ಶನಿವಾರ, ಅಕ್ಟೋಬರ್ 1, 2022
25 °C

ಸಾಮರಸ್ಯ ಸಾರುವ ಮೊಹರಂ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಪಟ್ಟಣದಲ್ಲಿ ಪ್ರತಿವರ್ಷ ನಡೆಯುವ ಮೊಹರಂ ಹಬ್ಬ ಸಾಮರಸ್ಯ ಮತ್ತು ಭಾವೈಕ್ಯದ ಸಂಕೇತವಾಗಿದೆ. ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯದವರು ಸಂಭ್ರಮದಿಂದ ಆಚರಿಸುತ್ತಾರೆ. 

ಪಟ್ಟಣದಲ್ಲಿ ಮೊಹರಂನ ಮೊದಲ ದಿನದಿಂದ ಪ್ರಾರಂಭಗೊಂಡು ಕೊನೆಯ ದಿನದ (10 ದಿನ) ವರೆಗೆ ಸಡಗರದಿಂದ ಆಚರಿಸಲಾಗುತ್ತಿದೆ. ಪಟ್ಟಣದ ಅನೇಕ ಕಡೆ ಮಂಟಪ ಸ್ಥಾಪಿಸಿ ತೇಜಿಯಾ (ಹಸ್ತ)ಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತದೆ. ಈ ಮೆರವಣಿಗೆಯಲ್ಲಿ ಬರುವ ತೇಜಿಯಾ (ಹಸ್ತ)ಗಳಿಗೆ ಪ್ರತಿಯೊಬ್ಬರು ಶ್ರದ್ಧಾಭಕ್ತಿಯಿಂದ ಸಕ್ಕರೆ, ಕಡ್ಲೆಪಪ್ಪು ಅನ್ನು ಪೂಜೆಗೆ
ನೀಡುತ್ತಾರೆ.

8 ಮತ್ತು 9ನೇ ದಿನ ಪ್ರಮುಖ ಮೆರವಣಿಗೆ ಏರ್ಪಡಿಸಲಾಗುತ್ತದೆ. 10ನೇ ದಿನ ಪಟ್ಟಣದಲ್ಲಿ ಜಾತ್ರೆ ನಡೆಯುತ್ತದೆ. ಹರಕೆ ಹೊತ್ತವರು ಮತಭೇದವಿಲ್ಲದೆ ಹರಕೆ ತೀರಿಸುತ್ತಾರೆ. ಮದುವೆಯಾಗಿ ಪರ ಊರುಗಳಿಗೆ ಹೋದ ಹೆಣ್ಣುಮಕ್ಕಳು ತವರುಮನೆಗೆ ಬರುತ್ತಾರೆ. ಎಲ್ಲಾ ಮನೆಗಳು ನೆಂಟರಿಷ್ಟರು, ಮಕ್ಕಳಿಂದ ತುಂಬಿ ತುಳುಕಲಿದ್ದು, ಮೂರ್ನಾಲ್ಕು ದಿನಗಳು ಪಟ್ಟಣದಲ್ಲಿ ಸಂಭ್ರಮದ ವಾತಾವರಣ ಏರ್ಪಡುತ್ತದೆ ಎನ್ನುತ್ತಾರೆ ಸ್ಥಳೀಯರಾದ ಸೈಯದ್ ಮಹಬೂಬ್.

ಮಾಯವಾದ ಹುಲಿ ವೇಷ:  ಹಬ್ಬದ ಕೊನೆಯ ನಾಲ್ಕು ದಿನಗಳಲ್ಲಿ ಹುಲಿ ವೇಷ, ಇಂಗ್ಲೆಂಡ್ ಲೇಡಿ ವೇಷ ಸೇರಿದಂತೆ ಇತರೇ ವೇಷಧಾರಿಗಳು ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಿದ್ದರು. ಕಳೆದ ಮೂರು ದಶಕಗಳಿಂದ ಆಧುನಿಕತೆ ಹಾಗೂ ಪ್ರತಿಷ್ಠೆಗೆ ಒಳಗಾಗಿ ಹುಲಿವೇಷ ಮಾಯವಾಗಿದೆ.

ಇಂಗ್ಲೆಂಡ್ ಲೇಡಿ ವೇಷಧಾರಿ ಹಾಗೂ ಮಹಿಳೆ ವೇಷ ಧರಿಸಿ ಮನರಂಜನೆ ನೀಡುತ್ತಿದ್ದ ವ್ಯಕ್ತಿಗಳು ಮರಣ ಹೊಂದಿದ ನಂತರ ಪರಂಪರೆಯ ಕೊಂಡಿ ಕಳಚಿದೆ. ಸೂಲಿಬೆಲೆಯಲ್ಲಿ ನಡೆಯುತ್ತಿದ್ದ ಹಬ್ಬಕ್ಕೆ ಮೆರುಗು ನೀಡುತ್ತಿದ್ದ ಕಲೆಗಳು ನಶಿಸಿರುವುದು ಹಲವರಲ್ಲಿ ನಿರಾಸೆ ಮೂಡಿಸಿದೆ.

‘ಗ್ರಾಮದಲ್ಲಿ ಹಬ್ಬವನ್ನು ಧರ್ಮತೀತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನಮ್ಮ ಮುತ್ತಾತ, ತಾತ ಹಾಗೂ ತಂದೆಯವರು ಪ್ರತಿವರ್ಷ ಅದ್ದೂರಿಯಾಗಿ ಹಬ್ಬದಲ್ಲಿ ಪಾಲ್ಗೊಂಡು ಆಚರಿಸುತ್ತಿದ್ದರು. ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ನಮ್ಮ ಊರು ಭಾವೈಕ್ಯದ ಕೊಂಡಿಯಾಗಿದೆ’ ಎನ್ನುತ್ತಾರೆ ಗ್ರಾ.ಪಂ. ಉಪಾಧ್ಯಕ್ಷ ಶಿವರುದ್ರಪ್ಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು