿಂದ ಉದ್ಯೋಗವನ್ನು ಹುಡುಕಿಕೊಂಡು 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಇವರು ಕಟ್ಟಡ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದರು. ಲಾಕ್‌ಡೌನ್‌ ಘೋಷಣೆಯಾದ ನಂತರ ಬೆಂಗಳೂರಿನಲ್ಲಿ ಉದ್ಯೋಗವಿಲ್ಲದೆ ಅಲೆದಾಡಿ, ಬೆಂಗಳೂರಿನಿಂದ ಕಾಲ್ನಡಿಗೆಯಲ್ಲೆ ರಾತ್ರಿಯ ವೇಳೆ ಹಳ್ಳಿಗಳತ್ತ ವಲಸೆ ಬಂದ ಇವರು ಹೊಟ್ಟೆಪಾಡಿಗಾಗಿ ತಮಗೆ ಗೊತ್ತಿರುವ ಬೊಂಬಾಯಿ ಮಿಠಾಯಿ ವ್ಯಾಪಾರವನ್ನು ಆರಿಸಿಕೊಂಡು ಜೀವನ ಮಾಡಲು ಮುಂದಾಗಿದ್ದಾರೆ.

ತಮ್ಮ ಜೀವನದ ಕುರಿತು ಮಾತನಾಡಿದ ಅವರು, ‘ಲಾಕ್‌ಡೌನ್‌ ನಂತರ ಆರಂಭದಲ್ಲಿ ಯಾವ ಹಳ್ಳಿಗೆ ಹೋದರೂ ಜನರು ಅನುಮಾನದಿಂದ ನೋಡುತ್ತಿದ್ದರು. ಕುಡಿಯಲು ನೀರೂ ಕೊಡುತ್ತಿರಲಿಲ್ಲ. ಊರುಗಳ ಒಳಗೆ ಹೋಗಲಿಕ್ಕೂ ಅವಕಾಶ ಮಾಡಿಕೊಡುತ್ತಿರಲಿಲ್ಲ. ಬೇರೆ ದಾರಿಯಿಲ್ಲದೆ ನನಗೆ ಗೊತ್ತಿರುವ ಬೊಂಬಾಯಿ ಮಿಠಾಯಿ ವ್ಯಾಪಾರ ಮಾಡಿಕೊಳ್ಳೋಣ ಎಂದು ಚಿಂತನೆ ನಡೆಸಿದೆ. ಈ ಪೊಟ್ಟಣಗಳನ್ನು ಹೆಗಲಿಗೇರಿಸಿಕೊಂಡು ಸುತ್ತಾಡಿ ರಾತ್ರಿಯ ವೇಳೆ ಖಾಲಿ ಹೊಟ್ಟೆಯಲ್ಲೆ ಮಲಗುತ್ತಿದ್ದೆವು’ ಎಂದರು.

‘ಈಗ ಕೊರೊನಾ ಇರುವ ಕಾರಣ ಶಾಲೆಗಳಿಗೆ ರಜೆ ಇದೆ. ಆದ್ದರಿಂದ ಮಕ್ಕಳನ್ನು ನಮ್ಮ ಜತೆಗೇ ಕರೆದುಕೊಂಡು ಹೋಗುತ್ತೇವೆ. ಬೆಂಗಳೂರಿಗೆ ಹೋಗಿ ಪುನಃ ಕಟ್ಟಡ ನಿರ್ಮಾಣದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಯಾರೂ ಕೆಲಸ ಕೊಡುತ್ತಿಲ್ಲ. ಬೇರೆ ಕಸುಬು ಗೊತ್ತಿಲ್ಲದ ಕಾರಣ ಬೊಂಬಾಯಿ ಮಿಠಾಯಿಯನ್ನು ಮಾರಾಟ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ’ ಎಂದರು.

₹600 ಬಂಡವಾಳ ಹಾಕಿ ಬೊಂಬಾಯಿ ಮಿಠಾಯಿ ತಯಾರು ಮಾಡಿಕೊಳ್ಳುತ್ತೇನೆ. ಅದನ್ನು ಪ್ಯಾಕೆಟ್‌ ಮಾಡಿ ಪ್ರತಿ ಪ್ಯಾಕೆಟ್‌ಗೆ ₹10ರಂತೆ ಮಾರಾಟ ಮಾಡುತ್ತೇನೆ. ದಿನಕ್ಕೆ ₹200 ರೂಪಾಯಿ ಸಿಗುತ್ತದೆ. ಅದರಲ್ಲೆ ನಾವು ಜೀವನ ಮಾಡುತ್ತಿದ್ದೇವೆ’ ಎಂದರು.

‘ಮೊದಲೆಲ್ಲಾ ಎಲ್ಲೆಲ್ಲಿ ಜಾತ್ರೆ ನಡೆಯುತ್ತದೋ ಅಲ್ಲೆಲ್ಲ ಹೋಗುತ್ತಿದ್ದೆ. ಮಿಠಾಯಿಯನ್ನು ಮಾರಾಟ ಮಾಡುತ್ತಿದ್ದೆ. ಕೊರೊನಾ ಬಂದ ಮೇಲೆ ಜಾತ್ರೆಗಳು, ಹಬ್ಬಗಳು, ರಥೋತ್ಸವಗಳು ನಡೆಯುತ್ತಿಲ್ಲದ ಕಾರಣ ಹಳ್ಳಿಗಳನ್ನು ಸುತ್ತಬೇಕಾಗಿದೆ’ ಎಂದರು.

ಬೊಂಬಾಯಿ ಮಿಠಾಯಿ: ಈ ತಿಂಡಿ, ಅಂಗಡಿಗಳಲ್ಲಿ ಸಿಗುವುದಿಲ್ಲ. ಸಂತೆಯಲ್ಲಿಟ್ಟು ಅದನ್ನು ಮಾರುವುದಿಲ್ಲ. ಪಾಲಿಥಿನ್ ಚೀಲದೊಳಗೆ ಮುದುಡಿ ಇರಿಸಿದ ಹಗುರವಾದ ಹತ್ತಿಯಂತಹ ಗುಲಾಬಿ ಹಾಗೂ ಕೇಸರಿ ಬಣ್ಣದ ಈ ಸಿಹಿ ತಿಂಡಿ ಬಾಯೊಳಗಿಟ್ಟರೆ ಮರು ಕ್ಷಣವೇ ಕರಗಿ ನೀರಾಗುತ್ತದೆ. ಮಿಠಾಯಿಗೆ ಮಕ್ಕಳಷ್ಟೇ ಅಲ್ಲದೆ ಹೆಂಗಸರು, ಯುವಕರು, ವೃದ್ಧರೂ ಮುಗಿಬಿಳುತ್ತಾರೆ. ಆದರೆ ಇದು ಮಕ್ಕಳಿಗೆ ಅಚ್ಚುಮೆಚ್ಚಿನ ಸಿಹಿ ತಿಂಡಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT