ವಿಜಯಪುರ(ದೇವನಹಳ್ಳಿ): ರೇಷ್ಮೆ ಬೆಲೆ ನಿರಂತರವಾಗಿ ಕುಸಿಯುತ್ತಿದ್ದು, ರೇಷ್ಮೆಗೂಡಿಗೆ ಸರ್ಕಾರ ರಕ್ಷಣಾತ್ಮಕ ಬೆಲೆ ನೀಡಬೇಕು. ಕಚ್ಚಾ ರೇಷ್ಮೆ ಖರೀದಿಸಬೇಕೆಂದು ಸ್ಥಳೀಯ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ 1.5 ಲಕ್ಷ ಕುಟುಂಬಗಳಿಗೂ ಹೆಚ್ಚು ರೇಷ್ಮೆ ಬೆಳೆಗಾರರು ಹಾಗೂ ಹತ್ತು ಸಾವಿರ ಕುಟುಂಬಗಳಿಗೂ ಹೆಚ್ಚು ನೂಲು ಬಿಚ್ಚಾಣಿಕೆದಾರರು ರೇಷ್ಮೆ ಉದ್ದಿಮೆ ನಂಬಿಕೊಂಡಿದ್ದಾರೆ.
ಮೂರು ತಿಂಗಳಿಂದ ರೇಷ್ಮೆಗೂಡಿನ ಬೆಲೆ ತೀವ್ರ ಕುಸಿದಿದ್ದು, ₹600–750ಗೆ ಮಾರಾಟ ಆಗುತ್ತಿದ್ದ ಮಿಶ್ರತಳಿ ಗೂಡು ಕೇವಲ ₹300-350ಗೆ ಮಾರಾಟ ಆಗುತ್ತಿದೆ. ₹700–850ಗೆ ಮಾರಾಟ ಆಗುತ್ತಿದ್ದ ದ್ವಿತಳಿ ಹೈಬ್ರಿಡ್ ಗೂಡು ₹350- 400 ಮಾರಾಟ ಆಗುತ್ತಿದ್ದು, ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಕೆಲ ದಿನಗಳಿಂದ ಗೂಡಿನ ಬೆಲೆ ಚೇತರಿಕೆ ಕಂಡಿದ್ದರೂ ಸಹ ಉತ್ಪಾದನಾ ವೆಚ್ಚವೂ ಸಿಗದೆ ನಷ್ಟದಲ್ಲಿಯೇ ಗೂಡು ಮಾರಾಟ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಗೂಡು ಖರೀದಿಸಿದ ನೂಲು ಬಿಚ್ಚಾಣಿಕೆದಾರರು (ರೀಲರ್ಸ್) ಬಿಚ್ಚಿದ ಕಚ್ಚಾರೇಷ್ಮೆಗೆ ಸೂಕ್ತ ಮಾರುಕಟ್ಟೆ, ಬೆಲೆ, ಬೇಡಿಕೆ ಇಲ್ಲದೆ ನಷ್ಟಕ್ಕೊಳಗಾಗಿ ನಮ್ಮ ಗೂಡಿಗೆ ಲಾಭದಾಯಕ, ಸ್ಪರ್ದಾತ್ಮಕ ಬೆಲೆ ಸಿಗುತ್ತಿಲ್ಲ. ಈ ಕಸುಬಿಗೆ ವಿದಾಯ ಹೇಳಲು ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪತ್ರ ಬರೆದಿರುವ ರೈತ ಮುಖಂಡರಾದ ನಾರಾಯಣಸ್ವಾಮಿ, ವೆಂಕಟೇಶ್, ಪ್ರತೀಶ್, ಹರೀಶ್ ತಿಳಿಸಿದ್ದಾರೆ.
ರಾಜ್ಯದ ಹಿಪ್ಪುನೇರಳೆ ತೋಟಗಳಲ್ಲಿ ಬೆಳೆದ ಸೊಪ್ಪಿಗೆ ನುಸಿ ರೋಗದ ಬಾಧೆ ಹೆಚ್ಚಾಗಿದ್ದು, ಶೇ 50-60 ರಷ್ಟು ಬೆಳೆ ನಷ್ಟವಾಗಿದೆ. ರೋಗಪೀಡಿತ ಸೊಪ್ಪು ಹುಳ ಸಾಕಾಣಿಕೆಗೆ ಯೋಗ್ಯ ಇಲ್ಲ ಹಾಗೂ ಹುಳುಗಳು ಸರಿಯಾಗಿ ಗೂಡು ಕಟ್ಟದೆ ರೇಷ್ಮೆಗೂಡು ಉತ್ಪಾದನೆ ಕುಂಠಿತವಾಗಿದೆ ಎಂದು ವಿವರಿಸಿದ್ದಾರೆ.
ಬೇಡಿಕೆ ರೇಷ್ಮೆಗೂಡಿನ ಬೆಲೆ ಕೆ.ಜಿ.ಗೆ ₹500ಕ್ಕಿಂತ ಕಡಿಮೆ ಆದಾಗ ಮಿಶ್ರತಳಿಗೂಡಿಗೆ ಕನಿಷ್ಠ ₹100 ದ್ವಿತಳಿ ಗೂಡಿಗೆ ₹150 ಪರಿಹಾರ ನೀಡಬೇಕು. ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಗೆ ಸರ್ಕಾರ ಕನಿಷ್ಠ ₹250 ಕೋಟಿ ಬಿಡುಗಡೆಗೊಳಿಸಿ ನೂಲು ಬಿಚ್ಚಾಣಿಕೆದಾರರಿಗೆ ಸಾಲ ನೀಡಬೇಕು. ರೇಷ್ಮೆ ತೋಟಗಳಲ್ಲಿನ ‘ನುಸಿ ರೋಗ’ ತಡೆಯಲು ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕು. ರೇಷ್ಮೆ ವಿಷಯದಲ್ಲಿ ಬಿಎಸ್ಸಿ ಎಂಸ್ಸಿ ಮತ್ತು ಪಿಎಚ್.ಡಿ ಪೂರೈಸಿದ ನಿರುದ್ಯೋಗಿ ಯುವಕ ಯುವತಿಯರನ್ನು ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕು. ಸರ್ಕಾರದ ರೇಷ್ಮೆ ಉದ್ದಿಮೆ (ಕೆಎಸ್‌ಐಸಿ)ಯ ಗೂಡು ಖರೀದಿಸುವ ಸಾಮರ್ಥ್ಯ ಮತ್ತು ಮೌಲ್ಯ ವರ್ಧನೆ ಸಾಮರ್ಥ್ಯ ದ್ವಿಗುಣಗೊಳಿಸಬೇಕು. ಡಾ.ಸ್ವಾಮಿನಾಥನ್ ಅವರ ವರದಿ ಪ್ರಕಾರ ಸರ್ಕಾರ ರೇಷ್ಮೆಗೂಡಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.