ಆ ಹುಡುಗ ಪಿ.ಯು.ಸಿ.ಯಲ್ಲಿ ಫೇಲ್ ಆಗಿ ಮನೆಯಲ್ಲಿ ಕೂತಿದ್ದ. ಒಂದು ವರ್ಷ ಖಾಲಿ ಕೂರಬೇಕಾದ ಪರಿಸ್ಥಿತಿಯಲ್ಲಿ ಅವನ ಮನಸ್ಸನ್ನು ಸೆಳೆದಿದ್ದು ಮೇಷ್ಟ್ರ ಕೈಯಲ್ಲಿದ್ದ ಕ್ಯಾಮೆರಾ. ‘ಫೇಲ್’ ಆದಾಗಿನ ಮಾನಸಿಕ ನಿರ್ವಾತವನ್ನು ಕ್ಯಾಮೆರಾ ತುಂಬಿಕೊಂಡಿತು. ತನ್ನನ್ನು ಬಿಟ್ಟು ಮುಂದಕ್ಕೆ ಓಡುತ್ತಿರುವಂತೆ ಭಾಸವಾಗುತ್ತಿದ್ದ ಜಗತ್ತು ಮಸೂರದೊಳಗಿಂದ ಭಿನ್ನವಾಗಿ ಕಾಣಿಸಿತ್ತು. ಪ್ರತಿದಿನ ಸಂಜೆ ಮೇಷ್ಟ್ರ ಮನೆಗೆ ಹೋಗಿ ಕ್ಯಾಮೆರಾ ಕುರಿತ ಪಾಠ ಮಾಡಿಸಿಕೊಳ್ಳತೊಡಗಿದ.

ಪುತ್ತೂರಿನ ವಿಷ್ಣುಪ್ರಸಾದ್ ಛಾಯಾಗ್ರಹಣದ ಬೆನ್ನು ಬಿದ್ದಿದ್ದು ಹೀಗೆ. ರಾಷ್ಟ್ರಪ್ರಶಸ್ತಿ ಪಡೆದಿರುವ, ಜಗತ್ತಿನ ಹಲವಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುತ್ತಿರುವ ಅಭಯ ಸಿಂಹ ನಿರ್ದೇಶನದ ‘ಪಡ್ಡಾಯಿ’ ಸಿನಿಮಾ ನೋಡಿದವರಿಗೆ ವಿಷ್ಣುಪ್ರಸಾದ್ ಪ್ರತಿಭೆಯ ಪರಿಚಯ ಆಗಿರುತ್ತದೆ.

ವಿಷ್ಣು, ಕಾಲೇಜು ಶಿಕ್ಷಣ ಪೂರೈಸಿದ್ದೂ ಪುತ್ತೂರಿನಲ್ಲಿಯೇ. ಬಿ.ಎ. ಮುಗಿಸುವಷ್ಟರಲ್ಲಿ ಅವರ ಮನಸ್ಸು ಕ್ಯಾಮೆರಾ ಮೇಲೆ ಪೂರ್ತಿಯಾಗಿ ನೆಟ್ಟಿತ್ತು. ಪುಣೆಯ ‘ಫ್ರೇಮ್‌ವರ್ಕ್ ಅಕಾಡೆಮಿ’ಯಲ್ಲಿ ಛಾಯಾಗ್ರಹಣ ಕುರಿತಾದ ಒಂದು ವರ್ಷದ ಕೋರ್ಸ್‌ಗೆ ಸೇರಿಕೊಂಡರು. ಛಾಯಾಗ್ರಹಣದ ಆರಂಭಿಕ ಪಾಠಗಳನ್ನು ಕಲಿತಿದ್ದು ಅಲ್ಲಿಯೇ. ಒಂದು ವರ್ಷದ ಕೋರ್ಸ್ ಮುಗಿದ ಮೇಲೆ ಅಲ್ಲಿ ಪಾಠ ಮಾಡುತ್ತಿದ್ದ ಮೇಷ್ಟ್ರು, ಬೆಂಗಳೂರಿಗೆ ಹೋಗಿ ಜಿ.ಎಸ್. ಭಾಸ್ಕರ್ ಅವರನ್ನು ಭೇಟಿಯಾಗುವಂತೆ ಸೂಚಿಸಿದರು.

‘ಜಿ.ಎಸ್. ಭಾಸ್ಕರ್ ಅವರನ್ನು ಭೇಟಿ ಮಾಡಿದೆ. ಅವರು ನನ್ನನ್ನು ಎಚ್.ಎಂ. ರಾಮಚಂದ್ರ ಅವರ ಬಳಿ ಕಳಿಸಿದರು. ಅವರೂ ಆಗ ಯಾವ ಸಿನಿಮಾವನ್ನೂ ಮಾಡುತ್ತಿರಲಿಲ್ಲ. ಆದರೆ, ಅದೇ ಸಮಯಕ್ಕೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಗುಲಾಬಿ ಟಾಕೀಸು’ ಸಿನಿಮಾ ಶುರುವಾಗಿತ್ತು. ಅದರ ಸಿನಿಮಾಟೋಗ್ರಾಫರ್ ಎಸ್. ರಾಮಚಂದ್ರ. ಎಚ್.ಎಂ. ರಾಮಚಂದ್ರ ಅವರು ನನ್ನನ್ನು ಎಸ್. ರಾಮಚಂದ್ರ ಬಳಿಗೆ ಕಳಿಸಿಕೊಟ್ಟರು. ಅವರು ನನ್ನನ್ನು ಕೆಲಸಕ್ಕೆ ಸೇರಿಸಿಕೊಂಡರು’ ಎಂದು ಹಲವು ಕಡೆ ಸುತ್ತಿ ಸುಳಿದ ನಂತರ ತಮ್ಮ ವೃತ್ತಿ ಜೀವನಕ್ಕೊಂದು ಆರಂಭ ಸಿಕ್ಕಿದ್ದನ್ನು ನೆನಪಿಸಿಕೊಳ್ಳುತ್ತಾರೆ ವಿಷ್ಣು.

ಎಸ್. ರಾಮಚಂದ್ರ ಅವರ ಬಳಿ ಸುಮಾರು ಮೂರೂವರೆ ವರ್ಷ ಕಾಲ 13 ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ ವಿಷ್ಣು. ಈ ಅವಧಿಯಲ್ಲಿನ ತಮ್ಮ ಅನುಭವವನ್ನು ಅವರು, ‘ಹೊಳೆಯಲ್ಲಿ ಕೊಚ್ಕೊಂಡು ಹೋದ ಹಾಗಾಯ್ತು’ ಎಂದು ತುಸು ಭಾವುಕರಾಗಿಯೇ ನೆನಪಿಸಿಕೊಳ್ಳುತ್ತಾರೆ. ಕೆಲಸಕ್ಕೆ ಸೇರಿಕೊಳ್ಳುವಾಗ ನನಗೆ ಅವರ ಬಗ್ಗೆ ಏನೇನೂ ಗೊತ್ತಿರಲಿಲ್ಲ.

ಮೂರೂವರೆ ವರ್ಷ ಕೆಲಸ ಮಾಡುವಾಗಲೂ ನನಗೆ ಅದರ ಮಹತ್ವ ಗೊತ್ತಿರಲಿಲ್ಲ. ಕೆಲಸ ಮಾಡ್ತಿದ್ದೆ ಅಷ್ಟೆ. ಆದರೆ, ಅವರು ತೀರಿಹೋದ ಮೇಲೆ ಅವರಾಡಿದ ಒಂದೊಂದು ಮಾತು, ಕಲಿತ ಒಂದೊಂದು ಪಾಠಗಳೂ ಮತ್ತೆ ಮತ್ತೆ ನೆನಪಾಗುತ್ತಿವೆ. ಅವರೆಂಥ ಅದ್ಭುತ ಪ್ರತಿಭೆ ಆಗಿದ್ದರು ಎಂದು ಅರಿವಾಗುತ್ತಿದೆ. ಅವರು ಇಟ್ಟಂಥ ಒಂದೊಂದು ಫ್ರೇಮ್ ಕೂಡ ಅಷ್ಟು ಕರಾರುವಾಕ್ ಆಗಿರುತ್ತಿತ್ತು. ಅಂಥ ಒಂದು ಫ್ರೇಮ್ ಇಡುವುದು ನನಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ’ ಎಂದು ಜತೆಗೆ ಕೆಲಸ ಮಾಡುತ್ತಲೇ ಎಲ್ಲವನ್ನೂ ಕಲಿಸಿಕೊಟ್ಟ ಗುರುವನ್ನು ಕೃತಜ್ಞತೆಯಿಂದ ನೆನೆಯುತ್ತಾರೆ.

ವಿಷ್ಣುಪ್ರಸಾದ್

ಎಸ್. ರಾಮಚಂದ್ರ ಅವರು ತೀರಿಹೋದ ಮೇಲೆ ವಿಷ್ಣು ಸ್ವತಂತ್ರ ಸಿನಿಮಾಟೊಗ್ರಾಫರ್ ಆಗಿ ಕಾರ್ಪೊರೇಟ್ ಡಾಕ್ಯುಮೆಂಟರಿಗಳಿಗೆ ಕೆಲಸ ಮಾಡತೊಡಗಿದರು. ಆ ಸಮಯದಲ್ಲಿಯೇ ನಿರ್ದೇಶಕ ಅಭಯ ಸಿಂಹ ಪರಿಚಯವಾಗಿದ್ದು. ಅಭಯ ಅವರ ಮನಸ್ಸಿನಲ್ಲಿ ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ನಾಟಕ ಕರಾವಳಿಯ ‘ಪಡ್ಡಾಯಿ’ಯಾಗಿ ಮರುರೂಪಗೊಳ್ಳುತ್ತಿದ್ದ ಕಾಲವದು. ವಿಷ್ಣುವಿನಲ್ಲಿನ ಶ್ರದ್ಧೆ ಮತ್ತು ಪ್ರತಿಭೆಯನ್ನು ನೋಡಿದ ಅವರು ತಮ್ಮ ಸಿನಿಮಾಗೆ ಇವರೇ ಸಿನಿಮಾಟೋಗ್ರಾಫರ್ ಎಂದು ನಿರ್ಧರಿಸಿದರು.

‘ಪಡ್ಡಾಯಿ’ ವಿಷ್ಣು ಸ್ವತಂತ್ರ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ ಮೊದಲ ಸಿನಿಮಾ. ‘ಪಡ್ಡಾಯಿ ಕಥೆ ಹೇಳುವಾಗಲೇ ಅಭಯ ಅವರು ನನಗೆ ಇದು ತುಂಬ ರಿಯಲಿಸ್ಟಿಕ್ ಆಗಿ ಇರುವ ಸಿನಿಮಾ. ಸಮುದ್ರ ದಡದಲ್ಲಿಯೇ ನಡೆಯುವ ಸಿನಿಮಾ ಆದರೂ, ಅಲ್ಲಿನ ಬದುಕು, ಅವರ ಚಟುವಟಿಕೆಗಳನ್ನೇ ಹೆಚ್ಚಾಗಿ ತೋರಿಸಬೇಕು ಎಂದು ಹೇಳಿದ್ದರು. ಸ್ಕ್ರಿಪ್ಟ್ ಕೂಡ ಅದೇ ರೀತಿ ಇತ್ತು. ಚಿತ್ರದಲ್ಲಿಯೂ ನಿರ್ದೇಶಕರು ಅಂದುಕೊಂಡಿದ್ದನ್ನೇ ಸಾಧಿಸಲು ಸಾಕಷ್ಟು ಪ್ರಯತ್ನಿಸಿದ್ದೇನೆ’ ಎಂದು ಅವರು ‘ಪಡ್ಡಾಯಿ’ ಸಿನಿಮಾದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ.

‘ಸಿನಿಮಾಟೋಗ್ರಫಿ ಎಂದರೆ ಬ್ಯೂಟಿಫೈ (ಚೆಂದಗೊಳಿಸುವುದು) ಮಾಡುವುದು ಎಂಬ ಭಾವನೆ ಜನಪ್ರಿಯವಾಗಿದೆ. ಹಾಗೆ ಮಾಡಬಾರದು ಅಂತಲ್ಲ. ನನಗೂ ಹಾಗೆ ಮಾಡುವುದು ಗೊತ್ತು. ಆದರೆ, ಸನ್ನಿವೇಶ ಬೇಡದೆಯೇ ಎಲ್ಲವನ್ನೂ ಮೋಹಕವಾಗಿ ತೋರಿಸುವ ವ್ಯಾಮೋಹಕ್ಕೆ ಬಿದ್ದರೆ ಅದು ಕೃತಕವಾಗಿಬಿಡುತ್ತದೆ’ ಎನ್ನುವುದು ವಿಷ್ಣು ಅವರ ಖಚಿತ ಅಭಿಪ್ರಾಯ.
ತಾನು ಎಂಥ ಸಿನಿಮಾ ಮಾಡಬೇಕು ಎನ್ನುವ ಬಗ್ಗೆ ಅವರಿಗೆ ಸ್ಪಷ್ಟವಾದ ತಿಳಿವಳಿಕೆ ಇದೆ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ‘ಇಂಥ ಸಿನಿಮಾಗಳನ್ನು ಮಾತ್ರ ಮಾಡುತ್ತೇನೆ’ ಎಂದು ಕುಳಿತುಕೊಂಡರೆ ಜೀವನ ನಿರ್ವಹಣೆ ಕಷ್ಟ ಎಂಬ ಅರಿವೂ ಅವರಿಗಿದೆ. ಆದ್ದರಿಂದಲೇ ‘ಸದ್ಯಕ್ಕೆ ಯಾವ ರೀತಿಯ ಸಿನಿಮಾ ಆದರೂ ಮಾಡುತ್ತೇನೆ. ನನಗೆ ಕೆಲಸ ಮಾಡಬೇಕು. ಜತೆಗೆ ಹಣವೂ ಅಷ್ಟೇ ಮುಖ್ಯ. ಆದರೆ, ಒಂದು ಹಂತ ತಲುಪಿದ ನಂತರ ನನಗೆ ಇಷ್ಟವಾದ, ನಾನು ಅಂದುಕೊಂಡ ರೀತಿಯ ಸಿನಿಮಾಗಳನ್ನು ಮಾತ್ರ ಮಾಡುತ್ತೇನೆ’ ಎಂದು ಅವರು ಖಚಿತವಾಗಿ ಹೇಳುತ್ತಾರೆ.

ಈ ಖಚಿತ ನಿಲುವು ಮತ್ತು ಪರಿಶ್ರಮವೇ ಅವರ ವೃತ್ತಿ ಬದುಕಿನಲ್ಲಿ ತಲುಪಬಹುದಾದ ಗುರಿಯನ್ನೂ, ಏರುವ ಎತ್ತರವನ್ನೂ ಹೇಳುವಂತೆ ತೋರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.