ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿಗೆ ಬಂದ ಕಾಡೆಮ್ಮೆ ಜೋಡಿ

Last Updated 30 ನವೆಂಬರ್ 2019, 14:09 IST
ಅಕ್ಷರ ಗಾತ್ರ

ಆನೇಕಲ್: ಕಾಡಿನಿಂದ ಹೊರ ಬಂದಿರುವ ಕಾಡೆಮ್ಮೆ ಜೋಡಿಯೊಂದು ತಾಲ್ಲೂಕಿನ ಚಂದಾಪುರ ಸಮೀಪದ ತಿರುಮಗೊಂಡನಹಳ್ಳಿಯ ಕಾರ್ಲಾರ್‌ ನಗರ ಬಡಾವಣೆಯಲ್ಲಿ ಠಿಕಾಣಿ ಹೂಡಿವೆ. ಕಾಡೆಮ್ಮೆಗಳನ್ನು ಮರಳಿ ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ನಡೆಸಿದ್ದಾರೆ.

ಅಂದಾಜು ಮೂರು ವರ್ಷದ ಒಂದು ಗಂಡು ಮತ್ತು ಹೆಣ್ಣು ಕಾಡೆಮ್ಮೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇರುವ ಬಡಾವಣೆಯಲ್ಲಿ ಎರಡು ಮೂರು ದಿನಗಳಿಂದಲೂ ಠಿಕಾಣಿ ಹೂಡಿದ್ದು ಬಡಾವಣೆಯಲ್ಲಿರುವ ಮೇವು ತಿಂದು ತಿರುಗಾಡಿಕೊಂಡಿವೆ. ಕಾಡೆಮ್ಮೆಗಳು ಗ್ರಾಮದತ್ತ ನುಗ್ಗಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರದಿಂದಲೂ ಬಡಾವಣೆ ಸುತ್ತ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದು ಕಾಡೆಮ್ಮೆಗಳಿಗೆ ಮೇವು ನೀಡಿ ಅವುಗಳು ಹೊರ ಹೋಗದಂತೆ ತಡೆದಿದ್ದಾರೆ. ಜನರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ.

ಕಾಡೆಮ್ಮೆಗಳು ಸಂಕೋಚದ ಪ್ರಾಣಿಗಳು. ಕಾಡಿನಿಂದ ತಪ್ಪಿಸಿಕೊಂಡು ಬಂದಿರುವ ಮಾರ್ಗದ ಗುರುತು ಕಾಣುತ್ತಿಲ್ಲ. ಬನ್ನೇರುಘಟ್ಟ ಅಥವಾ ತಮಿಳುನಾಡಿನ ಅರಣ್ಯದಿಂದ ಬಂದಿರುವ ಸಾಧ್ಯತೆಗಳಿವೆ. ಸಗಣಿ, ಗಂಜಲ ಗಮನಿಸಿದರೆ ಎರಡು, ಮೂರು ದಿನಗಳಿಂದ ಠಿಕಾಣಿ ಹೂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾರ್ಯಾಚರಣೆ: ಕಾಡೆಮ್ಮೆಗಳನ್ನು ವಶಕ್ಕೆ ಪಡೆಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು ಕಾಡೆಮ್ಮೆಗಳಿಗೆ ಅರವಳಿಕೆ ಚುಚ್ಚು ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಅವುಗಳನ್ನು ಕ್ರೇನ್‌ ಮೂಲಕ ಲಾರಿಗೆ ಎತ್ತುವ ಕಾರ್ಯ ಮಾಡಬೇಕಿದ್ದು ಬನ್ನೇರುಘಟ್ಟ ತಜ್ಞ ಪಶುವೈದ್ಯರು ಅರಿವಳಿಕೆ ಚುಚ್ಚು ಮದ್ದು ನೀಡಿ ರಾತ್ರಿ 7 ಗಂಟೆ ಸುಮಾರಿಗೆ ಗಂಡು ಕಾಡೆಮ್ಮೆಯನ್ನು ಲಾರಿಗೆ ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದು ಕಾಡೆಮ್ಮೆಯನ್ನು ವಶಕ್ಕೆ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಅರಣ್ಯ ಇಲಾಖೆ ಮಾಹಿತಿ ಪ್ರಕಾರ ಕತ್ತಲಾದ್ದರಿಂದ ಕಾರ್ಯಾಚರಣೆ ನಿಲ್ಲಿಸಲಾಗಿದ್ದು ಮತ್ತೊಂದು ಕಾಡೆಮ್ಮೆಯನ್ನು ಭಾನುವಾರ ರಕ್ಷಿಸುವುದಾಗಿ ತಿಳಿಸಿದ್ದಾರೆ.

ಆನೆಗಳು ಕಾಡಿನಿಂದ ಹೊರಬರುವುದು ಸಾಮಾನ್ಯ. ಆದರೆ ಕಾಡೆಮ್ಮೆಗಳು ಈ ರೀತಿ ಕಾಡಿನಿಂದ ಹೊರ ಬಂದಿರುವುದು ಈ ಭಾಗದಲ್ಲಿ ಇದೇ ಮೊದಲು. ಎಲ್ಲಿಂದ ಬಂದವು ಎನ್ನುವ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಮಾಹಿತಿ ಗೊತ್ತಾಗುವುದು ಎಂದುವಲಯ ಅರಣ್ಯಾಧಿಕಾರಿ ಕೃಷ್ಣ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT