ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮದಲ್ಲದ ತಪ್ಪಿಗೆ ಕೊಕ್ಕರೆಗಳು ನೇಣು ಹಾಕಿಕೊಳ್ಳುತ್ತಿವೆ!

ಕೊಕ್ಕರೆಗೆ ಉರುಳಾದ ನೈಲಾನ್‌ ದಾರ, ಮರಿ ಕೊಕ್ಕರೆಗಳ ನರಳಾಟ
Last Updated 17 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಆಹಾರ ಹುಡುಕಿಕೊಂಡು ನಾಗರಕೆರೆ ಅಂಗಳಕ್ಕೆ ಬರುವ ಕೊಕ್ಕರೆಗಳು ಇಲ್ಲಿನ ಮರಗಳಲ್ಲಿ ಸುರುಳಿಯಾಕಾರದ ದಾರಕ್ಕೆ ಸಿಲುಕಿ ಪ್ರಾಣ ಬಿಡುತ್ತಿವೆ.

‌ನಗರದ ಅಂಚಿನ ನಾಗರಕೆರೆ, ಶಿವಪುರ, ಬಾಶೆಟ್ಟಿಹಳ್ಳಿ,ಕೋಡಿಹಳ್ಳಿ ಕೆರೆಗಳಿಗೆ ಪ್ರತಿ ದಿನ ಬೆಳಗಾಗುತ್ತಲೇ ಆಹಾರ ಹುಡುಕಿಕೊಂಡು ಕುಟುಂಬ ಸಮೇತ ಹಾರಿ ಬರುವ ನೂರಾರು ಬಿಳಿ ಬಣ್ಣದ ಕೊಕ್ಕರೆಗಳು ವಾಸಕ್ಕೆ ಆಯ್ಕೆ ಮಾಡಿಕೊಂಡಿರುವುದ ಮಾತ್ರ ನಗರದ ನ್ಯಾಯಾಲಯ ಆವರಣದಲ್ಲಿ ಬೆಳೆದಿರುವ ಹಚ್ಚಹಸಿರಿನ ಮರಗಳ ಉದ್ಯಾನವನ್ನು.

ನ್ಯಾಯಾಲಯ ಆವರಣದಲ್ಲಿ ಬೆಳಿಗ್ಗೆ 9 ನಂತರವೇ ಜನರ ಓಡಾಟ ಆರಂಭವಾಗುತ್ತದೆ. ಸಂಜೆ 6ರ ನಂತರ ಯಾರ ಸುಳಿವೂ ಇರುವುದಿಲ್ಲ. ಹೀಗಾಗಿಯೇ ಕೊಕ್ಕರೆಗಳಿಗೆ ಈ ಜಾಗ ಪ್ರಶಸ್ತವಾಗಿದೆ. ಮರದ ಕೊಂಬೆಗಳಲ್ಲಿ ಕೊಕ್ಕರೆಗಳು ನೇತಾಡುತ್ತಾ ಪ್ರಾಣ ಕಳೆದುಕೊಳ್ಳುವ ದೃಶ್ಯ ನೋಡಿದರೆ ಎಲ್ಲರ ಮನ ಕರುಗುತ್ತದೆ.

ಕೊಕ್ಕರೆಗಳ ಸಾವಿನ ಬಗ್ಗೆ ಕಾರಣ ಹುಡುಕುತ್ತಾ ಹೊರಟ ಯುವ ಸಂಚಲನ ಅಧ್ಯಕ್ಷ ಚಿದಾನಂದ್‌ ಹೇಳುವಂತೆ, ‘ಮರದ ಕೊಂಬೆಗಳಲ್ಲಿ ನೇತಾಡುತ್ತ ಇದ್ದ ಕೊಕ್ಕರೆಗಳ ಕಾಲುಗಳಿಗೆ ಸಣ್ಣ – ಸಣ್ಣ ನೂಲಿನ ದಾರಗಳು ಸುತ್ತಿಕೊಂಡಿದ್ದವು. ಈ ದಾರಗಳಿಂದ ಬಿಡಿಸಿಕೊಂಡು ಮೇಲೆ ಹಾರಲು ಪ್ರಯತ್ನಿಸಿ ಒದ್ದಾಡಿ ಕೊಕ್ಕರೆಗಳು ಪ್ರಾಣ ಕಳೆದುಕೊಂಡಿವೆ. ಇದು ಮನುಷ್ಯ ನಿರ್ಮಿತ ದುಷ್ಕೃತ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಹಾರ ತರಲು ಕೆರೆ ಅಂಗಳಕ್ಕೆ ಹೋಗಿ ತನ್ನದಲ್ಲದ ತಪ್ಪಿಗೆ ದಾರಕ್ಕೆ ಸಿಕ್ಕಿಹಾಕಿಕೊಂಡು ಸಾಯುತ್ತಿವೆ. ಅಮ್ಮ, ಅಪ್ಪ ಕೊಕ್ಕರೆಗಳು ತರುವ ಆಹಾರಕ್ಕಾಗಿಯೇ ಕಾದು ಕುಳಿತ ಮರಿ ಕೊಕ್ಕರೆಗಳ ನರಳಾಟ, ಸಾವು – ನೋವು ಕಲ್ಪನೆಗೂ ಮೀರಿದ್ದು.

ಆಹಾರಕ್ಕಾಗಿ ನಗರದ ಅಂಚಿನ ಕೆರೆಗಳನ್ನೇ ಮುಖ್ಯವಾಗಿ ಕೊಕ್ಕರೆಗಳು ಅವಲಂಬಿಸಿವೆ. ಕೆರೆ ನೀರಿನಲ್ಲಿ ಮೀನು ಹಿಡಿಯಲು ನೈಲಾನ್‌ ಬಲೆಗಳನ್ನು ಬಿಟ್ಟಿರುತ್ತಾರೆ. ಆಹಾರ ಹುಡುಕುವ ಆತುರದಲ್ಲಿ ನೀರಿಗೆ ಇಳಿಯುವ ಕೊಕ್ಕರೆಗಳ ಕಾಲಿಗೆ ಬಲೆದಾರ ಸುತ್ತಿಕೊಳ್ಳುತ್ತದೆ. ಹೇಗೋ ಒದ್ದಾಡಿ ಅಲ್ಲಿಂದ ಬಿಡಿಸಿಕೊಂಡು ಬರುತ್ತವೆ. ಆದರೆ, ಮರದ ಸಣ್ಣ ರಂಬೆಗಳಲ್ಲಿ ಸುತ್ತಿಕೊಂಡಿರುವ ದಾರಕ್ಕೆ ಸಿಲುಕಿಕೊಂಡು ಹಾರಲು ಸಾಧ್ಯವಾಗದೆ ಪ್ರಾಣ ಬಿಡುವ ಕೊಕ್ಕರೆಗಳ ಸಾವು ನ್ಯಾಯಯೋಚಿತವೇ. ಮನುಷ್ಯ ಆತ್ಮಾವಲೋಕನ ಮಾಡಿಕೊಳ್ಳಲಿ ಎನ್ನುತ್ತಾರೆ ಚಿದಾನಂದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT