ಬುಧವಾರ, ಆಗಸ್ಟ್ 10, 2022
24 °C
ವಿಮಾನ ನಿಲ್ದಾಣದ ಸೆರಗಿನಲ್ಲಿರುವ ಅಣ್ಣೇಶ್ವರ ಗ್ರಾಮ ಪಂಚಾಯಿತಿ

ಗದ್ದುಗೆ ಏರಲು ಪ್ರಬಲ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ ಅಣ್ಣೇಶ್ವರ ಗ್ರಾಮ ಪಂಚಾಯಿತಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. 2009 ರಿಂದ 2016ರವರೆಗೆ ವಿಶ್ವದ ಅನೇಕ ರಾಷ್ಟ್ರಗಳ ಪ್ರತಿನಿಧಿಗಳು, ಕೇಂದ್ರದ ಉನ್ನತಮಟ್ಟದ ಅಧಿಕಾರಿಗಳು ಈ ಪಂಚಾಯಿತಿಗೆ ಭೇಟಿ ನೀಡಿ ಆಡಳಿತ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ. ವಿದೇಶಗಳಿಂದ ಪ್ರಕಟವಾಗುವ ದಿನಪತ್ರಿಕೆಗಳಲ್ಲೂ ಈ ಪಂಚಾಯಿತಿ ಕಾರ್ಯವೈಖರಿ ಶ್ಲಾಘಿಸಿದ ಸುದ್ದಿ ಪ್ರಕಟಗೊಂಡಿದ್ದವು.

ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸತತ ಏಳೂವರೆ ವರ್ಷ ಎಲ್ಲ ರೀತಿಯ ಕಾರ್ಯಚಟುವಟಿಕೆಯಲ್ಲಿ ಮಾದರಿ ಪಂಚಾಯಿತಿಯಾಗಿ ಗುರುತಿಸಿಕೊಂಡಿದ್ದ ಅಣ್ಣೇಶ್ವರ ಗ್ರಾಮ ಪಂಚಾಯಿತಿ ನಂತರದ ದಿನಗಳಲ್ಲಿ ತಾಲ್ಲೂಕಿನಲ್ಲಿ 11ನೇ ಸ್ಥಾನಕ್ಕೆ ಕುಸಿದಿದೆ.  

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸೆರಗಿನಲ್ಲಿರುವ ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋಟಿ ಲೆಕ್ಕದಲ್ಲಿ ವಾರ್ಷಿಕ ಜಾಹೀರಾತು ಶುಲ್ಕ ಮತ್ತು ತೆರಿಗೆ ಹಣ ವಸೂಲಿಯಾಗುತ್ತದೆ. ವಾರ್ಷಿಕ ₹25 ರಿಂದ 30ಕೋಟಿ ಸಂಪನ್ಮೂಲ ಕ್ರೂಡೀಕರಣಗೊಳ್ಳವ ಪಂಚಾಯಿತಿ ಗದ್ದುಗೆ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್‌ ಕಣ್ಣಿಟ್ಟಿವೆ. 

ಒಂದು ಬೆಚರತ್ ಗ್ರಾಮ ಹೊರತುಪಡಿಸಿ 9 ಗ್ರಾಮಗಳ ವ್ಯಾಪ್ತಿಯಲ್ಲಿ 1849 ಕುಟುಂಬಗಳಿವೆ. 8793 ಜನಸಂಖ್ಯೆ ಹೊಂದಿರುವ ಪಂಚಾಯಿತಿ 2009-10ನೇ ಸಾಲಿನಲ್ಲಿ ಭಾರತ ಸರ್ಕಾರದ ನಿರ್ಮಲ್ ಗ್ರಾಮ ಪ್ರಶಸ್ತಿ, 2010ರಲ್ಲಿ ನೈರ್ಮಲ್ಯ ಮತ್ತು ರಜಿತ ನೈಮರ್ಲ್ಯ, 2013 ಗಾಂಧಿ ಗ್ರಾಮ ಪುರಸ್ಕಾರ ಮತ್ತು ಡಾ.ಚೌಡಯ್ಯ ಪ್ರತಿಷ್ಠಾನ ಪ್ರಶಸ್ತಿ, 2016-17ನೇ ಸಾಲಿನಲ್ಲಿ ರಾಜ್ಯ ಪರಿಸರ ಪ್ರಶಸ್ತಿ ಮತ್ತು 2016-17ನೇ ಸಾಲಿನಲ್ಲಿ ಬಯಲು ಬರ್ಹಿದೆಸೆ ಮುಕ್ತ ಪಂಚಾಯಿತಿ ಪ್ರಶಸ್ತಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಸಂಪನ್ಮೂಲವನ್ನೇ ಅತಿಹೆಚ್ಚು ಮಾನದಂಡವನ್ನಾಗಿಸಿಕೊಂಡಿರುವ ಪಂಚಾಯಿತಿ ಗದ್ದುಗೆ ಏರಲು ಸದಸ್ಯರು ಪಣ ತೊಟ್ಟಿದ್ದಾರೆ.

ಪಂಚಾಯಿತಿಯ ಒಟ್ಟು ಸ್ಥಾನ 19 ನಿಗದಿಯಾಗಿದೆ. ಕಳೆದ 5 ವರ್ಷಗಳ ಪಂಚಾಯಿತಿ ಆಡಳಿತ ಜೆಡಿಎಸ್ ಬೆಂಬಲಿಗರ ತೆಕ್ಕೆಯಲ್ಲಿತ್ತು. ಅದಕ್ಕಿಂತ ಮೊದಲು ಕಾಂಗ್ರೆಸ್ ಬೆಂಬಲಿಗರ ವಶದಲ್ಲಿತ್ತು. ಈ ಬಾರಿ ಜೆಡಿಎಸ್ ಬೆಂಬಲಿಗರು ಮರಳಿ ವಶಕ್ಕೆ ಪಡೆಯುತ್ತಾರೋ ಅಥವಾ ಕಾಂಗ್ರೆಸ್ ತನ್ನ ಪ್ರಭುತ್ವ ಸಾಧಿಸಲಿದೆಯೇ ಎಂಬುದು ಕಾದು ನೋಡಬೇಕಿದೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು